ADVERTISEMENT

ಪಡಿತರ ಅಕ್ಕಿ, ಗೋಧಿ ಹುಳು ಪಾಲು

ಆರೋಪಿಗಳಿಂದ ಜಪ್ತಿ ಮಾಡಿದ್ದ ನೂರಾರು ಮೂಟೆ ಪಡಿತರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 16:45 IST
Last Updated 4 ಜನವರಿ 2019, 16:45 IST
ಕೆ.ಆರ್.ನಗರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮಳಿಗೆಯಲ್ಲಿ ಸಂಗ್ರಹಿಸಿ ಇಡಲಾದ ಅಕ್ಕಿ ಮೂಟೆ. ಆಹಾರ ಇಲಾಖೆ ಅಧಿಕಾರಿ ಹನುಮಂತೇಗೌಡ, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರೇಗೌಡ ಇದ್ದಾರೆ.
ಕೆ.ಆರ್.ನಗರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮಳಿಗೆಯಲ್ಲಿ ಸಂಗ್ರಹಿಸಿ ಇಡಲಾದ ಅಕ್ಕಿ ಮೂಟೆ. ಆಹಾರ ಇಲಾಖೆ ಅಧಿಕಾರಿ ಹನುಮಂತೇಗೌಡ, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರೇಗೌಡ ಇದ್ದಾರೆ.   

ಕೆ.ಆರ್.ನಗರ: ಅಕ್ರಮ ದಾಸ್ತಾನು ಆರೋಪದ ಮೇಲೆ ವಿವಿಧ ಪ್ರಕರಣಗಳಲ್ಲಿ 2014ರಲ್ಲಿ ಜಪ್ತಿ ಮಾಡಿದ್ದ ನೂರಾರು ಮೂಟೆ ಪಡಿತರ ಅಕ್ಕಿ, ಗೋಧಿಗೆ ಹುಳು ಹಿಡಿದಿದೆ. ದನಗಳಿಗೆ ಬಳಸಲು ಯೋಗ್ಯವಲ್ಲದ ಸ್ಥಿತಿಯಲ್ಲಿದೆ.

2014ರಲ್ಲಿ ತಹಶೀಲ್ದಾರ್ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ 240 ಚೀಲ ಗೋಧಿ, 1034 ಚೀಲ ಅಕ್ಕಿ ವಶಕ್ಕೆ ಪಡೆದಿದ್ದರು.

ಹೀಗೆ ವಶಕ್ಕೆ ಪಡೆಯಲಾಗಿದ್ದ ಪಡಿತರವನ್ನು ರಕ್ಷಿಸಿಡಲು ಇಲ್ಲಿನ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಶಕ್ಕೆ ನೀಡಲಾಗಿತ್ತು.

ADVERTISEMENT

ಇದರಲ್ಲಿ ಕೆ.ಆರ್.ನಗರದ ಕೆಎಫ್‌ಸಿಎಸ್‌ಗೆ 94 ಕ್ವಿಂಟಲ್‌ ಅಕ್ಕಿ, ಹುಣಸೂರಿನ ಟಿಎಪಿಸಿಎಂಎಸ್‌ಗೆ 93 ಕ್ವಿಂಟಲ್‌ ಅಕ್ಕಿ ಬಿಡುಗಡೆ ಮಾಡಲಾಗಿತ್ತು. ಉಳಿದ ಪಡಿತರವನ್ನು ಸಹಕಾರ ಸಂಘದ ಮಳಿಗೆಗಳಲ್ಲಿ ದಾಸ್ತಾನಿಡಲಾಗಿತ್ತು.

ಸಂಗ್ರಹಿಸಿ ಇಡಲಾದ ಅಕ್ಕಿ, ಗೋಧಿ ರಕ್ಷಣೆಗೆ ಕ್ರಮವಹಿಸದ ಕಾರಣ ಕಂಡುಹಿಡಿದಿದೆ. ಇದರ ಜೊತೆಗೆ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಗೆ ನೀಡಲಾದ 9 ಕ್ವಿಂಟಲ್ ಹೆಸರುಕಾಳಿಗೂ ಹುಳುಹಿಡಿದಿದೆ.

‘ದಾಸ್ತಾನಿಡಲು ಕೋರಿದ್ದ ಪಡಿತರ ಅಕ್ಕಿ, ಗೋಧಿಗೆ ಹುಳು ಹಿಡಿಯದಂತೆ ಔಷಧ ಸಿಂಪಡಿಸಲಾಗಿತ್ತು. ಆದರೂ ಸಹ ಪಡಿತರ ಹಾಳಾಗಿದೆ. ಈ ಬಗ್ಗೆ ತಹಶೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರೇಗೌಡ ತಿಳಿಸಿದ್ದಾರೆ.

‘ಅಲ್ಲದೇ ತಮ್ಮ ವಶಕ್ಕೆ ನೀಡಿದ್ದ ಪಡಿತರ ಅಕ್ಕಿ, ಗೋಧಿ ಮನುಷ್ಯರು ತಿನ್ನಲು ಯೋಗ್ಯವಾಗಿ ಉಳಿದಿಲ್ಲ ಎಂದು ಮುಖ್ಯ ಆಹಾರ ವಿಶ್ಲೇಷಕರು ವರದಿ ನೀಡಿದ್ದಾರೆ’ ಎಂದು ಅವರು ಹೇಳಿದರು.

**

ಪಡಿತರ ಹಾಳುಮಾಡಿರುವುದು ಸಹಿಸುವುದಿಲ್ಲ, ಆಹಾರ ಇಲಾಖೆ ಅಧಿಕಾರಿ ಮತ್ತು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರೇಗೌಡ ಅವರಿಗೆ ನೋಟಿಸ್‌ ನೀಡಲಾಗುವುದು.
-ನಾಗಪ್ರಶಾಂತ್, ಪ್ರಭಾರ ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.