ಮೈಸೂರು: ‘ಎಪಿಎಂಸಿಗಳ ಆಸ್ತಿ ಒತ್ತುವರಿಯಾಗಿದ್ದರೆ, ತೆರವುಗೊಳಿಸಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಕಾರ್ಯದರ್ಶಿಗಳಿಗೆ ತಾಕೀತು ಮಾಡಿದರು.
ಇಲ್ಲಿ ಬುಧವಾರ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಎಪಿಎಂಸಿಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ‘ಯಾವ ಎಪಿಎಂಸಿಗಳ ಎಷ್ಟು ಭೂಮಿ ಒತ್ತುವರಿ ಆಗಿದೆ ಎಂಬ ಮಾಹಿತಿ ಪಡೆದು, ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
‘ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದರೆ ತಕ್ಷಣ ತೆರವಿಗೆ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದ ಒತ್ತುವರಿ ಆಗಿದ್ದರೆ ಸಂಬಂಧಿಸಿದ ಇಲಾಖೆಯಿಂದ ಪರಿಹಾರಕ್ಕ ತಕ್ಷಣ ಪತ್ರ ಬರೆಯಬೇಕು’ ಎಂದು ನಿರ್ದೇಶನ ನೀಡಿದರು.
‘ರಾಷ್ಟೀಯ ಹೆದ್ದಾರಿ ನಿರ್ಮಾಣಕ್ಕೆ ನಂಜನಗೂಡು ಎಪಿಎಂಸಿಯ 12 ಗುಂಟೆ ಭೂಮಿ ಬಳಕೆ ಮಾಡಿಕೊಂಡಿದ್ದರೂ ಪರಿಹಾರ ಪಡೆಯಲು ಇದುವರೆಗೂ ಪ್ರಯತ್ನಿಸಿಲ್ಲವೇಕೆ?’ ಎಂದು ತರಾಟೆಗೆ ತೆಗೆದುಕೊಂಡರು.
₹ 22 ಲಕ್ಷ ಬಾಡಿಗೆ ಬಾಕಿ: ‘ತಿ.ನರಸೀಪುರದಲ್ಲಿ ಎಪಿಎಂಸಿ ಕಟ್ಟಡವನ್ನು ನಾಡಕಚೇರಿಗೆ ಬಾಡಿಗೆ ನೀಡಲಾಗಿದ್ದು, ₹ 22 ಲಕ್ಷ ಬಾಡಿಗೆ ಬರಬೇಕಾಗಿದೆ. ಪಾವತಿಗೆ ಕಂದಾಯ ಸಚಿವರಿಗೆ ಪತ್ರ ಬರೆಯಲಾಗುವುದು’ ಎಂದರು.
‘ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ವ್ಯವಹಾರ ಮಾಡುವುದು ಅಧಿಕಾರಿಗಳ ಜವಾಬ್ದಾರಿ. ಯಾವುದೇ ಉತ್ಪನ್ನದ ಬೆಲೆ ಕುಸಿದಾಗ ಸರ್ಕಾರ ಬೆಲೆ ಸ್ಥಿರತೆಗೆ ಮಧ್ಯಪ್ರವೇಶಿಸಬೇಕು. ಆದ್ದರಿಂದ ಅಧಿಕಾರಿಗಳು ಕೃಷಿ ಉತ್ಪನ್ನಗಳ ಬೆಲೆ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದು ಹೇಳಿದರು.
ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಗಿ, ಭತ್ತ ಖರೀದಿ ಪ್ರಮಾಣ ಮತ್ತು ಲೋಪದೋಷಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ‘ಎಪಿಎಂಸಿ ಕಾರ್ಯದರ್ಶಿಗಳು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಮಾಹಿತಿ ಸಂಗ್ರಹಿಸಬೇಕು’ ಎಂದರು.
‘ಜಿಲ್ಲೆಯಲ್ಲಿ ಎಷ್ಟು ಕೃಷಿ ಭೂಮಿ ಇದೆ, ಯಾವ ಬೆಳೆಯನ್ನು ಎಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಹಾಗೂ ಇಳುವರಿ ಪ್ರಮಾಣ ಎಷ್ಟು ಎಂಬ ಮಾಹಿತಿ ಪ್ರತಿ ಎಪಿಎಂಸಿಗಳಲ್ಲಿ ಇರಬೇಕು. ಎಪಿಎಂಸಿಗೆ ಬರುವ ಕೃಷಿ ಉತ್ಪನ್ನಗಳ ಆವಕ ಎಷ್ಟು? ಎಷ್ಟು ಪ್ರಮಾಣದಲ್ಲಿ ಮಾರುಕಟ್ಟೆಯಿಂದ ಹೊರಗೆ ವಹಿವಾಟು ನಡೆಯುತ್ತಿದೆ ಎಂಬ ಬಗ್ಗೆ ತಿಳಿದುಕೊಂಡು ಎಪಿಎಂಸಿ ಗಳಲ್ಲೇ ವಹಿವಾಟು ನಡೆಯುವಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಭೌಗೋಳಿಕ ಮಾಹಿತಿ ನಿಮ್ಮ ಬಳಿ ಇರಬೇಕು’ ಎಂದು ಕಾರ್ಯದರ್ಶಿಗಳಿಗೆ ಸೂಚಿಸಿದರು.
ವೇತನ ಕಡಿತ ಮಾಡಬೇಕಾಗುತ್ತದೆ: ‘ಹಲವರು ಟ್ರೇಡ್ ಲೈಸೆನ್ಸ್ ಹೊಂದಿದ್ದರೂ ಖರೀದಿ ಚಟುವಟಿಕೆ ಗಳಲ್ಲಿ ಭಾಗವಹಿಸುತ್ತಿಲ್ಲ. ಐದು ವರ್ಷಗಳಿಂದ ಖರೀದಿ ಚಟುವಟಿಕೆ ಯಲ್ಲಿ ಭಾಗವಹಿಸದವರ ಲೈಸೆನ್ಸ್ ರದ್ದುಪಡಿಸಬೇಕು. ವರ್ತಕರು ಎಪಿಎಂಸಿ ಗೋದಾಮುಗಳ ಬಾಕಿ ಉಳಿಸಿಕೊಂಡಿದ್ದರೆ ವಸೂಲು ಮಾಡ ಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳ ವೇತನದಲ್ಲಿ ಕಡಿತ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ಆರ್ಥಿಕ ಅಪರಾಧಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಎಲ್ಲ ಎಪಿಎಂಸಿಗಳ ಆಡಿಟ್ ಮಾಡಿಸಿ ದುರ್ಬಳಕೆ ಕಂಡುಬಂದರೆ ಸಂಬಂಧಪಟ್ಟವರ ಮೇಲೆ ದೂರು ದಾಖಲಿಸಬೇಕು. ಎಪಿಎಂಸಿಗೆ ಬರಬೇಕಾದ ಬಾಕಿ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.
ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ, ಹೆಚ್ಚುವರಿ ನಿರ್ದೇಶಕ ನಜೀಬುಲ್ಲಾಖಾನ್, ಎಸ್‌ಇ ರಘುನಂದನ್, ಮೈಸೂರಿನ 8 ಹಾಗೂ ಚಾಮರಾಜನಗರ ಜಿಲ್ಲೆಯ 4 ಎಪಿಎಂಸಿಗಳ ಅಧಿಕಾರಿಗಳು ಭಾಗವಹಿಸಿದ್ದರು.
ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ, ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ವೀಣಾ ಉಪಸ್ಥಿತರಿದ್ದರು.
ಮಂಡ್ಯ ಸಕ್ಕರೆ ಕಾರ್ಖಾನೆಗೆ 2.5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಕೊಟ್ಟಿದ್ದರೂ ಗುರಿ ತಲುಪಲಿಲ್ಲವೇಕೆ ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಪ್ರಶ್ನಿಸಿದರು. ‘ಹೋದ ನವಂಬರ್‌ನಲ್ಲೇ ಅಲ್ಲಿ ಕಬ್ಬು ನುರಿಸುವುದನ್ನು ನಿಲ್ಲಿಸಲಾಗಿದೆ. ಆದರೆ ಸುತ್ತಮುತ್ತಲಿನ ಕಾರ್ಖಾನೆಗಳು ನಂತರವೂ ಕಬ್ಬು ನುರಿಸಿವೆ. ಮುಂದಿನ ಹಂಗಾಮಿನಲ್ಲಿ ನಿಗದಿತ ಗುರಿ ತಲುಪಲು ಕ್ರಮ ವಹಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.