ADVERTISEMENT

ಮೈಸೂರು | ಅವಧೂತ ದತ್ತಪೀಠ: ಮಹಾಯಜ್ಞ, ಸಹಸ್ರ ಚಂಡೀಯಾಗ ಸಂಪನ್ನ

ಅವಧೂತ ದತ್ತಪೀಠದಲ್ಲಿ ಲೋಕ ಕಲ್ಯಾಕ್ಕಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 14:39 IST
Last Updated 15 ಜೂನ್ 2025, 14:39 IST
ಮೈಸೂರಿನ ಅವಧೂತ ದತ್ತಪೀಠದಲ್ಲಿ ಭಾನುವಾರ ನಡೆದ ಸಹಸ್ರ ಚಂಡೀಯಾಗದ ಪೂರ್ಣಾಹುತಿಯನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೆರವೇರಿಸಿದರು
ಮೈಸೂರಿನ ಅವಧೂತ ದತ್ತಪೀಠದಲ್ಲಿ ಭಾನುವಾರ ನಡೆದ ಸಹಸ್ರ ಚಂಡೀಯಾಗದ ಪೂರ್ಣಾಹುತಿಯನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೆರವೇರಿಸಿದರು   

ಮೈಸೂರು: ಇಲ್ಲಿನ ಊಟಿ ರಸ್ತೆಯಲ್ಲಿರುವ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ಜೂನ್ 6ರಿಂದ ಹಮ್ಮಿಕೊಂಡಿದ್ದ ‘ವನ ದುರ್ಗಾ ವೃಕ್ಷ ಶಾಂತಿ ಮಹಾಯಜ್ಞ’ ಮತ್ತು ‘ಸಹಸ್ರ ಚಂಡೀಯಾಗ’ ಭಾನುವಾರ ಸಂಪನ್ನಗೊಂಡಿತು.

ಪೀಠಾಧಿಪತಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ವೈದಿಕ ವಿಧಿಗಳು ಮತ್ತು ಪರಿಸರ ಸಮತೋಲನ ಕಾಪಾಡುವ ಉದ್ದೇಶದಿಂದ ನಿರಂತರವಾಗಿ ಈ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಲಾಯಿತು.

ವಿಶ್ವ ರಕ್ಷಣೆ, ಸಮೃದ್ಧಿ ಹಾಗೂ ಸಾಮರಸ್ಯಕ್ಕಾಗಿ ಮತ್ತು ಇಡೀ ವಿಶ್ವದಲ್ಲಿ ಶಾಂತಿ ನೆಲೆಸಲೆಂಬ ಸಂಕಲ್ಪದೊಂದಿಗೆ ಗಣಪತಿ ಶ್ರೀಗಳು ಸಹಸ್ರ ಚಂಡೀಯಾಗ ಪ್ರಾರಂಭಿಸಿದ್ದರು. ಎಲ್ಲ ಧಾರ್ಮಿಕ ಕಾರ್ಯಕ್ರಮಗಳೂ ಸಾಂಗವಾಗಿ ನಡೆದವು.

ADVERTISEMENT

ಗಣಪತಿ ಶ್ರೀಗಳಿಗೆ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಾಥ್ ನೀಡಿದರು. ಎಲ್ಲಾ ಪೂಜಾ ಕೈಂಕರ್ಯಗಳನ್ನೂ ನೆರವೇರಿಸಿದರು. ಪರಿಸರ ಸಮತೋಲನ ಸೂಚಕವಾಗಿಯೇ ಈ ವನದುರ್ಗ ವೃಕ್ಷ ಮಹಾಯಜ್ಞವನ್ನು ಕೈಗೊಂಡ ಗಣಪತಿ ಶ್ರೀಗಳು 8ಸಾವಿರ ಬೋನ್ಸಾಯ್ ವೃಕ್ಷಗಳನ್ನು ಪೂಜಿಸಿ ಸಮರ್ಪಿಸಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಬೋನ್ಸಾಯ್ ವೃಕ್ಷಗಳನ್ನು ಹೊಂದಿರುವ ಖ್ಯಾತಿಯೂ ಅವಧೂತ ದತ್ತ ಪೀಠಕ್ಕೆ ಸಂದಿದೆ. ಹಾಗಾಗಿ ಗಿನ್ನಿಸ್‌ ದಾಖಲೆಯೂ ಆಯಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಚಿವ ಆರ್‌.ವಿ. ದೇಶಪಾಂಡೆ, ಶಾಸಕ ಟಿ.ಎಸ್. ಶ್ರೀವತ್ಸ ಮೊದಲಾದ ಗಣ್ಯರು ಕೂಡ ಭಾಗವಹಿಸಿದ್ದರು.

ಭಾನುವಾರ ಬೆಳಿಗ್ಗೆ ಗಣಪತಿ ಶ್ರೀಗಳು ಮತ್ತು ಕಿರಿಯ ಶ್ರೀ ವಿಜಯಾನಂದ ಸಹಸ್ರ ಚಂಡೀಯಾಗದ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದರು. ಆಶ್ರಮದ ಆವರಣದಲ್ಲಿ ಈ ಮಹಾಯಾಗಕ್ಕಾಗಿ ನಿರ್ಮಿಸಿದ್ದ 11 ಹೋಮ ಕುಂಡಗಳ ಬಳಿಯೂ ಪೂರ್ಣಹುತಿಯನ್ನು ನೆರವೇರಿಸಿದರು. ತದನಂತರ ಪ್ರಧಾನ ಹೋಮಕುಂಡದಲ್ಲಿ ಅತಿ ಪ್ರಮುಖವಾದ ಪೂರ್ಣಾಹುತಿಯನ್ನು ನೆರವೇರಿಸಿ ಯಾಗವನ್ನು ಸಂಪನ್ನಗೊಳಿಸಿದರು. ನಂತರ ಸಪ್ತ ಋಷಿ ಸರೋವರದಲ್ಲಿ ದೇವಿಯನ್ನು ಉತ್ಸವದಲ್ಲಿ ಕೊಂಡೊಯ್ದು ಅವಭೃತ ಸ್ನಾನದೊಂದಿಗೆ ಸಂಪನ್ನಗೊಳಿಸಲಾಯಿತು.

ಈ ವೇಳೆ, ಪಾಲ್ಗೊಂಡಿದ್ದ ನೂರಾರು ಭಕ್ತರು ಲಲಿತಾ ಸಹಸ್ರನಾಮ ಮತ್ತು ಸೌಂದರ್ಯ ಲಹರಿಯನ್ನು ಪಠಿಸಿದರು. ಆಶ್ರಮದ ಆವರಣದಲ್ಲಿ ಸಂಜೆ ವನದುರ್ಗ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ದೇಶದ ಹಲವು ರಾಜ್ಯಗಳಿಂದ ಮತ್ತು ವಿದೇಶಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವೃಕ್ಷ ಶಾಂತಿ ಮಹಾ ಯಜ್ಞ ಮತ್ತು ಸಹಸ್ರ ಚಂಡೀಯಾಗವನ್ನು ಕಣ್ತುಂಬಿಕೊಂಡು ಪುನೀತಭಾವ ತಳೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.