ಮೈಸೂರು: ಪಾಕಿಸ್ತಾನದ ಮೇಲೆ ದೇಶದ ಸೈನಿಕರು ನಡೆಸಿದ ‘ಆಪರೇಷನ್ ಸಿಂಧೂರ’ ದಾಳಿಯ ಯಶಸ್ಸನ್ನು ಶ್ಲಾಘಿಸುವ ಮೂಲಕ, ರಕ್ತ ದಾನದ ಕೊಡುಗೆ ನೀಡುವ ಕಾರ್ಯಕ್ರಮ ಇಲ್ಲಿ ನಡೆಯಿತು.
ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಲ್ಯಾಣಗಿರಿಯ ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ಶನಿವಾರ ಆಯೋಜಿಸಿದ್ದ ಶಿಬಿರದಲ್ಲಿ ಸಾರ್ವಜನಿಕರು, ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸ್ವಯಂಪ್ರೇರಿತವಾಗಿ ರಕ್ತ ದಾನ ಮಾಡಿದರು. ಇದರೊಂದಿಗೆ, ‘ನಾವು ನಮ್ಮ ಸೇನೆಯೊಂದಿಗೆ ನಿಲ್ಲುತ್ತೇವೆ’ ಎಂಬ ಸಂದೇಶವನ್ನು ರವಾನಿಸಿದರು. ಸಂಜೆವರೆಗೆ ಒಟ್ಟು 501 ಯುನಿಟ್ ರಕ್ತ ಸಂಗ್ರಹವಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿಎಚ್‌ಒ ಕಚೇರಿ, ಕೆ.ಆರ್. ಆಸ್ಪತ್ರೆಯ ರಕ್ತನಿಧಿ ಕೇಂದ್ರ, ಜೀವಧಾರ ರಕ್ತನಿಧಿ ಕೇಂದ್ರ, ಮಾಜಿ ಸೈನಿಕರ ಸಂಘ ಮೊದಲಾದವುಗಳ ಸಹಯೋಗದಲ್ಲಿ ‘ಸೈನಿಕರ ಆತ್ಮಸ್ಥೈರ್ಯ ತುಂಬಲು ಹಾಗೂ ಸಾರ್ವಜನಿಕರು ಸೇನೆಯೊಂದಿಗೆ ಎಂಬ ಅಂಶವನ್ನು ಸಾರಲು’ ಶಿಬಿರ ನಡೆಸಲಾಯಿತು. ರಕ್ತ ನೀಡಿದವರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಶಿಬಿರದ ನೇತೃತ್ವ ವಹಿಸಿದ್ದ ಶಾಸಕ ತನ್ವೀರ್ ಸೇಠ್ ಸ್ವತಃ ರಕ್ತ ದಾನ ಮಾಡಿ ಚಾಲನೆ ನೀಡಿದರು.
ಬೆಂಬಲ ನೀಡಿದೆವು: ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತನ್ವೀರ್, ‘ಈಚೆಗೆ ಪಹಲ್ಗಾಮ್‌ನಲ್ಲಿ ನಡೆದ ಘಟನೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ನೆಲದ ಮೇಲಿನ ಸ್ವರ್ಗವೆಂದು ಭಾವಿಸಿ ದೇಶದ ವಿವಿಧೆಡೆಯಿಂದ ಕಾಶ್ಮೀರಕ್ಕೆ ಹೋಗಿದ್ದ ಪ್ರವಾಸಿಗರಿಗೆ ಕಾದಿದ್ದದ್ದು ಭಯೋತ್ಪಾದಕರ ಗುಂಡು. ಆ ಘಟನೆಯನ್ನು ನಾವೆಲ್ಲರೂ ತೀವ್ರವಾಗಿ ಖಂಡಿಸಿದ್ದೇವೆ’ ಎಂದರು.
‘ರಾಜ್ಯದ ಇಬ್ಬರು ಸೇರಿದಂತೆ ದೇಶದ 26 ಮಂದಿ ಅಲ್ಲಿ ಪ್ರಾಣ ಕಳೆದುಕೊಂಡರು. ಅದು ದುಃಖಕರವಾದ ಸಂಗತಿ. ಅದಕ್ಕೆ ಪ್ರತ್ಯುತ್ತರವಾಗಿ ಕೇಂದ್ರ ಸರ್ಕಾರವು ವಿರೋಧಿ ರಾಷ್ಟ್ರವಾದ ಪಾಕಿಸ್ತಾನದ ಮೇಲೆ ದಾಳಿಗೆ ‘ಆಪರೇಷನ್ ಸಿಂಧೂರ’ ನಡೆಸಿದಾಗ ಎಲ್ಲ ರಾಜಕೀಯ ಪಕ್ಷದವರು ಹಾಗೂ ದೇಶದ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಎಲ್ಲರೂ ಕೇಂದ್ರಕ್ಕೆ ಬೆಂಬಲವಾಗಿ ನಿಂತರು. ಕಾರ್ಯಾಚರಣೆಗೆ ಬೆಂಬಲ ಸೂಚಿಸಿದೆವು. ಯಶಸ್ಸಿಗೆ ನಾವೆಲ್ಲರೂ ಪ್ರಾರ್ಥನೆ ಮಾಡಿದೆವು’ ಎಂದರು.
ವಿನೂತನ ಕಾರ್ಯಕ್ರಮ: ‘ಈಗ ಕದನ ವಿರಾಮ ಘೋಷಣೆಯಾಗಿದೆ. ಅನೇಕ ಯೋಧರು ಪ್ರಾಣವನ್ನು ದೇಶಕ್ಕಾಗಿ ಮುಡುಪಾಗಿಟ್ಟು, ಪ್ರಾಣ ಕಳೆದುಕೊಂಡಿದ್ದಾರೆ. ಅನೇಕರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ನಾವು ಸೇನೆಗೆ ಕೊಡುಗೆಯನ್ನಂತೂ ಕೊಡುವುದಕ್ಕೆ ಆಗುವುದಿಲ್ಲ. ಕೇವಲ ಮಾತಿನಿಂದ ಹೊಟ್ಟೆ ತುಂಬಿಸಲಾಗುವುದಿಲ್ಲ. ಆದ್ದರಿಂದ, ನಾವು ದೇಶದ ಸೈನಿಕರಿಗಾಗಿ ರಕ್ತ ದಾನ ಮಾಡುತ್ತಿದ್ದೇವೆ. ಅವರೊಂದಿಗೆ ನಾವಿದ್ದೇವೆ ಎಂಬ ಸಂದೇಶ ನೀವುದಕ್ಕಾಗಿ ದೇಶದಲ್ಲಿಯೇ ಮೊದಲಿಗೆ ಇಂತಹ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ರಕ್ತ ದಾನದ ಈ ಶಿಬಿರದಿಂದ ಜನರಿಗೂ ಅನುಕೂಲವಾಗಲಿದೆ’ ಎಂದು ಹೇಳಿದರು.
ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಎಂ. ಮುತ್ತುರಾಜ್, ಡಿಎಚ್‌ಒ ಡಾ.ಪಿ.ಸಿ. ಕುಮಾರಸ್ವಾಮಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಸಿರಾಜ್ ಮಹಮದ್, ನಗರಪಾಲಿಕೆ ಮಾಜಿ ಸದಸ್ಯ ಕೆ.ಸಿ. ಶೌಕತ್ ಪಾಷ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಪಾಲ್ಗೊಂಡಿದ್ದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ರಕ್ತ ದಾನ ಮಾಡಿದರು. ರೆಸ್ಪಾನ್ಸಿಬಲ್ ಸಿಟಿಜನ್ ಫೋರಂನ ಎಫ್.ಎಂ. ಕಲೀಮ್, ಡಾ.ಕುಸುಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.