ADVERTISEMENT

ಮೈಸೂರು ನಗರ ಸಾರಿಗೆ ಬಸ್‌ಗಳಿಗೆ 15 ವರ್ಷಗಳ ಬಳಿಕ ನೂತನ ‘ರಂಗು’

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 5:25 IST
Last Updated 5 ಫೆಬ್ರುವರಿ 2025, 5:25 IST
<div class="paragraphs"><p>ಮೈಸೂರು ನಗರದಲ್ಲಿ ಸಂಚರಿಸುತ್ತಿರುವ ಹೊಸ ಬಣ್ಣದ ಬಸ್‌ಗಳು </p></div>

ಮೈಸೂರು ನಗರದಲ್ಲಿ ಸಂಚರಿಸುತ್ತಿರುವ ಹೊಸ ಬಣ್ಣದ ಬಸ್‌ಗಳು

   

–ಪ್ರಜಾವಾಣಿ ಚಿತ್ರ: ಅನೂಪ್ ರಾಘ. ಟಿ.

ಮೈಸೂರು: ನಗರ ಸಾರಿಗೆ ಬಸ್‌ಗಳು 15 ವರ್ಷಗಳ ಬಳಿಕ ಬಣ್ಣ ಬದಲಾಯಿಸಿವೆ. ತಿಳಿ ಕೆಂಪು, ಹಸಿರು ಬಣ್ಣ ಹೊಂದಿದ್ದ ಬಸ್‌ಗಳು ಆಕಾಶ ನೀಲಿ ಮತ್ತು ಬಿಳಿ ಬಣ್ಣದಲ್ಲಿ ಕಂಗೊಳಿಸುತ್ತಿವೆ. ನೂತನ ಬಣ್ಣದ ಬಸ್‌ಗಳು ಜನರ ಗಮನ ಸೆಳೆಯುತ್ತಿವೆ.

ADVERTISEMENT

‘ಶಕ್ತಿ’ ಯೋಜನೆಯಿಂದ ಹೊಸ ಚೈತನ್ಯ ಪಡೆದಿರುವ ಸಾರಿಗೆ ಸಂಸ್ಥೆಯ ಬಸ್‌ಗಳು, ಬಣ್ಣದಿಂದಾಗಿಯೂ ಆಕರ್ಷಿಸತೊಡಗಿವೆ. ನಗರದಲ್ಲಿ ಪ್ರತಿ ತಿಂಗಳೂ 30 ಬಸ್‌ಗಳು ಹೊಸ ಬಣ್ಣ ಪಡೆಯಲಿದ್ದು, ವರ್ಷದೊಳಗೆ ಎಲ್ಲವೂ ಒಂದೇ ಬಣ್ಣ ಹೊಂದಲಿವೆ.

ನಗರ ಸಾರಿಗೆ ಯೋಜನೆಗೆಂದು ‘ಜೆ–ನರ್ಮ್’ ಯೋಜನೆಯಡಿ ಖರೀದಿಸಿದ್ದ, 10 ಲಕ್ಷ ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಿದ 100ಕ್ಕೂ ಹೆಚ್ಚು ಬಸ್‌ಗಳನ್ನು ನಾಲ್ಕು ತಿಂಗಳ ಹಿಂದೆ ನಿಯಮಾನುಸಾರ ಗುಜರಿಗೆ ಹಾಕಲಾಗಿತ್ತು. ಅದಕ್ಕೆ ಬದಲಾಗಿ ರಾಜ್ಯ ಸರ್ಕಾರ ಖರೀದಿಸಿ ನೀಡಿದ ಬಸ್‌ಗಳಿಗೆ ಆಕಾಶ ನೀಲಿ ಮತ್ತು ಬಿಳಿ ಬಣ್ಣವನ್ನು ಇಲಾಖೆಯಿಂದ ಆಯ್ಕೆ ಮಾಡಲಾಗಿದೆ. ಈ ಬಣ್ಣವನ್ನು ಪ್ರಯಾಣಿಕರು ಮೆಚ್ಚಿದ್ದು, ಉಳಿದ ಬಸ್‌ಗಳ ಬಣ್ಣವನ್ನೂ ಬದಲಿಸಲು ಇಲಾಖೆಯು ಮುಂದಾಗಿದೆ.

ನಗರ ವಿಭಾಗದಲ್ಲಿ 554 ಬಸ್‌ಗಳು: ‘ಮೈಸೂರು ನಗರ ವಿಭಾಗದಲ್ಲಿ 554 ಬಸ್‌ಗಳಿವೆ. ಅವುಗಳಲ್ಲಿ ನಂಜನಗೂಡು ಡಿಪೊಗೆ 125 ಬಸ್ ಸೇರಿವೆ. ನಂಜನಗೂಡು ಡಿಪೊ ಗ್ರಾಮಾಂತರ ಸಾರಿಗೆ ವ್ಯಾಪ್ತಿಗೆ ಸೇರಿದ್ದು, ನಗರ ಸಾರಿಗೆಗೆ ಸಂಬಂಧಪಟ್ಟ 429 ಬಸ್‌ಗಳ ಬಣ್ಣ ಬದಲಾಗಲಿದೆ. ಇದು ಮೈಸೂರಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲೆಲ್ಲಿ ನಗರ ಸಾರಿಗೆಗಳಿವೆಯೋ ಅಲ್ಲೆಲ್ಲಾ ಇದೇ ಬಣ್ಣವನ್ನು ಬಳಸಲು ಇಲಾಖೆ ನಿರ್ಧರಿಸಿದೆ’ ಎಂದು ಕೆಎಸ್ಆರ್‌ಟಿಸಿ ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌.ಟಿ. ವೀರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ವರ್ಷವೂ ಸಾರಿಗೆ ಬಸ್‌ಗಳನ್ನು ಎಫ್‌ಸಿ (ಫಿಟ್‌ನೆಸ್‌ ಸರ್ಟಿಫಿಕೆಟ್) ಮಾಡಿಸಬೇಕಾದ ನಿಯಮವಿದ್ದು, ಆ ಸಂದರ್ಭದಲ್ಲಿ ಮರು ಬಣ್ಣ ಮಾಡುವುದು ಸಾಮಾನ್ಯ ಪ್ರಕ್ರಿಯೆ. ಹಾಗಾಗಿ ಇದಕ್ಕೆ ಯಾವುದೇ ವಿಶೇಷ ವೆಚ್ಚ ಮಾಡಲಾಗುತ್ತಿಲ್ಲ. ನಗರ ವಿಭಾಗದಲ್ಲಿ ಪ್ರತಿ ತಿಂಗಳು 30ರಿಂದ 40 ಬಸ್‌ಗಳು ಎಫ್‌ಸಿಗೆ ಬರುತ್ತವೆ. ಎಫ್‌ಸಿ ಪರೀಕ್ಷೆಗೆ ಮುನ್ನ ಹೊಸ ಬಣ್ಣ ನೀಡಲಾಗುತ್ತಿದೆ. ಪ್ರತಿ ತಿಂಗಳು 30ಕ್ಕೂ ಅಧಿಕ ಬಸ್‌ಗಳು ಹೊಸ ಬಣ್ಣ ಪಡೆಯಲಿವೆ. ಮುಂದಿನ 3 ತಿಂಗಳಲ್ಲಿ ಗುಜರಿ ಸೇರುವ ಬಸ್‌ಗಳಿಗೆ ಹೊಸ ಬಣ್ಣ ಬಳಿಯದಿರಲು ನಿರ್ಧರಿಸಲಾಗಿದೆ’ ಎಂದರು.

‘ಎಂಜಿನ್ ಸುಸ್ಥಿತಿಯಲ್ಲಿದ್ದು, ಬಾಡಿ ಹಾಳಾಗಿದ್ದ ಬಸ್‌ಗಳಿಗೆ ಸುಮಾರು ₹3 ಲಕ್ಷದಿಂದ ₹4 ಲಕ್ಷ ವೆಚ್ಚದಲ್ಲಿ ಹೊಸದಾಗಿ ಬಾಡಿ ಕಟ್ಟಲು ಇಲಾಖೆ ಮುಂದಾಗಿದ್ದು, ಈಗಾಗಲೇ ನಗರ ವಿಭಾಗದ 6 ಬಸ್‌ಗಳನ್ನು ನವೀಕರಣಗೊಳಿಸಿ ಪ್ರಯಾಣಿಕರ ಸೇವೆಗೆ ಬಳಸಲಾಗುತ್ತಿದೆ. ಇಲಾಖೆಯ ಎಂಡಿ ಅನ್ಬುಕುಮಾರ್‌ ನಿರ್ದೇಶನದಂತೆ ಈ ಯೋಜನೆ ನಡೆಯುತ್ತಿದ್ದು, ಹಣ ಉಳಿತಾಯಕ್ಕೆ ಕಾರಣವಾಗಿದೆ’ ಎಂದು ಮಾಹಿತಿ ನೀಡಿದರು.

ನಗರ ವಿಭಾಗಕ್ಕೆ ಬಂದ ಹೊಸ ಬಸ್‌ಗಳ ಬಣ್ಣಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರ್ಷದೊಳಗೆ ಎಲ್ಲ ಬಸ್‌ಗಳನ್ನೂ ಹೊಸ ಬಣ್ಣಕ್ಕೆ ಮಾರ್ಪಡಿಸಲಾಗುತ್ತದೆ
ಎಚ್.ಟಿ.ವೀರೇಶ್ ವಿಭಾಗೀಯ ನಿಯಂತ್ರಣಾಧಿಕಾರಿ ಮೈಸೂರು ನಗರ ವಿಭಾಗ

‘ದೃಷ್ಟಿದೋಷವುಳ್ಳವರಿಗೆ ಅನುಕೂಲ’

‘ಸಾರಿಗೆ ಇಲಾಖೆಯಿಂದ ನಗರದಲ್ಲಿ ದೃಷ್ಟಿದೋಷವುಳ್ಳ ಪ್ರಯಾಣಿಕರಿಗೆ ಬಸ್‌ ಮಾರ್ಗದ ಮಾಹಿತಿ ನೀಡಲು ‘ಗ್ರೀನ್‌ ಅರ್ಬನ್‌ ಮೊಬಿಲಿಟಿ ಇನ್ನೊವೇಶನ್‌’ ಎಂಬ ನೂತನ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆದಿದ್ದು ಪ್ರಾಯೋಗಿಕವಾಗಿ 5 ಬಸ್‌ಗಳಲ್ಲಿ ಜಾರಿ ಮಾಡಲಾಗಿದೆ’ ಎಂದು ಎಚ್.ಟಿ.ವೀರೇಶ್ ತಿಳಿಸಿದರು.

‘ನಗರಾಭಿವೃದ್ಧಿ ಇಲಾಖೆ ಅನುದಾನದಲ್ಲಿ ಖಾಸಗಿ ಕಂಪನಿಯಿಂದ ಈ ತಂತ್ರಾಂಶದ ಸಲಕರಣೆಗಳನ್ನು ಬಸ್‌ನಲ್ಲಿ ಅಳವಡಿಸಲಾಗಿದೆ. ಇದನ್ನು ಸಂಪರ್ಕಿಸುವಂತಹ ರಿಮೋಟ್‌ಗಳನ್ನು ದೃಷ್ಟಿದೋಷವುಳ್ಳ ಪ್ರಯಾಣಿಕರಿಗೆ ನೀಡಲಾಗುತ್ತದೆ. ಬಸ್‌ ಬಂದಾಗ ರಿಮೋಟ್‌ ಒತ್ತಿದರೆ ಬಸ್‌ ತೆರಳುವ ಮಾರ್ಗದ ಸಂಖ್ಯೆಯನ್ನು ಸ್ಪೀಕರ್‌ ಮೂಲಕ ಹೇಳಲಾಗುತ್ತದೆ.

ಎನ್‌ಜಿಒ ಸಹಕಾರದಲ್ಲಿ 200 ಮಂದಿ ದೃಷ್ಟಿದೋಷವುಳ್ಳವರಿಗೆ ಈ ಬಗ್ಗೆ ತರಬೇತಿಯನ್ನೂ ನೀಡಲಾಗಿದ್ದು ಹೆಬ್ಬಾಳದ ಇನ್ಫೊಸಿಸ್‌ ಕ್ಯಾಂಪಸ್‌ ನಂಜನಗೂಡು  ಹುಲ್ಲಹಳ್ಳಿ ಮಾರ್ಗದಲ್ಲಿ ಯೋಜನೆ ಜಾರಿಯಲ್ಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.