ADVERTISEMENT

ಮೈಸೂರು: ‘ಒಕ್ಕಲಿಗ ಅಸ್ತ್ರ’ ಪ್ರಯೋಗಿಸಿದ ಸಿಎಂ, ಡಿಸಿಎಂ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 14:05 IST
Last Updated 3 ಏಪ್ರಿಲ್ 2024, 14:05 IST
   

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ ಒಕ್ಕಲಿಗ ಸಮಾಜಕ್ಕೆ ಸೇರಿದವರು ಎಂಬುದನ್ನು ಒತ್ತಿ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮತದಾರರ ಮನವೊಲಿಸಿಕೊಳ್ಳಲು ಇಲ್ಲಿ ‘ಒಕ್ಕಲಿಗಾಸ್ತ್ರ’ವನ್ನು ಪ್ರಯೋಗಿಸಿದರು.

ಲಕ್ಷ್ಮಣ ನಾಮಪತ್ರ ಸಲ್ಲಿಕೆಗೆ ಜೊತೆಯಾದ ಅವರು, ಬಳಿಕ ಸಿದ್ಧಾರ್ಥನಗರದ ಟೆರಿಷಿಯನ್‌ ಕಾಲೇಜು ಬಳಿ ತೆರೆದ ವಾಹನದಲ್ಲಿ ನಿಂತು ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ಕಾಂಗ್ರೆಸ್‌ ಅಭ್ಯರ್ಥಿ ಒಕ್ಕಲಿಗರಲ್ಲ’ ಎಂಬ ಬಿಜೆಪಿಯವರ ಆರೋಪಕ್ಕೆ ತಿರುಗೇಟು ನೀಡಿದರು.

‘ಲಕ್ಷ್ಮಣ ಅವರು ಒಕ್ಕಲಿಗರಾಗಿ ಹುಟ್ಟಿ ವಿಶ್ವಮಾನವರಾಗುವ ಹಾದಿಯಲ್ಲಿ ನಡೆಯುತ್ತಾ ಕುವೆಂಪು ಆಶಯವನ್ನು ಪಾಲಿಸುತ್ತಿದ್ದಾರೆ. ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಬಿಜೆಪಿ ಮಾಡಿರುವ ನಂಬಿಕೆ ಮತ್ತು ಜನದ್ರೋಹಕ್ಕೆ ಪಾಠ ಕಲಿಸಬೇಕು’ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ADVERTISEMENT

‘ಸುಳ್ಳು ಹೇಳುತ್ತಿರುವ ಬಿಜೆಪಿಗೆ ಪಾಠ ಕಲಿಸಬೇಕು. ವಿರಾಜಪೇಟೆ, ಮಡಿಕೇರಿ, ನರಸಿಹರಾಜ, ಚಾಮರಾಜ, ಪಿರಿಯಾಪಟ್ಟಣದಲ್ಲಿ ನಮ್ಮ ಶಾಸಕರೇ ಇದ್ದಾರೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಜಯ ಶತಸಿದ್ಧ. ಸಿದ್ದರಾಮಯ್ಯ ಮರ್ಯಾದೆ ಉಳಿಸಬೇಕಾದರೆ ಎಲ್ಲರೂ ‌ಲೀಡ್ ಕೊಡಲೇಬೇಕು’ ಎಂದು ಕೋರಿದರು.

ಲಕ್ಷ್ಮಣ್‌ಗೌಡ ಎಂದ ಡಿಕೆಶಿ:

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲಕ್ಷ್ಮಣ ಅವರನ್ನು ಲಕ್ಷ್ಮಣ್‌ ಗೌಡ ಎಂದು ಕರೆದರು. ‘ಮೈಸೂರು ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಟಿಕೆಟ್ ಸಿಕ್ಕಿ 47 ವರ್ಷಗಳಾಗಿದ್ದವು. ಆದ್ದರಿಂದ, ನಾನು ಮತ್ತು ಸಿದ್ದರಾಮಯ್ಯ ಚರ್ಚಿಸಿ ಒಕ್ಕಲಿಗ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ಈ ಸಿದ್ದʼರಾಮʼನಿಗೆ ಲಕ್ಷ್ಮಣಗೌಡ. ಕೆಪಿಸಿಸಿ ಅಧ್ಯಕ್ಷರು ನೀವೇ ಆಗಿರುವಾಗ ಸಮುದಾಯಕ್ಕೆ ಅವಕಾಶ ಒದಗಿಸಬೇಕು ಎಂದು ಹಲವು ಮುಖಂಡರು ಮನವಿಯನ್ನೂ ಮಾಡಿದ್ದರು’ ಎಂದು ಹೇಳಿದರು.

‘ನಾವು ಜಾತಿ ರಾಜಕಾರಣ ಮಾಡುವವರಲ್ಲ; ನೀತಿ ಮೇಲೆ ನಡೆಸುವವರು. ಆದ್ದರಿಂದ ಸಮಾಜದ ಬಗ್ಗೆ ಕಳಕಳಿ ಹೊಂದಿರುವ ಲಕ್ಷ್ಮಣ ಅವರನ್ನು ಆಯ್ಕೆ ಮಾಡಿದ್ದೇವೆ. ದಿನದ 24 ಗಂಟೆಯೂ ಜನರ ಸೇವೆಗೆ ಸಿಗುತ್ತಾರೆ. ಬಿಜೆಪಿ ಅಭ್ಯರ್ಥಿ ಬಗ್ಗೆ ಮಾತನಾಡುವುದಿಲ್ಲ. ಮಾತನಾಡಿದರೆ ಏನೂ ಪ್ರಯೋಜನವಿಲ್ಲ’ ಎಂದರು.

‘ರಾಜ್ಯದಲ್ಲಿ ಮೋದಿ ಅಲೆ ಇಲ್ಲ. ಇಲ್ಲಿರುವುದು ಕಾಂಗ್ರೆಸ್‌ ಹಾಗೂ ಗ್ಯಾರಂಟಿ ಕಾರ್ಯಕ್ರಮಗಳ ಅಲೆ. ಮೋದಿ ವಿಧಾನಸಭೆ ಚುನಾವಣೆಯಲ್ಲಿ ಹಳ್ಳಿ, ಊರೂರು, ಗಲ್ಲಿ ಸುತ್ತಾಡಿದರೂ ಬಿಜೆಪಿ ಗತಿ ಏನಾಯಿತು? ಬಿಜೆಪಿ–ಜೆಡಿಎಸ್ ಕಾರ್ಯಕರ್ತರು ನೆರೆಯುತ್ತಾರೆಂದು ಕೇಂದ್ರ ಸಚಿವ ಅಮಿತ್ ಶಾ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಿದರು’ ಎಂದು ವ್ಯಂಗ್ಯವಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಮಂಥರ್ ಗೌಡ, ಕೆ.ಹರೀಶ್‌ ಗೌಡ, ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್‌, ಎಚ್‌.ಪಿ. ಮಂಜುನಾಥ್‌, ಮರಿತಿಬ್ಬೇಗೌಡ, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್ ಕುಮಾರ್, ನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್. ಮೂರ್ತಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಪಾಲ್ಗೊಂಡಿದ್ದರು.

ಸಿಎಂಗೆ ಮುಖಭಂಗವಾಗುತ್ತದೆ’

ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ, ‘ತವರಲ್ಲಿ ಪಕ್ಷ ಗೆಲ್ಲದಿದ್ದರೆ ಮುಖ್ಯಮಂತ್ರಿಗೆ ಮುಖಭಂಗ ಆಗುತ್ತದೆ. ಎಲ್ಲಾ ವರ್ಗದ ಜನರ ಪರವಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರು ಶಕ್ತಿ ತುಂಬಬೇಕು’ ಎಂದು ಕೋರಿದರು.

‘ಜನಸಾಮಾನ್ಯರ ಜೊತೆ ಇರುವಂತಹ ನಮ್ಮ ಅಭ್ಯರ್ಥಿ ಗೆಲ್ಲಿಸಬೇಕು. ರಾಜವಂಶಸ್ಥರನ್ನು ಗೆಲ್ಲಿಸಿದರೆ ಅವರು ಜನರ ಕೈಗೆ ಸಿಗುವುದಿಲ್ಲ’ ಎಂದು ಬಿಜೆಪಿ ಅಭ್ಯರ್ಥಿಯನ್ನು ಟೀಕಿಸಿದರು.

ಅಭ್ಯರ್ಥಿ ಎಂ.ಲಕ್ಷ್ಮಣ ಮಾತನಾಡಿ, ‘ನಾನು ಅರಮನೆಯಲ್ಲಿಲ್ಲ. ಸಣ್ಣ ಮನೆಯಲ್ಲಿ ಇರುತ್ತೇನೆ, ಜನರಿಗೆ ಸುಲಭವಾಗಿ ಸಿಗುತ್ತೇನೆ. ಕೊಡಗಲ್ಲೂ ಮನೆ ಮಾಡಿ ಅಲ್ಲಿಯೂ ಇರುತ್ತೇನೆ’ ಎಂದು ತಿಳಿಸಿದರು. ‘ನನ್ನನ್ನು ಗೆಲ್ಲಿಸುವ ಮೂಲಕ ಸಿಎಂ–ಡಿಸಿಎಂ ಮಾನ- ಮರ್ಯಾದೆ ಉಳಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.