ADVERTISEMENT

ಅಂದಿನ ಪುಂಡಾನೆಯೇ ಇಂದಿನ ‘ಈಶ್ವರ’!

ದಸರಾ ಉತ್ಸವದ ಜಂಬೂ ಸವಾರಿಗೆ ಮೊದಲ ಬಾರಿ ಆಯ್ಕೆಯಾದ ಸಲಗ

ಕೆ.ಓಂಕಾರ ಮೂರ್ತಿ
Published 22 ಆಗಸ್ಟ್ 2019, 20:32 IST
Last Updated 22 ಆಗಸ್ಟ್ 2019, 20:32 IST
ದಸರೆಗೆ ಬಂದಿರುವ ‘ಈಶ್ವರ‘
ದಸರೆಗೆ ಬಂದಿರುವ ‘ಈಶ್ವರ‘   

ಮೈಸೂರು: ಪುಂಡಾಟಿಕೆ ಮೂಲಕ ಗ್ರಾಮಸ್ಥರ ಕೋಪಕ್ಕೆ ಗುರಿಯಾಗಿದ್ದ ಗಂಡಾನೆ ಈಗ ‘ಈಶ್ವರ’ನಾಗಿ ಹೊಸ ಭರವಸೆ ಮೂಡಿಸಿದೆ.

ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಮೊದಲ ಬಾರಿ ಆಯ್ಕೆಯಾಗಿ ಜನರ ಕಣ್ಮಣಿಯಾಗಿದ್ದಾನೆ. ಕೊಡಗಿನ ದುಬಾರೆ ಶಿಬಿರದಿಂದ ಮೈಸೂರಿಗೆ ಪ್ರಯಾಣ ಬೆಳೆಸಿದ 49 ವರ್ಷದ ಈ ಸಲಗನನ್ನು ಕಾಡಂಚಿನ ಜನರು ಪ್ರೀತಿಯಿಂದ ಕಳಿಸಿಕೊಟ್ಟರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈಶ್ವರನದ್ದೇ ಜಪ, ಜೊತೆಗೆ ಒಂದಿಷ್ಟು ಗುಣಗಾನ.

ADVERTISEMENT

ಈಗ ಸೌಮ್ಯ ಸ್ವಭಾವದಂತೆ ಕಾಣುವ ಈ ಆನೆಯ ಉಪಟಳದಿಂದ ನಾಲ್ಕೈದು ವರ್ಷಗಳ ಹಿಂದೆ ಕಣ್ಣೀರಿಟ್ಟವರು ಅಷ್ಟಿಷ್ಟು ಮಂದಿ ಅಲ್ಲ. ಹಾಸನ ಜಿಲ್ಲೆಯ ಯಸಳೂರು ಅರಣ್ಯ ವಲಯ ವ್ಯಾಪ್ತಿಯ ಜನರು ಭೀತಿಯಿಂದಲೇ ಓಡಾಡುತ್ತಿದ್ದರು. ಮುಂಗೋಪಿ ಎನಿಸಿದ್ದ ಈ ಸಲಗ ‘ನಡೆದಿದ್ದೇ ದಾರಿ’ ಎಂಬಂತೆ ಸುತ್ತಮುತ್ತಲಿನ ಗ್ರಾಮಗಳ ತೋಟ, ಹೊಲಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡಿತ್ತು.

‘ದೂರುಗಳು ಬಂದಿದ್ದರಿಂದ ಅರಣ್ಯ ಇಲಾಖೆಯು 2014ರಲ್ಲಿ ಆನೆಗಳನ್ನು ಹಿಡಿಯಲು ಮುಂದಾಯಿತು. ಇಲಾಖೆ ತೋಡಿದ ಖೆಡ್ಡಾಕ್ಕೆ ಬಿದ್ದ ಆನೆಯೇ ಈಶ್ವರ. ಆಗ ಜನರು ನಿಟ್ಟುಸಿರು ಬಿಟ್ಟಿದ್ದರು’ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಇಲಾಖೆಯ ಪಶುವೈದ್ಯ ಡಾ.ಡಿ.ಎನ್.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ದುಬಾರೆ ಆನೆ ಶಿಬಿರದಲ್ಲಿ ಮಾವುತ ವಿಶ್ವನಾಥ್‌, ಕಾವಾಡಿ ವಿಜಯ್‌ ಮಾರ್ಗದರ್ಶನದಲ್ಲಿ ಈ ಆನೆಯನ್ನು ಪಳಗಿಸಲಾಗಿದೆ. ಕೇವಲ 45 ದಿನಗಳಲ್ಲಿ ಕ್ರಾಲ್‌ನಿಂದ (ಆನೆ ಪಳಗಿಸುವ ದೊಡ್ಡಿ) ಹೊರಬಿಡಲಾಗಿತ್ತು. ‘ಈಶ್ವರ’ ಎಂದು
ನಾಮಕರಣ ಮಾಡಲಾಯಿತು. ಈಗ ಈ ಆನೆ ಶಕ್ತಿಶಾಲಿಯಾಗಿದ್ದು, ಸರಿಯಾಗಿ ತರಬೇತಿ ನೀಡಿದರೆ ಭವಿಷ್ಯದಲ್ಲಿ ಪ್ರಮುಖ ಪಾತ್ರ ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಬೆನ್ನಿನ ಭಾಗ ಸಮತಟ್ಟಾಗಿದ್ದು, ಅಂಬಾರಿ ಇಟ್ಟು ಸಾಗಿಸಬಹುದಾಗಿದೆ.

‘ಇಷ್ಟವಾದ ಆಹಾರ ನೀಡುವ ಮೂಲಕವೇ ಈ ಆನೆಯನ್ನು ಸರಿ ದಾರಿಗೆ ತಂದೆ. ಪ್ರೀತಿ ತೋರಿದರೆ ಯಾವುದೇ ಪ್ರಾಣಿ ಸಾಧುವಾಗಬಲ್ಲದು. ಆನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಗೂ ಈಶ್ವರ ಸಿದ್ಧ’ ಎಂದು ಹೇಳುತ್ತಾರೆ ಆನೆಯ ಮಾವುತ ವಿಶ್ವನಾಥ್‌.

ಆನೆಗಳಿಗೆ ಪೂಜೆ: ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ ಸೇರಿದಂತೆ ಆರು ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ನಾಹಡಬ್ಬ ದಸರಾ ಮಹೋತ್ಸವದ ಚಟುವಟಿಕೆಗಳಿಗೆ ಮುನ್ನುಡಿ ಬರೆಯಲಾಯಿತು.

ವಿ.ಸೋಮಣ್ಣಗೆ ಮೈಸೂರು ಉಸ್ತುವಾರಿ
ಬೆಂಗಳೂರು: ರಾಜ್ಯದ ಬೇರೆ ಯಾವ ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡದೆ ಇದ್ದರೂ, ದಸರೆ ಸಮೀಪಿಸುತ್ತಿರುವ ಹಿನ್ನೆಲೆ ಸಚಿವ ವಿ.ಸೋಮಣ್ಣ ಅವರನ್ನು ಮೈಸೂರು ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

ದಸರೆಗೆ ಸಿದ್ಧತೆ ನಡೆಯುತ್ತಿದ್ದಾಗಲೇ ಗುರುವಾರ ಮೈಸೂರಿನ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಅವರನ್ನು ವರ್ಗಾಯಿಸಿ, ಅವರ ಸ್ಥಾನಕ್ಕೆ ನಿತೇಶ್‌ ಪಾಟೀಲ್‌ ಅವರನ್ನು ನಿಯೋಜನೆ ಮಾಡಲಾಗಿತ್ತು. ಇದಕ್ಕೆ ಹಲವು ಶಾಸಕರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಈ ವರ್ಗಾವಣೆ ಆದೇಶ ರದ್ದುಪಡಿಸಲಾಯಿತು.

*
ಉಪಟಳ ನೀಡುತ್ತಿದ್ದ ಆನೆಯನ್ನು ಪಳಗಿಸಲು ಹೆಚ್ಚೇನೂ ಸಮಯ ಬೇಕಾಗಲಿಲ್ಲ. ನಂಬಲೂ ಸಾಧ್ಯವಾಗದ ರೀತಿ ಸುಧಾರಿಸಿದೆ
-ಡಾ.ಡಿ.ಎನ್‌.ನಾಗರಾಜ್‌, ಪಶುವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.