ADVERTISEMENT

ಅಂಬಾರಿ ಹೊರುವ ಪುಣ್ಯಾತ್ಮ...

ಕೆ.ಓಂಕಾರ ಮೂರ್ತಿ
Published 4 ಅಕ್ಟೋಬರ್ 2019, 19:31 IST
Last Updated 4 ಅಕ್ಟೋಬರ್ 2019, 19:31 IST
ಅರ್ಜುನ ಆನೆಗೆ ಮಜ್ಜನ
ಅರ್ಜುನ ಆನೆಗೆ ಮಜ್ಜನ   

ದಸರೆಯ ಸಂಭ್ರಮ ಮುಗಿಲು ಮುಟ್ಟಿದೆ. ಅರಮನೆಗಳ ನಗರಿ ದೀಪಾಲಂಕಾರದಿಂದ ಪ್ರಜ್ವಲಿಸುತ್ತಿದೆ. ಪ್ರವಾಸಿಗರ ಸಂಭ್ರಮ ಹೇಳತೀರದು. ಇದರ ನಡುವೆಯೇ ಗಜಪಡೆಯ ತಾಲೀಮು ಅಂತಿಮ ಹಂತ ತಲುಪಿದೆ. ಜಂಬೂಸವಾರಿಗೆ ಕ್ಯಾಪ್ಟನ್‌ ಅರ್ಜುನ ನೇತೃತ್ವದ ಆನೆಗಳು ಸನ್ನದ್ಧವಾಗಿವೆ.

ದಸರಾ ಮಹೋತ್ಸವ ಜಗದಗಲ ಖ್ಯಾತಿ ‍ಪಡೆಯಲು ಪ್ರಮುಖ ಕಾರಣ ಜಂಬೂಸವಾರಿ. 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾ‍ನೆಯಾಗುವ ಚಾಮುಂಡೇಶ್ವರಿ ವಿಗ್ರಹವನ್ನು ಹೊತ್ತ ಆನೆಯು ಅರಮನೆ ಮುಂಭಾಗದಲ್ಲಿ ಸಾಗುವುದನ್ನು ನೋಡಲು ಲಕ್ಷಾಂತರ ಜನ ಸೇರುತ್ತಾರೆ. ಸಂಭ್ರಮದ ಜೊತೆಗೆ ಭಕುತಿ ಭಾವ ನೆಲೆಸುತ್ತದೆ.

ಅಂಥ ಕಾರ್ಯದಲ್ಲಿ ಎಂಟನೇ ಬಾರಿ ಭಾಗಿಯಾಗಲು, ಅಂಬಾರಿಗೆ ಬೆನ್ನು ಕೊಡಲು, ಜನರ ನಿರೀಕ್ಷೆಗೆ ಸ್ಪಂದಿಸಲು ಅರ್ಜುನ ಆನೆ ಸಿದ್ಧವಾಗಿದೆ. ಆರಂಭದಲ್ಲಿ ದೊಡ್ಡಮಾಸ್ತಿ, ಬಳಿಕ ಅವರ ಪುತ್ರ ಮಹೇಶ್‌, ಮೂರು ವರ್ಷಗಳಿಂದ ವಿನು ಈ ಆನೆಯನ್ನು ವಿಜಯದಶಮಿ ಮೆರವಣಿಗೆಯಲ್ಲಿ ಮುನ್ನಡೆಸುತ್ತಿದ್ದಾರೆ.

ADVERTISEMENT

‘ಅರ್ಜುನ ಆನೆಯನ್ನು ಮೊದಲ ಬಾರಿ ಮುನ್ನಡೆಸಲು ಅವಕಾಶ ದೊರೆತಾಗ ಹೆಚ್ಚಿನವರು ಹೆದರಿಸಿದ್ದರು. ಅಪಾಯಕಾರಿ, ತೊಂದರೆಯಾಗುಬಹುದು ಎನ್ನುತ್ತಾ ಆತ್ಮಸ್ಥೈರ್ಯ ಕುಗ್ಗಿಸಿದ್ದರು. ಅದರ ಭಾವನೆ ಅರಿತಿದ್ದ ನಾನು ಯಾವುದೇ ಬೆದರಿಕೆಗೆ ಜಗ್ಗಲಿಲ್ಲ‌. ಕಣ್ಣಿನಲ್ಲೇ ಅದರ ಪ್ರೀತಿ ಸಂಪಾದಿಸಿದೆ’ ಎಂದು ಹೇಳುತ್ತಾರೆ ಮಾವುತ ವಿನೂ.

ವಿನೂ ಮೇಲೆ ಅರ್ಜುನನಿಗೆ ವಿಶೇಷ ಪ್ರೀತಿ. ಎಲ್ಲಕ್ಕಿಂತ ಮುಖ್ಯವಾಗಿ ಇಬ್ಬರ ನಡುವೆ ಗಾಢ ಆಪ್ತತೆ ಬೆಳೆದಿದೆ. ಟೆಂಟ್‌ನಲ್ಲಿ ಸನಿಹ ವಿನೂ ನಿದ್ದೆಯಲ್ಲಿದ್ದಾಗ ಯಾರಾದರೂ ಎಬ್ಬಿಸಲು ಬಂದರೆ ಸೊಂಡಿಲಿನಲ್ಲಿ ಸೊಪ್ಪು ಹಿಡಿದು ಬೀಸುತ್ತದೆ.

ಅರ್ಜುನನಿಗೂ ಮೊದಲು ಬಲರಾಮ ಆನೆಯು ಸುಮಾರು 11 ವರ್ಷ ಅಂಬಾರಿ ಹೊತ್ತು ಸಾಗಿತ್ತು. ಅದಕ್ಕೂ ಮೊದಲು ದ್ರೋಣ ಆನೆಯು 18 ಬಾರಿ ಈ ಮಹಾನ್‌ ಜವಾಬ್ದಾರಿ ನಿಭಾಯಿಸಿತ್ತು.

ಜಯಮಾರ್ತಾಂಡ ಆನೆ ಮೊದಲ ಬಾರಿ ಚಿನ್ನದ ಅಂಬಾರಿ ಹೊತ್ತಿತ್ತು. ಸುಮಾರು 45 ವರ್ಷ ಈ ಕಾರ್ಯ ನಿಭಾಯಿಸಿ ಮಹಾರಾಜರ ಪ್ರೀತಿಗೆ ಪಾತ್ರವಾಗಿತ್ತು. ಹೀಗಾಗಿಯೇ, ಅರಮನೆಯ ಮುಖ್ಯದ್ವಾರಕ್ಕೆ ಜಯಮಾರ್ತಾಂಡ ದ್ವಾರ ಎಂದು ಹೆಸರಿಡಲಾಗಿದೆ.

ವಿಜಯ ಬಹದ್ದೂರ್‌, ನಂಜುಂಡ, ರಾಮಪ್ರಸಾದ್‌, ಮೋತಿಲಾಲ್‌, ಸುಂದರ್ ರಾಜ್‌, ಗಜೇಂದ್ರ, ಬಿಳಿಗಿರಿ, ರಾಜೇಂದ್ರ, ದ್ರೋಣ ಮತ್ತು ಐರಾವತ ‌1902ರಿಂದ ದಸರೆಯಲ್ಲಿ ವಿವಿಧ ಹಂತಗಳಲ್ಲಿ ಅಂಬಾರಿ ಹೊತ್ತ ಮುನ್ನಡೆದಿದ್ದವು. ಇದರಲ್ಲಿ ಬಿಳಿಗಿರಿ ಅತ್ಯಂತ ದೈತ್ಯ ಆನೆ. ಸುಮಾರು 7 ಸಾವಿರ ಕೆ.ಜಿ. ತೂಕವಿತ್ತು.

ಸಿನಿಮಾದಲ್ಲಿಯೂ ಪಾತ್ರ: 1935ರಲ್ಲಿ ಐರಾವತ ಆನೆಯನ್ನು ಹಾಲಿವುಡ್‌ ಚಿತ್ರ ‘ದಿ ಎಲಿಫೆಂಟ್ ಬಾಯ್‌’ಗೆ ಬಳಸಿಕೊಳ್ಳಲಾಯಿತು. ಈ ಸಿನಿಮಾದಲ್ಲಿ ಮಾವುತನಾಗಿ ಕಾಣಿಸಿಕೊಂಡಿದ್ದು 7 ವರ್ಷದ ಹುಡುಗ ಮೈಸೂರು ಸಾಬು. ರಾಜೇಂದ್ರ ಆನೆಯು ಡಾ.ರಾಜ್‌ಕುಮಾರ್‌ ಅಭಿನಯದ ‘ಗಂಧದ ಗುಡಿ' ಚಿತ್ರದಲ್ಲಿ ಕಾಣಿಸಿಕೊಂಡಿತ್ತು.

ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ 'ದಿ ಸೋರ್ಡ್‌ ಆಫ್‌ ಟಿಪ್ಪು ಸುಲ್ತಾನ್‌' ಧಾರಾವಾಹಿಯಲ್ಲಿ ಟಿಪ್ಪು ಪಾತ್ರಧಾರಿಯನ್ನು ಹೊತ್ತೊಯ್ದಿದ್ದ ಆನೆ ದ್ರೋಣ. ಆದರೆ, 1998ರಲ್ಲಿ ಹೈಟೆನ್ಶನ್‌ ವಿದ್ಯುತ್ ತಗುಲಿ ಈ ಆನೆ ಸಾವನ್ನಪ್ಪಿತು. ಆದರೆ, ಈ ಆನೆ ಪದೇ ಪದೇ ನೆನಪಾಗುತ್ತಲೇ ಇರುತ್ತದೆ.

ಅರ್ಜುನ ಆನೆ ಕುರಿತು...
59 ವರ್ಷ ವಯಸ್ಸಿನ ಅರ್ಜುನ ಆನೆಯು 5,850 ಕೆ.ಜಿ ತೂಕವಿದೆ. ಹುಣಸೂರು ವನ್ಯಜೀವಿ ವಿಭಾಗದ ಬಳ್ಳೆ ಆನೆ ಶಿಬಿರದ ಈ ಆನೆಯನ್ನು1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ದ್ರೋಣ ಆನೆಯ ಅಕಾಲಿಕ ಸಾವಿನ ಬಳಿಕ ಒಮ್ಮೆ ಅಂಬಾರಿ ಹೊತ್ತಿತ್ತು. ಆದರೆ, ಮಾವುತನನ್ನು ಕೊಂದಿದ್ದರಿಂದ ಉತ್ಸವದಿಂದ ಹೊರಗಿಡಲಾಗಿತ್ತು. ಬಲರಾಮನಿಗೆ ವಯಸ್ಸಾದ ಕಾರಣ ಮತ್ತೆ ಅಂಬಾರಿ ಹೊರುವ ಜವಾಬ್ದಾರಿ ಲಭಿಸಿತು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.