ADVERTISEMENT

Mysore Dasara: ಈ ಬಾರಿ 11 ದಿನಗಳ ‘ದಸರಾ’!

ಉತ್ಸವ ಆಚರಣೆಯ ಇತಿಹಾಸದಲ್ಲಿ ಇದೇ ಮೊದಲು

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 22:49 IST
Last Updated 19 ಜೂನ್ 2025, 22:49 IST
   

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ಈ ಬಾರಿ 11 ದಿನ ನಡೆಯಲಿದೆ. ಹೀಗೆ, ಪಂಚಾಂಗದಲ್ಲಿ ಮುಹೂರ್ತ ಬಂದಿರುವುದು ಉತ್ಸವದ ಇತಿಹಾಸದಲ್ಲಿ ಇದೇ ಮೊದಲು.

‘ಸಂಪ್ರದಾಯದಂತೆ, ಹಿಂದಿನಿಂದಲೂ 10 ದಿನಗಳವರೆಗೆ ಉತ್ಸವ ನಡೆಸಲಾಗುತ್ತಿತ್ತು. ಈ ಬಾರಿ ‘ಪಂಚಮಿ’ಯು 2 ದಿನಗಳವರೆಗೆ ಬಂದಿದೆ. ಹೀಗಾಗಿ, ಸೆ.22ರಿಂದ ಅ.2ರವರೆಗೆ ದಸರಾ ನಿಗದಿಯಾಗಿದೆ. ಇದೇ 26ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ಸಭೆ ನಿಗದಿಯಾಗಿದ್ದು, ಅಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಈವರೆಗೆ 11 ದಿನಗಳವರೆಗೆ ಉತ್ಸವ ನಡೆಸಿದ ಉದಾಹರಣೆ ಇರಲಿಲ್ಲ. ಈ ಬಾರಿ ನಡೆದರೆ ಹೊಸ ದಾಖಲೆ ನಿರ್ಮಾಣವಾಗಲಿದೆ. ಸೆ. 26 ಹಾಗೂ 27–ಎರಡೂ ದಿನ ‘ಪಂಚಮಿ’ ಬಂದಿರುವುದೇ ಇದಕ್ಕೆ ಕಾರಣ. ಪಂಚಾಂಗದ ಪ್ರಕಾರವೇ ಕಾರ್ಯಕ್ರಮ ಆಯೋಜಿಸುವುದು ವಾಡಿಕೆ.

ADVERTISEMENT

‘ಪಂಚಮಿ ಎರಡು ದಿನ ಬಂದಿರುವುದು ಈ ಬಾರಿಯ ವಿಶೇಷ. ಹೀಗಾಗಿ, 11 ದಿನಗಳ ಪೂಜೆ ನಡೆಯಬೇಕಾಗುತ್ತದೆ. ‘ದಶಮಿ’ಯೇ ಈ ಸಲ 1ನೇ ದಿನ ಬಂದಿದೆ. ಸಂಪ್ರದಾಯದಂತೆ ಆಯುಧಪೂಜೆಯ ಮರು ದಿನ ವಿಜಯದಶಮಿ ಮೆರವಣಿಗೆ (ಜಂಬೂಸವಾರಿ) ಮಾಡಬೇಕಾಗುತ್ತದೆ’ ಎಂದು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್‌ ದೀಕ್ಷಿತ್ ಪ್ರತಿಕ್ರಿಯಿಸಿದರು.

‘ಪಂಚಾಂಗದ ಪ್ರಕಾರ ನಡೆಸಲಾಗುವ ಉತ್ಸವವಿದು. ಉನ್ನತಮಟ್ಟದ ಸಮಿತಿ ಸಭೆಯಲ್ಲಿ ಚರ್ಚೆಯಾಗಿ ಸರ್ಕಾರ ಅಂತಿಮವಾಗಿ ತೀರ್ಮಾನಿಸಬೇಕಾಗುತ್ತದೆ’ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.