ADVERTISEMENT

ಮೈಸೂರು ದಸರಾ: ಹಲವು ಬಾರಿ ಸರಳ

410ನೇ ದಸರಾ ಆಚರಣೆಯ ರೂಪುರೇಷೆ ಸಭೆ ಬೆಂಗಳೂರಿನಲ್ಲಿ ಇಂದು

ಡಿ.ಬಿ, ನಾಗರಾಜ
Published 7 ಸೆಪ್ಟೆಂಬರ್ 2020, 16:16 IST
Last Updated 7 ಸೆಪ್ಟೆಂಬರ್ 2020, 16:16 IST
ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ (ಸಂಗ್ರಹ ಚಿತ್ರ)
ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ (ಸಂಗ್ರಹ ಚಿತ್ರ)   

ಮೈಸೂರು: ನಾಡಹಬ್ಬ ಮೈಸೂರು ದಸರಾವನ್ನು ಸರಳವಾಗಿ ಆಚರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಘೋಷಿಸಿದ್ದಾರೆ.

ಸರಳ ದಸರಾ ಆಚರಣೆ ಯಾವ ರೀತಿ ನಡೆಯಬೇಕು ಎಂಬ ಬಗ್ಗೆ ಚರ್ಚಿಸಿ ನಿರ್ಧರಿಸಲಿಕ್ಕಾಗಿಯೇ, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮಂಗಳವಾರ (ಸೆ.8) ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಉನ್ನತ ಅಧಿಕಾರಿಗಳನ್ನೊಳಗೊಂಡ ಸಭೆ ನಿಗದಿಯಾಗಿದೆ.

ಕ್ರಿ.ಶ.1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಮೊದಲ ಬಾರಿಗೆ ಆಚರಿಸಲ್ಪಟ್ಟ ದಸರಾಗೆ ಇದೀಗ 410ರ ಸಂಭ್ರಮ. ಮೈಸೂರು ಸಂಸ್ಥಾನದ ಅರಸರು ಸಹ ತಮ್ಮ ಆಳ್ವಿಕೆಯಲ್ಲಿ ಹಲವು ಬಾರಿ ದಸರಾ ಆಚರಿಸದಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ADVERTISEMENT

1969ರವರೆಗೂ ಮೈಸೂರಿನ ಅರಸರೇ ದಸರಾವನ್ನು ಅದ್ಧೂರಿಯಿಂದ ಆಚರಿಸಿದ್ದಾರೆ. ಆಗಿನ ಪ್ರಧಾನಿ ಇಂದಿರಾಗಾಂಧಿ ರಾಜರಿಗೆ ನೀಡುತ್ತಿದ್ದ ರಾಜಧನ ಸ್ಥಗಿತಗೊಳಿಸಿದ ಬೆನ್ನಿಗೆ, ವಿಜೃಂಭಣೆಯ ದಸರಾ ಆಚರಣೆಯನ್ನು ಮಹಾರಾಜರು ಸ್ಥಗಿತಗೊಳಿಸಿದ್ದು ಇತಿಹಾಸ.

‘ಮೈಸೂರಿನ ಪ್ರಮುಖ ಆಕರ್ಷಣೆ ದಸರಾ ಆಚರಿಸಲ್ಲ ಎಂದು ಮಹಾರಾಜರು ಘೋಷಿಸುತ್ತಿದ್ದಂತೆ; ಕನ್ನಡ ಕ್ರಾಂತಿ ದಳದ ನಾ.ನಾಗಲಿಂಗಸ್ವಾಮಿ ಪರಂಪರೆ ಮುಂದುವರೆಸಲು ಮುನ್ನುಡಿ ಬರೆದರು. ವಿಜಯದಶಮಿ ದಿನ ಗೆಳೆಯರೊಡನೆ 1970ರಲ್ಲಿ ಜಂಬೂಸವಾರಿಯನ್ನು ನಡೆಸಿದರು’ ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘1971ರಲ್ಲಿ ಆಗಿನ ಶಾಸಕ ಡಿ.ಜಯದೇವರಾಜ ಅರಸ್‌, ಜಾವಾ ಕಂಪನಿ ಅಧ್ಯಕ್ಷ ಎಫ್.ಕೆ.ಇರಾನಿ, ಮುನ್ಸಿಪಲ್ ಅಧ್ಯಕ್ಷ ಬಿ.ಸಿ.ಲಿಂಗಯ್ಯ ನೇತೃತ್ವದ ಸಮಿತಿ ಜಂಬೂ ಸವಾರಿ ನಡೆಸಿತು. 1972ರಲ್ಲಿ ಆಗಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ನೇತೃತ್ವ ದಸರೆಗೆ ಸಿಕ್ಕಿತು’ ಎಂದು ಅವರು ಹೇಳಿದರು.

‘1973ರಲ್ಲೂ ಅದ್ಧೂರಿತನ ಇರಲಿಲ್ಲ. 1974ರಲ್ಲಿ ಜಯಚಾಮರಾಜ ಒಡೆಯರ್ ನಿಧನದಿಂದ ಆಚರಣೆಗೊಳ್ಳಲಿಲ್ಲ. 1977ರಲ್ಲಿ ಜಂಬೂಸವಾರಿ ದಿನದಂದೇ ವಿದ್ಯಾರ್ಥಿಗಳ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದರಿಂದ ಮೆರವಣಿಗೆಯೇ ನಡೆಯಲಿಲ್ಲ’ ಎಂಬುದನ್ನು ಅರಸ್ ನೆನಪು ಮಾಡಿಕೊಂಡರು.

1975ರಿಂದಲೂ ಸರ್ಕಾರದ ಅನುದಾನ: ದೇವರಾಜ ಅರಸು ಮುಖ್ಯಮಂತ್ರಿಯಿದ್ದಾಗಲೇ ದಸರಾಗೆ ಸರ್ಕಾರದಿಂದ ಅನುದಾನ ನೀಡಿದರು. 1975ರಲ್ಲಿ ಇದು ಶುರುವಾಯಿತು. ಆಗಿನಿಂದಲೂ ಅದ್ಧೂರಿತನ ಹೆಚ್ಚಿತು.

1983, 1992, 1997ರಲ್ಲಿ ಬರದ ಕಾರಣದಿಂದ ಸರಳ ದಸರಾ ಆಚರಣೆಗೊಂಡರೆ, 2000ನೇ ಇಸ್ವಿಯಲ್ಲಿ ರಾಜ್‌ಕುಮಾರ್ ಅಪಹರಣದಿಂದ ಸರಳವಾಗಿ ಆಚರಿಸಲ್ಪಟ್ಟಿತು.

2001ರಲ್ಲಿ ಗುಜರಾತ್ ಭೂಕಂಪ, 2002, 2011, 2012ರಲ್ಲಿ ರಾಜ್ಯವನ್ನು ತೀವ್ರವಾಗಿ ಕಾಡಿದ ಬರ, 2015, 2016ರಲ್ಲಿ ರೈತರ ಸರಣಿ ಆತ್ಮಹತ್ಯೆ, ಬರದ ಕಾರಣದಿಂದ ಸರಳ ದಸರಾ ಆಚರಣೆಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.