ADVERTISEMENT

‘ಈದ್‌ ಉಲ್‌ ಫಿತ್ರ್‌’ ಸಂಭ್ರಮ; ಎಲ್ಲೆಡೆ ಸಡಗರ

ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ; ಮುಸ್ಲಿಂ ಧರ್ಮ ಗುರುಗಳಿಂದ ಪ್ರವಚನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 15:13 IST
Last Updated 5 ಜೂನ್ 2019, 15:13 IST

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಬುಧವಾರ ‘ಈದ್-ಉಲ್-ಫಿತ್ರ್‌’ ಹಬ್ಬವನ್ನು ಶ್ರದ್ಧಾ–ಭಕ್ತಿಯ ಜತೆಗೆ ಸಡಗರ, ಸಂಭ್ರಮದಿಂದ ಮುಸ್ಲಿಮರು ಆಚರಿಸಿದರು.

ನಗರದ ತಿಲಕ್‌ ನಗರ ಈದ್ಗಾ, ರಾಜೀವ್‌ ನಗರ ಈದ್ಗಾ, ಕಲ್ಯಾಣಗಿರಿಯಲ್ಲಿನ ಈದ್ಗಾ ಮೈದಾನ ಸೇರಿದಂತೆ ವಿವಿಧೆಡೆಯ ಮಸೀದಿಗಳಲ್ಲೂ ಈದ್‌ ಅಂಗವಾಗಿ ವಾಜೀಬ್ ನಮಾಜ್ (ವಿಶೇಷ ಪ್ರಾರ್ಥನೆ) ಸಲ್ಲಿಸಿದರು. ಬಯಾನ್ (ಸಂದೇಶ) ಆಲಿಸಿದರು. ನಂತರ ‘ಈದ್ ಮುಬಾರಕ್.... ಈದ್ ಮುಬಾರಕ್’ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ದೃಶ್ಯ ಎಲ್ಲೆಡೆ ಗೋಚರಿಸಿತು.

ಮಹಾರಾಜ ಕೃಷ್ಣರಾಜ ಒಡೆಯರ್ ತಮ್ಮ ಆಳ್ವಿಕೆಯಲ್ಲಿ ಕಟ್ಟಿಸಿದ ನಗರದ ಇರ್ವೀನ್ ರಸ್ತೆಯಲ್ಲಿನ ಜಾಮೀಯಾ ಮಸೀದಿ, ಅಶೋಕ ರಸ್ತೆಯ ಮಸ್ಜೀದೆ ಹಾಜಂ ಮಸೀದಿ ಸೇರಿದಂತೆ ವಿವಿಧೆಡೆಯ ಮಸೀದಿಗಳಲ್ಲೂ ಶ್ರದ್ಧಾ-ಭಕ್ತಿಪೂರ್ವಕವಾಗಿ ಈದ್‌ ವಿಶೇಷ ಪ್ರಾರ್ಥನೆಯನ್ನು ಮುಸ್ಲಿಂ ಸಮೂಹ ಸಲ್ಲಿಸಿತು.

ADVERTISEMENT

ಬೆಳಿಗ್ಗೆ 9ರ ಆಸುಪಾಸಿನಲ್ಲೇ ‘ತಕ್ಬೀರ್’ (ಅಲ್ಲಾಹುನ ಸ್ಮರಣೆ) ಹೇಳುತ್ತಾ ಮಸೀದಿಗಳತ್ತ ಮುಸ್ಲಿಂ ಪುರುಷರು, ಬಾಲಕರು ಹೆಜ್ಜೆ ಹಾಕುತ್ತಿದ್ದ ದೃಶ್ಯ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಗೋಚರಿಸಿತು. ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮನೆಗೆ ಬಂದು, ಹಬ್ಬಕ್ಕಾಗಿ ವಿಶೇಷವಾಗಿಯೇ ಸಿದ್ಧಪಡಿಸಲಾಗಿದ್ದ ಭಕ್ಷ್ಯ ಭೋಜನ ಸವಿದರು.

ಸಾಮೂಹಿಕ ಪ್ರಾರ್ಥನೆ ಬಳಿಕ ಬಡವರಿಗೆ ಈದ್ಗಾ ಬಳಿ, ಮಸೀದಿಗಳ ಮುಂಭಾಗ ಪ್ರತಿಯೊಬ್ಬ ಮುಸ್ಲಿಮರು ದಾನ (ಜಕಾತ್) ನೀಡಿದರು. ಎಲ್ಲೆಡೆ ಹಬ್ಬದ ಸಡಗರ ಮುಗಿಲು ಮುಟ್ಟಿತ್ತು. ಬೀದಿ ಬೀದಿಗಳಲ್ಲೂ ಅತ್ತರ್‌ನ ಘಮಲು ಪಸರಿಸಿತ್ತು. ಚಿಕ್ಕ ಮಕ್ಕಳಂತೂ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದರು. ಹಿರಿಯರು ಸಹ ಪ್ರೀತಿಯಿಂದ ‘ಈದಿ’ (ಹಬ್ಬದ ಸಂಭ್ರಮದಲ್ಲಿ ನೀಡುವ ಉಡುಗೊರೆ) ನೀಡಿದರು.

ರಸ್ತೆಯಲ್ಲೇ ಕುಳಿತರು:

ಹಬ್ಬದ ದಿನ ವಿಶೇಷ ಪ್ರಾರ್ಥನೆಗೈಯಲಿಕ್ಕಾಗಿ ನಗರದ ತಿಲಕ್‌ ನಗರ, ರಾಜೀವ್ ನಗರ, ಕಲ್ಯಾಣ ನಗರದ ಈದ್ಗಾ ಮೈದಾನಗಳಿಗೆ ಅಸಂಖ್ಯಾತ ಮುಸ್ಲಿಮರು ಜಮಾಯಿಸಿದ್ದರಿಂದ ಮೂರು ಮೈದಾನಗಳು ಕಿಕ್ಕಿರಿದ ಜನರಿಂದ ತುಂಬಿದ್ದವು. ಬಹುತೇಕರಿಗೆ ಈದ್ಗಾ ಮೈದಾನದೊಳಗೆ ಪ್ರವೇಶಿಸಲು ಅವಕಾಶ ಸಿಗದಿದ್ದುದರಿಂದ ಸುತ್ತಲಿನ ರಸ್ತೆಗಳ ಮೇಲೆಯೇ ಆಸೀನರಾಗಿ ವಿಶೇಷ ಪ್ರಾರ್ಥನೆಗೈದರು. ಬಳಿಕ ಧರ್ಮಗುರು ನೀಡಿದ ಸಂದೇಶವನ್ನು ತದೇಕಚಿತ್ತರಾಗಿ ಆಲಿಸಿದರು.

ಈದ್ಗಾ ಮೈದಾನಗಳ ಸುತ್ತಲೂ ಜಕಾತ್ (ದಾನ) ಪಡೆಯಲು ಹಲವರು ಜಮಾಯಿಸಿದ್ದರು. ಸಾಮೂಹಿಕ ಪ್ರಾರ್ಥನೆ ಮುಗಿಸಿಕೊಂಡು ಮೈದಾನದಿಂದ ಹೊರ ಬಂದ ಪ್ರತಿಯೊಬ್ಬ ಮುಸ್ಲಿಂ ಬಳಿಯೂ ದಾನಕ್ಕಾಗಿ ಮುಗಿಬಿದ್ದ ಚಿತ್ರಣವೂ ಗೋಚರಿಸಿತು.

ಈದ್ಗಾ ಸಮಿತಿಗಳು ಸಹ ಮೈದಾನದ ಸುತ್ತ ಮೂಲ ಸೌಲಭ್ಯ ಕಲ್ಪಿಸಿದ್ದವು. ಶುದ್ಧ ಕುಡಿಯುವ ನೀರು, ಅಲ್ಲಲ್ಲೇ ಜ್ಯೂಸ್‌ ವಿತರಣೆ ಸಹ ನಡೆಯಿತು. ಊಟದ ವ್ಯವಸ್ಥೆಯೂ ಕಂಡುಬಂದಿತು. ಹಿರಿಯರೊಟ್ಟಿಗೆ ಹಬ್ಬದ ಸಾಮೂಹಿಕ ಪ್ರಾರ್ಥನೆಗಾಗಿ ಬಂದಿದ್ದ ಚಿಣ್ಣರನ್ನು ಆಕರ್ಷಿಸಲು ಮಕ್ಕಳ ಆಟಿಕೆ ವ್ಯಾಪಾರಿಗಳು ಈದ್ಗಾ ಮೈದಾನದ ಸುತ್ತ ಬೀಡುಬಿಟ್ಟು ಭರ್ಜರಿ ವಹಿವಾಟು ನಡೆಸಿದರು.

ಸುಖ–ಸಮೃದ್ಧಿ ನೆಲೆಸಲಿ: ಸರ್ಖಾಜಿ

ತಿಲಕ್ ನಗರದ ಈದ್ಗಾದಲ್ಲಿ ನಡೆದ ಈದ್ ನಮಾಜ್‌ಗೆ ಸರ್ಖಾಜಿ ಮೊಹಮ್ಮದ್ ಉಸ್ಮಾನ್ ಷರೀಫ್ ನೇತೃತ್ವ ವಹಿಸಿದ್ದರು.

ನಮಾಜ್ ಬಳಿಕ ಪ್ರವಚನ (ಖುತ್ಬಾ) ನೀಡಿ, ಈದ್‌ ಉಲ್‌ ಫಿತ್ರ್ ಹಬ್ಬದ ಮಹತ್ವ ಮತ್ತು ಮಾನವ ಕುಲಕ್ಕೆ ಅದು ನೀಡುವ ಸಂದೇಶವನ್ನು ನೆನಪಿಸಿದರು.

‘ಫಿತ್ರ್ ಜಕಾತ್ ನೀಡುವುದು ಈ ಹಬ್ಬದ ಪ್ರಮುಖ ಆಚರಣೆಯಾಗಿದೆ. ಹಬ್ಬದ ದಿನ ಯಾರೂ ಹಸಿದಿರಬಾರದು ಎಂಬುದು ಇದರ ಉದ್ದೇಶ. ನೆರೆ ಮನೆಯವನು ಹಸಿದಿರುವಾಗ, ಹೊಟ್ಟೆತುಂಬಾ ಉಣ್ಣುವವನು ಮುಸ್ಲಿಮನಲ್ಲ ಎಂದು ಪ್ರವಾದಿ ಮಹಮ್ಮದ್ ಹೇಳಿದ್ದಾರೆ.‌ ಅವರು ನೀಡಿರುವ ಸಂದೇಶವನ್ನು ಪ್ರತಿಯೊಬ್ಬರು ಪಾಲಿಸಿ’ ಎಂದು ಹೇಳಿದರು.

‘ಒಂದು‌‌ ತಿಂಗಳ ರಮ್ಜಾನ್ ಉಪವಾಸದಲ್ಲಿ ಪ್ರಾರ್ಥನೆ, ವಿಶೇಷ ನಮಾಜ್ ನಿರ್ವಹಿಸಿ ಪುಣ್ಯ ಸಂಪಾದಿಸಿದ್ದೀರಿ. ತಾಳ್ಮೆ, ಸಹನೆಯನ್ನು ಕಲಿತಿದ್ದೀರಿ.‌ ರಮ್ಜಾನ್ ತಿಂಗಳಲ್ಲಿ ಪಡೆದ ಚೈತನ್ಯ ಕಳೆದು ಹೋಗದಂತೆ ಎಚ್ಚರವಹಿಸಿ’ ಎಂದು ಕಿವಿಮಾತು ತಿಳಿಸಿದರು.

‘ಎಲ್ಲರೂ ಪರಸ್ಪರ ಶಾಂತಿ ಸೌಹಾರ್ದತೆಯಿಂದ ಬದುಕುವಂತಾಗಲಿ. ನಾಡಿನಲ್ಲಿ ಸುಖ‌, ಸಮೃದ್ಧಿ ನೆಲೆಸಲಿ‌‌’ ಎಂದು ಸರ್ಖಾಜಿ ಇದೇ ಸಂದರ್ಭ ಅಲ್ಲಾಹುವಿನಲ್ಲಿ ಪ್ರಾರ್ಥಿಸಿದರು.

ಶಾಸಕರಾದ ತನ್ವೀರ್‌ ಶೇಠ್‌, ಎಲ್‌.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ಮಾಜಿ ಶಾಸಕ ವಾಸು ಸೇರಿದಂತೆ ವಿವಿಧ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಾರ್ಥನೆ ನಿತ್ಯವೂ ನಡೆಯಲಿ: ಮುಫ್ತಿ

ರಾಜೀವ್‌ ನಗರದ ಈದ್ಗಾದಲ್ಲಿ ನಡೆದ ಈದ್ ನಮಾಜ್‌ಗೆ ಮುಫ್ತಿ ಸಲ್ಮಾನ್‌ ಸಾಹೇಬ್‌ ನೇತೃತ್ವ ವಹಿಸಿದ್ದರು.

ಸಾಮೂಹಿಕ ಪ್ರಾರ್ಥನೆ ಬಳಿಕ ಪ್ರವಚನ ನೀಡಿದ ಮುಫ್ತಿ, ‘ಹಬ್ಬದ ದಿನ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದರೆ ಪ್ರಯೋಜನವಿಲ್ಲ. ನಿತ್ಯವೂ ನಮಾಜ್ ಮಾಡಬೇಕು. ಪ್ರತಿ ಶುಕ್ರವಾರ ವಿಶೇಷ ಪ್ರಾರ್ಥನೆಗೈಯಬೇಕು. ಪವಿತ್ರ ಗ್ರಂಥ ಕುರಾನ್ ಓದಿ, ಅರ್ಥೈಸಿಕೊಂಡು ಅದರಂತೆ ಬದುಕಬೇಕು’ ಎಂದು ಕಿವಿಮಾತು ಹೇಳಿದರು.

‘ಮಕ್ಕಳು–ಯುವಕರ ಬಗ್ಗೆ ಪೋಷಕರಿಗೆ ಎಚ್ಚರಿಕೆಯಿರಬೇಕು. ಕೆಟ್ಟ ಹಾದಿ ತುಳಿಯದಂತೆ ನೋಡಿಕೊಳ್ಳಬೇಕು. ಮಾದಕ ವ್ಯಸನ ಪದಾರ್ಥಗಳಿಂದ ದೂರದಲ್ಲಿಟ್ಟಿರಬೇಕು. ಕೆಟ್ಟ ವಾತಾವರಣ ಪ್ರವೇಶಿಸದಂತೆ ಕಣ್ಗಾವಲಿಟ್ಟಿರಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.