ADVERTISEMENT

ಮೈಸೂರು ಪಾಲಿಕೆ ಚುನಾವಣೆ: ಸೋಮವಾರ ಕೆಪಿಸಿಸಿಗೆ ವರದಿ: ಧ್ರುವನಾರಾಯಣ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 8:13 IST
Last Updated 27 ಫೆಬ್ರುವರಿ 2021, 8:13 IST
   

ಚಾಮರಾಜನಗರ: ಮೈಸೂರು ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಯ ಸಂದರ್ಭದಲ್ಲಿ ನಡೆದ ಘಟನಾವಳಿಗಳ ಬಗ್ಗೆ ಸೋಮವಾರ ಕೆಪಿಸಿಸಿ ಅಧ್ಯಕ್ಷರಿಗೆ ಹಾಗೂ ಶಾಸಕಾಂಗ ಪಕ್ಷದ ನಾಯಕರಿಗೆ ವರದಿ‌ ನೀಡುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಚುನಾವಣಾ ವೀಕ್ಷಕರಾಗಿದ್ದ ಆರ್.ಧ್ರುವನಾರಾಯಣ ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮೇಯರ್ ಚುನಾವಣೆಗೆ ವೀಕ್ಷಕರಾಗಲು ಸಿದ್ದರಾಮಯ್ಯ ಅವರೇ ಕಾರಣ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಆದೇಶದಂತೆ ವೀಕ್ಷಕನಾಗಿ ಕಾರ್ಯನಿರ್ವಹಿಸಿದ್ದೇನೆ. ಚುನಾವಣೆ ಸಂದರ್ಭದಲ್ಲಿ ನಡೆದ ಘಟನೆ ಆಕಸ್ಮಿಕ.
ಆ ಸಮಯದಲ್ಲಿ ಪಕ್ಷದ ಪಾಲಿಕೆ ಸದಸ್ಯರು ಜೆಡಿಎಸ್ ಬೆಂಬಲಿಸುವ ತೀರ್ಮಾನ ಕೈಗೊಂಡರು' ಎಂದು ಹೇಳಿದರು.

ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು: 'ಜೆಡಿಎಸ್ ನವರು ಮಾತಿನಿಂತೆ ಎಂದಿಗೂ ನಡೆದಿಲ್ಲ‌. ಒಪ್ಪಂದದಂತೆ ಪಾಲಿಕೆ ಚುನಾವಣೆ ನಡೆದಿಲ್ಲ. ಒಪ್ಪಂದದಂತೆ ಈ ಬಾರಿ ನಮಗೆ ಮೇಯರ್ ಸ್ಥಾನ ಸಿಗಬೇಕಿತ್ತು. ಜೆಡಿಎಸ್ ನವರು ಒಪ್ಪಂದದ ಪ್ರಕಾರ ನಡೆದುಕೊಂಡಿಲ್ಲ. ಸಿದ್ದರಾಮಯ್ಯ ಅವರು ಮೇಯರ್ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಡಬಾರದೆಂದು ಸ್ಪಷ್ಟ ಸಂದೇಶ ಕೊಟ್ಟಿದ್ದರು. ಡಿ.ಕೆ ಶಿವಕುಮಾರ್ ಸಹ ಮೇಯರ್ಸ್ಥಾನ ಉಳಿಸಿಕೊಳ್ಳಲು ಹೇಳಿದ್ದರು. 12 ಗಂಟೆಯವರೆಗೂ ಎಲ್ಲರೂ ಒಟ್ಟಾಗಿದ್ದೆವು. ಚುನಾವಣೆಗೆ ಹೋದ ಸಂಧರ್ಭದಲ್ಲಿ ಪಾಲಿಕೆ ಸದಸ್ಯರ ನಿರ್ಧಾರ ಬದಲಾಗಿದೆ. ಕೊನೆಕ್ಷಣದಲ್ಲಿ ಏನಾಯಿತು ಎಂಬುದರ ಬಗ್ಗೆ ವಿವರಣೆ ಪಡೆದು ವರದಿ ಸಲ್ಲಿಸುತ್ತೇನೆ' ಎಂದರು.

ADVERTISEMENT

'ಪಾಲಿಕೆ ಸದಸ್ಯರು ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡಿದ್ದು ತಪ್ಪು. ಪತ್ರಿಕಾ ಹೇಳಿಕೆ ನೀಡಿದ್ದು ತಪ್ಪು. ಪಕ್ಷದ ಆಂತರಿಕ ಸಮಸ್ಯೆಗಳನ್ನು ಪಕ್ಷದ ವೇದಿಕೆಯಲ್ಲೇ ಬಗೆಹರಿಸಿಕೊಳ್ಳಬೇಕು' ಎಂದರು.

'ನಮ್ಮಲ್ಲಿ ಭಿನ್ನಭಿಪ್ರಾಯ ಇಲ್ಲ. ನಮ್ಮದು ದೊಡ್ಡ ಕುಟುಂಬ. ಎಲ್ಲರೂ ಒಗ್ಗಟ್ಟಾಗಿದ್ದೇವೆ.
ಪಕ್ಷದಲ್ಲಿ ಬಣಗಳೂ ಇಲ್ಲ. ಎಲ್ಲವನ್ನೂ ಸರಿ ಮಾಡುತ್ತೇವೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿದ್ದರಾಮಯ್ಯ ಯಾವತ್ತಿಗೂ ಹುಲಿಯೇ:

ಸಿದ್ದರಾಮಯ್ಯ ಎಂಬ ಹುಲಿಯನ್ನು ಕುಮಾರಸ್ವಾಮಿ ಬೋನಿಗೆ ಹಾಕಿದ್ದಾರೆ ಎಂಬ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಧ್ರುವನಾರಾಯಣ ಅವರು, 'ಸಿದ್ದರಾಮಯ್ಯ ಎಂದಿಗೂ ಹುಲಿಯೇ. ಇಂತಹ ಇಲಿಗಳಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ' ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.