ADVERTISEMENT

ಹಂಸಲೇಖರ ಯಾವ ತಪ್ಪಿಗೆ ಕ್ಷಮೆ, ಬಹಿರಂಗ ಚರ್ಚೆಗೆ ಬನ್ನಿ: ಮೈಸೂರು ಮಾಜಿ ಮೇಯರ್‌

ಹಂಸಲೇಖಗೆ ಶೋಷಿತರು–ಹಿಂದುಳಿದವರ ಬೆಂಬಲ; ಮಾಜಿ ಮೇಯರ್‌ ಪುರುಷೋತ್ತಮ್‌

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 13:32 IST
Last Updated 18 ನವೆಂಬರ್ 2021, 13:32 IST
ಹಂಸಲೇಖ
ಹಂಸಲೇಖ   

ಮೈಸೂರು: ‘ಕ್ಷಮೆ ಕೋರುವಂತಹ, ಮತ್ತೊಬ್ಬರಿಗೆ ನೋವುಂಟು ಮಾಡುವಂತಹ ಮಾತುಗಳನ್ನು ಹಂಸಲೇಖ ಎಂದೂ ಆಡಿಲ್ಲ. ಆದರೂ ಪೇಜಾವರ ಮಠದ ಮುಂಭಾಗ ಬಹಿರಂಗ ಕ್ಷಮೆಗೆ ಆಗ್ರಹಿಸುತ್ತಿರುವವರು ನಮ್ಮೊಂದಿಗೆ ಬಹಿರಂಗ ಚರ್ಚೆಗೆ ಬನ್ನಿ’ ಎಂದು ಮಾಜಿ ಮೇಯರ್‌ ಪುರುಷೋತ್ತಮ್‌ ಗುರುವಾರ ಇಲ್ಲಿ ಸವಾಲು ಹಾಕಿದರು.

‘ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಹಂಸಲೇಖ ಯಾವುದೇ ಜಾತಿ, ಧರ್ಮ, ವ್ಯಕ್ತಿಯ ವಿರುದ್ಧ ಮಾತನಾಡಲಿಲ್ಲ. ವಾಸ್ತವ ಸ್ಥಿತಿ ಬಗ್ಗೆ ಹೇಳಿದರಷ್ಟೇ. ಆದರೂ ಅವರ ಹೇಳಿಕೆಯನ್ನು ವೈಭವೀಕರಿಸಿ ಕ್ಷಮೆ ಕೇಳಬೇಕು ಎನ್ನುವುದು ಖಂಡನೀಯ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

‘ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖರಿಗೂ ಅಪಾರ ಗೌರವವಿದೆ. ಆದ್ದರಿಂದಲೇ ವೈಯಕ್ತಿಕವಾಗಿ ಕ್ಷಮೆಯನ್ನೂ ಕೋರಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸಾಮಾಜಿಕ ಸಮಾನತೆ ಇಂದಿಗೂ ಕಾಣದಾಗಿದೆ ಎಂಬ ನೋವಿನಿಂದ ಮಾತನಾಡಿದ್ದರು. ಆಕ್ಷೇಪವಾದ ಯಾವುದೇ ಮಾತನ್ನು ಆಡಿಲ್ಲ. ದಲಿತರ ಮನೆಗೆ ಬಂದವರು ಅವರ ಆಹಾರವನ್ನೇ ತಿನ್ನುತ್ತಾರೆಯೇ ಎಂದಷ್ಟೇ ಪ್ರಶ್ನಿಸಿದ್ದರು. ಆದರೆ, ಇದನ್ನೇ ಇಟ್ಟುಕೊಂಡು ಅವರಿಂದ ಕ್ಷಮೆ ಕೇಳಿಸಿದ್ದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕ್ಷಮೆ ಕೋರುವ ಮೂಲಕ ಹಂಸಲೇಖ ಇತಿಶ್ರೀ ಹಾಕಿದರೂ; ಹಿಂದೂ ಸಂಘಟನೆಯ ಹೆಸರಿನಲ್ಲಿ ಧರ್ಮ-ಧರ್ಮಗಳ ನಡುವೆ ಎತ್ತಿ ಕಟ್ಟುವ ಕುತಂತ್ರ ಮುಂದುವರೆಸಿ, ಬಹಿರಂಗ ಕ್ಷಮೆ ಕೇಳಲು ಆಗ್ರಹಿಸುತ್ತಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಮತ್ತೆ ಕ್ಷಮೆ ಕೇಳಬಾರದು. ಅವರೊಂದಿಗೆ ಶೋಷಿತ ಸಮುದಾಯ, ಹಿಂದುಳಿದ ಸಮುದಾಯಗಳಿವೆ’ ಎಂದು ಪುರುಷೋತ್ತಮ್‌ ಬೆಂಬಲ ವ್ಯಕ್ತಪಡಿಸಿದರು.

ಬಿಎಸ್‌ಪಿ ಮುಖಂಡ ಆದರ್ಶ ರಾಜವಂಶಿ, ಅಶೋಕ್, ಶ್ಯಾಮ್, ಸಾಹಿತಿ ಸಿದ್ದಸ್ವಾಮಿ ಪತ್ರಿಕಾಗೋಷ್ಠಿಯಲ್ಲಿದ್ದರು.

‘ಸಮಾಜ ಒಡೆಯೋ ಸಂಸದ’

‘ಸಂಸದರ ಸ್ಥಾನಮಾನಕ್ಕೆ ಗೌರವ–ಘನತೆಯಿಲ್ಲದಂತೆ ಪ್ರತಾಪ ಸಿಂಹ ನಡೆದುಕೊಳ್ಳುತ್ತಿದ್ದಾರೆ. ಸದಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಪ್ರಚಾರಕ್ಕಾಗಿ ಹಾತೊರೆಯುತ್ತಾರೆ’ ಎಂದು ಪುರುಷೋತ್ತಮ್‌ ವಾಗ್ದಾಳಿ ನಡೆಸಿದರು.

ಪ್ರಚಾರಕ್ಕಾಗಿ ಹಂಸಲೇಖ ಮಾತಿನ ವಿಷಯದಲ್ಲೂ ಮೂಗು ತೂರಿಸಿದ ಪ್ರತಾಪ ಸಿಂಹ, ‘ದಲಿತರ ಮೇಲಾಗುತ್ತಿರುವ ಶೋಷಣೆ, ದೌರ್ಜನ್ಯದ ಬಗ್ಗೆ ಎಂದಾದರೂ ಸಂಸತ್ತಿನಲ್ಲಿ ಮಾತನಾಡಿದ್ದೀರಾ?’ ಎಂದು ಕಿಡಿಕಾರಿದರು.

‘ಶಾಸಕ ಪ್ರಿಯಾಂಕ ಖರ್ಗೆ ಗಂಡೋ-ಹೆಣ್ಣೋ ಎಂದು ಪ್ರಶ್ನಿಸಿದ್ದಾರೆ. ತಮ್ಮ ಮನೆಗೆ ಕರೆಸಿಕೊಂಡು ಯಾವಾಗ ಈ ಬಗ್ಗೆ ಪ್ರಯೋಗ ಮಾಡಿದ್ದರೋ ಎಂಬುದು ಗೊತ್ತಿಲ್ಲ. ಪದ್ಮಶ್ರೀ ಪುರಸ್ಕೃತರಾದ ಮಂಜಮ್ಮ ಜೋಗತಿ ಸಹಚರರಿಗೆ ಅಪಮಾನ ಮಾಡಿದ್ದಾರೆ. ಪ್ರತಾಪ ಸಿಂಹ ಹೇಳಿಕೆ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು’ ಎಂದು ಪುರುಷೋತ್ತಮ್‌ ಹೇಳಿದರು.

‘ಜೈಭೀಮ್ ಚಲನಚಿತ್ರ ಸತ್ಯ ಘಟನೆ ಆಧಾರಿತವಾಗಿದ್ದು, ಅದರಲ್ಲಿ ನಟ ಸೂರ್ಯ ನಟಿಸಿದ್ದಾರೆ. ಇದೀಗ ಅವರ ಮೇಲೆಯೂ ಕೆಲವರು ಟೀಕೆ ಮಾಡುತ್ತಿರುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.