ADVERTISEMENT

ಮೈಸೂರು | ಮಣ್ಣಿನಲ್ಲಿ ಮೂಡಿದ ಗಣೇಶ: ಚಿಣ್ಣರಲ್ಲಿ ಹರ್ಷ

ಮಾಧವ ಕೃಪಾ ಗಣೇಶೋತ್ಸವ ಸಮಿತಿಯಿಂದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 7:38 IST
Last Updated 25 ಆಗಸ್ಟ್ 2025, 7:38 IST
ಮೈಸೂರಿನ ಮಾಧವ ಕೃಪಾ ಗಣೇಶೋತ್ಸವ ಸಮಿತಿಯು ಭಾನುವಾರ ಆಯೋಜಿಸಿದ್ದ ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಿ ಕಾರ್ಯಾಗಾರದಲ್ಲಿ ಮಕ್ಕಳು ಗಣೇಶ ಮೂರ್ತಿ ತಯಾರಿಸಿದರು
ಮೈಸೂರಿನ ಮಾಧವ ಕೃಪಾ ಗಣೇಶೋತ್ಸವ ಸಮಿತಿಯು ಭಾನುವಾರ ಆಯೋಜಿಸಿದ್ದ ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಿ ಕಾರ್ಯಾಗಾರದಲ್ಲಿ ಮಕ್ಕಳು ಗಣೇಶ ಮೂರ್ತಿ ತಯಾರಿಸಿದರು   

ಮೈಸೂರು: ಕೈಯಲ್ಲಿ ಮಣ್ಣು ಹಿಡಿದು, ತಮ್ಮಿಷ್ಟದ ಗಣೇಶನಿಗೆ ರೂಪ ನೀಡಿ ಚಿಣ್ಣರು ಸಂಭ್ರಮಿಸಿದರು. ಮೂರ್ತಿ ತಯಾರಿಸಲು ನೈಸರ್ಗಿಕ ಮಣ್ಣು ಹಾಗೂ ತುಳಸಿ ಬೀಜ ಬಳಸಿ ಪರಿಸರ ಪ್ರೇಮ ಮೆರೆದರು.

ಮಾಧವ ಕೃಪಾ ಗಣೇಶೋತ್ಸವ ಸಮಿತಿಯು ಭಾನುವಾರ ಆಯೋಜಿಸಿದ್ದ ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಿ ಕಾರ್ಯಾಗಾರದಲ್ಲಿ ನೂರಾರು ಮಕ್ಕಳು ಭಾಗವಹಿಸಿದ್ದರು.

ಲಿಟ್ಲ್‌ ಸ್ಕ್ವಿಡ್‌ ಶಾಲೆಯ ಚಿತ್ರಕಲಾ ಶಿಕ್ಷಕ ಭರತ್ ಕುಮಾರ್, ಅನಿಲ್ ಕುಮಾರ್, ಧೀರಜ್, ಚಾಮರಾಜ್, ರಾಜು, ಪ್ರೀತಂ ಅವರ ತಂಡ ಮಕ್ಕಳಿಗೆ ಗಣೇಶ ವಿಗ್ರಹ ತಯಾರಿಸುವ ಸುಲಭ ವಿಧಾನ ಕಲಿಸಿಕೊಟ್ಟಿತು.

ADVERTISEMENT

ಮಕ್ಕಳು ಮೂರ್ತಿ ತಯಾರಿಸುವಾಗ ಪೋಷಕರೂ ಜೊತೆಗಿದ್ದು, ಸಹಕರಿಸಿದರು. ಮಣ್ಣಿನ ಮುದ್ದೆಯೊಂದು ಗಣೇಶ ಆಕೃತಿಗೆ ತಿರುಗುತ್ತಿರುವ ವಿಧಾನವನ್ನು ಕುತೂಹಲದಿಂದ ಗಮನಿಸಿದ ಮಕ್ಕಳು, ನಂತರ ತಾವೂ ಮೂರ್ತಿ ತಯಾರಿಸಿದರು.

‘ಮಕ್ಕಳು ಕೈಯಾರೆ ತಯಾರಿಸಿದ ಗಣೇಶ ಮೂರ್ತಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜಿಸುತ್ತಾರೆ. ನೀರಿನಲ್ಲಿ ವಿಸರ್ಜನೆ ಮಾಡಿದ ಬಳಿಕ ಆ ನೀರನ್ನು ಹೊರಗಡೆ ಚೆಲ್ಲಿದಾಗ ಅದರಲ್ಲಿರುವ ತುಳಸಿ ಬೀಜ, ಮೊಳಕೆಯೊಡೆದು ಗಿಡವಾಗುತ್ತದೆ. ಈ ಬಾರಿ ಸಾವಿರಕ್ಕೂ ಅಧಿಕ ಮಕ್ಕಳು ನೋಂದಾಯಿಸಿಕೊಂಡಿದ್ದರು. 500ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ’ ಎಂದು ಸಮಿತಿಯ ಸಂಚಾಲಕ ಸಿ.ಕೆ.ರುದ್ರಮೂರ್ತಿ ತಿಳಿಸಿದರು.

ಉದ್ಘಾಟನೆ: ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಿ ಮತ್ತು ಪ್ರಾತ್ಯಕ್ಷಿಕೆ ಸಮಿತಿ ಅಧ್ಯಕ್ಷ ಡಾ.ಆರ್‌.ಎನ್‌.ಸುರೇಶ್‌ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಗಣಪತಿ ಮೂರ್ತಿಯನ್ನು ಹಣ ನೀಡಿ ಖರೀದಿಸುವುದಕ್ಕಿಂತ, ನಾವೇ ತಯಾರಿಸಿ ಪೂಜಿಸಿದಾಗ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ. ಧಾರ್ಮಿಕ ಚಿಂತನೆ ಮೊಳಕೆಯೊಡೆಯುತ್ತದೆ’ ಎಂದರು.

‘ಗಣೇಶನನ್ನು ಮಕ್ಕಳು ಹೆಚ್ಚು ಇಷ್ಟ ಪಡುತ್ತಾರೆ. ಅದರೊಂದಿಗೆ ಆತನ ಆಕೃತಿಯು ನೀಡುವ ಸಂದೇಶಗಳನ್ನೂ ಪಾಲಿಸಬೇಕು. ಗಣೇಶ ಮೂರ್ತಿಯಲ್ಲಿರುವ ಗಜಮುಖವು ಜ್ಞಾನ ಹಾಗೂ ಶಕ್ತಿಯನ್ನು, ದೊಡ್ಡ ಕಿವಿಗಳು ಉತ್ತಮ ಕೇಳುಗನಾಗಬೇಕು ಎಂಬುದನ್ನು ತಿಳಿಸುತ್ತದೆ. ಸಣ್ಣ ಕಣ್ಣು ತೀಕ್ಷ್ನ ದೃಷ್ಟಿ ಹಾಗೂ ಏಕಾಗ್ರತೆಯನ್ನು, ದೊಡ್ಡ ಹೊಟ್ಟೆ ಸಹಿಷ್ಣುತೆಯ ಸಂಕೇತವಾಗಿದೆ. ಇಲಿ ಓಡಾಡುವಾಗ ತಲೆ ತಗ್ಗಿಸಿಕೊಂಡು ಹೋಗುತ್ತದೆ. ಹೀಗಾಗಿ ಚುರುಕುತನ ಹಾಗೂ ವಿನಮ್ರತೆಯ ಸಂಕೇತವಾಗಿ ಅದನ್ನು ಕಾಣುತ್ತೇವೆ. ಈ ಎಲ್ಲಾ ಗುಣಗಳನ್ನು ಮಕ್ಕಳು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಇನ್ನರ್‌ವೀಲ್‌ ಕ್ಲಬ್‌ನ ಸಂಧ್ಯಾ ಸುರೇಶ್, ಗ್ರಾಮ ವಿಕಾಸ ಸಂಯೋಜಕ ನಾಗರಾಜ್‌, ಉದ್ಯಮಿ ಚರಣ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.