ಮೈಸೂರು: ‘ದೇಶದ ಹಿರಿಯ ನಾಗರಿಕರು ಘನತೆಯಿಂದ ಬದುಕಲು ಅಗತ್ಯವಾದಷ್ಟು ಮೊತ್ತದ ಪಿಂಚಣಿಯನ್ನು ಸರ್ಕಾರ ನೀಡಬೇಕು’ ಎಂದು ಸಿಐಟಿಯು ಕಾರ್ಯದರ್ಶಿ ಕೆ.ಎನ್.ಉಮೇಶ್ ಆಗ್ರಹಿಸಿದರು.
ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘವು ಕುವೆಂಪುನಗರದ ವೀಣೆಶೇಷಣ್ಣ ಭವನದ ಗಾನಭಾರತಿ ಸಭಾಂಗಣದಲ್ಲಿ ಶನಿವಾರ ‘ಸಾಮಾಜಿಕ ಭದ್ರತೆಗಾಗಿ ಸಾರ್ವತ್ರಿಕ ಪಿಂಚಣಿ-ತಕ್ಷಣದ ಅಗತ್ಯ’ ಎಂಬ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೌಕರರು ಪಿಂಚಣಿ ಪಡೆಯಬೇಕಾದರೆ ಕಂತಿನ ರೂಪದಲ್ಲಿ ಮೊದಲೇ ಹಣ ಮೀಸಲಿರಿಸುವ ಪದ್ಧತಿ ರದ್ದಾಗಬೇಕು. ಸರ್ಕಾರಿ ಮತ್ತು ಖಾಸಗಿ ಉದ್ಯಮಗಳ ಯಾವುದೇ ನೌಕರರಿಂದ ಮೊದಲೇ ಹಣ ಸಂಗ್ರಹಿಸದೆ, ನಿವೃತ್ತಿಯ ನಂತರ ಸರ್ಕಾರವೇ ಪಿಂಚಣಿ ನೀಡುವ ಪದ್ಧತಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯಾವ ಪಿಂಚಣಿ ಯೋಜನೆಯೂ ಪಿಂಚಣಿದಾರರ ಪರವಾಗಿಲ್ಲ. ಪಿಂಚಣಿಗಾಗಿ ಮೀಸಲಿರಿಸಿದ ಹಣವನ್ನು ಸೇವಾ ಅವಧಿ ಮಧ್ಯದಲ್ಲಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಕೆಲವು ಯೋಜನೆಗಳಲ್ಲಿ ನೋಂದಾಯಿತವಾಗಿದ್ದ ನೌಕರರು ಒಂದು ವೇಳೆ ಅಕಾಲಿಕ ಮರಣಕ್ಕೆ ತುತ್ತಾದರೆ ಪಿಂಚಣಿ ಹಣ ನೌಕರರ ಮಡದಿ-ಮಕ್ಕಳಿಗೆ ದೊರಕುತ್ತದೆ ಎಂಬ ಖಾತ್ರಿಯೂ ಇಲ್ಲ. ನಿವೃತ್ತಿಯ ನಂತರ ದೊರೆಯುವ ಪಿಂಚಣಿಯಿಂದಲೂ ಸಹ ಕನಿಷ್ಠ ಅವಶ್ಯಕತೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅನೇಕ ರೀತಿಯ ಗೊಂದಲಗಳು, ಗಂಭೀರ ಲೋಪದೋಷಗಳು ಈ ಯೋಜನೆಗಳಲ್ಲಿ ತುಂಬಿ ತುಳುಕುತ್ತಿವೆ ಎಂದು ವಿವರಿಸಿದರು.
ದೇಶದ ಜನ ಸಾಮಾನ್ಯರು ಮತ್ತು ಕಾರ್ಮಿಕರ ಪರವಾಗಿ ಧ್ವನಿ ಎತ್ತಿದರೆ, ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರೆ, ದೇಶದ್ರೋಹಿ ಎಂದು ಬಿಂಬಿಸುವ ಮತ್ತು ಕಾನೂನು ಬಾಹಿರವಾಗಿ ಬಂಧಿಸಿ ಹತ್ತಿಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ ಎಂದು ವಿಷಾದಿಸಿದರು.
ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕರನ್ನು ಪಟ್ಟಿ ಮಾಡಿಲ್ಲ. ಆದ್ದರಿಂದ ಅಸಂಘಟಿತ ಕಾರ್ಮಿಕರು ಪಿಂಚಣಿಯಿಂದ ವಂಚಿತರಾಗುತ್ತಿದ್ದಾರೆ. ಹಿರಿಯ ನಾಗರಿಕರ ಜೀವನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುವಷ್ಟು ಪಿಂಚಣಿ ದೊರೆಯದ ಕಾರಣ ಅವರ ಬದುಕಿನ ಸ್ಥಿತಿ ತೀರಾ ಚಿಂತಾಜನಕವಾಗಿದೆ ಎಂದು ತಿಳಿಸಿದರು.
ಅಖಿಲ ಭಾರತ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮಿಶ್ರಾ, ‘ದೇಶದಲ್ಲಿ ಶೇ 15ರಷ್ಟು ಜನರು 60 ವರ್ಷಕ್ಕಿಂತ ಮೇಲ್ಪಟ್ಟವರಿದ್ದಾರೆ. ಆದರೆ ಅವರಲ್ಲಿ ಬಹುತೇಕ ಹಿರಿಯ ನಾಗರಿಕರಿಗೆ ಯಾವುದೇ ರೀತಿಯ ಪಿಂಚಣಿ ಸೌಲಭ್ಯ ಸಿಗುತ್ತಿಲ್ಲ. ಪ್ರತಿ ವ್ಯಕ್ತಿಯ ಸಾಮಾಜಿಕ ಭದ್ರತೆಗಾಗಿ ಪಿಂಚಣಿ ಅಗತ್ಯವಾಗಿದೆ. ಅದು ಭಿಕ್ಷೆಯಲ್ಲ. ಪ್ರತಿಯೊಬ್ಬ ವ್ಯಕ್ತಿಯ ಹಕ್ಕಾಗಿದೆ. ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸಬೇಕು. ತಮ್ಮ ನ್ಯಾಯಯುತವಾದ ಪಾಲು ಪಡೆದುಕೊಳ್ಳಲು ಮುಂದಾಗಬೇಕು’ ಎಂದರು.
ಅಕ್ಕಮಹಾದೇವಿ ಮಹಿಳಾ ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಫೆಡರೇಶನ್ ಮಾಜಿ ಉಪಾಧ್ಯಕ್ಷೆ ಎಸ್.ಕೆ.ಗೀತಾ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಬಾಲಾಜಿ ರಾವ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.