ADVERTISEMENT

ಸಾಮಾಜಿಕ‌ ನ್ಯಾಯಕ್ಕೆ ಜಾತಿ ವ್ಯವಸ್ಥೆಯೇ ತಡೆಗೋಡೆ: ಎಚ್‌.ಗೋವಿಂದಯ್ಯ

ವಿಚಾರ ಸಂಕಿರಣ ಉದ್ಘಾಟಿಸಿ ಎಚ್‌.ಗೋವಿಂದಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 4:47 IST
Last Updated 27 ಡಿಸೆಂಬರ್ 2025, 4:47 IST
Shwetha Kumari
   Shwetha Kumari

ಮೈಸೂರು: ‘ದೇಶದ ಸಾಮಾಜಿಕ‌ ನ್ಯಾಯಕ್ಕೆ ಜಾತಿ ವ್ಯವಸ್ಥೆಯೆಂಬ ದೊಡ್ಡ ತಡೆಗೋಡೆಯಿದ್ದು, ಚಳವಳಿಗಳ ಮೂಲಕ ಈ ವ್ಯವಸ್ಥೆಯನ್ನು ಧಿಕ್ಕರಿಸುವ ಕೆಲಸ ಆಗಬೇಕಿದೆ’ ಎಂದು ಚಿಂತಕ ಎಚ್‌.ಗೋವಿಂದಯ್ಯ ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಡಾ.ಬಾಬೂ ಜಗಜೀವನರಾಮ್‌ ಅಧ್ಯಯನ, ಸಂಶೋಧನ ಮತ್ತು ವಿಸ್ತರಣ ಕೇಂದ್ರವು ‘ಸಾಮಾಜಿಕ ನ್ಯಾಯಕ್ಕಾಗಿ ಸಾಮಾಜಿಕ ಚಳವಳಿಗಳು’ ವಿಷಯದ ಕುರಿತು ಶುಕ್ರವಾರ ಆಯೋಜಿಸಿದ್ದ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಸಾಮಾಜಿಕ ನ್ಯಾಯ ಇಲ್ಲದ ಕಡೆ, ಆ ಘಟನೆ ಅನ್ಯಾಯವಾಗಿ ಮಾರ್ಪಾಡಾಗುತ್ತದೆ. ಅಲ್ಲಿ ನೆಮ್ಮದಿ, ಅಭಿವೃದ್ಧಿ ಅಸಾಧ್ಯ. ಹೀಗಾಗಿ ಇವು ಕೇವಲ ಅಧ್ಯಯನ ವಿಚಾರವಾಗಿ ಉಳಿಯದೆ, ಭವಿಷ್ಯ ರೂಪಿಸುವ ವ್ಯವಸ್ಥೆಯಾಗಿ ಬೆಳೆದು ನಿಂತಿದೆ. ಸಾಮಾಜಿಕ ನ್ಯಾಯವು ಭೀಕರ ಬಿಕ್ಕಟ್ಟಿನಲ್ಲಿರುವ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ‌ ಹೆಚ್ಚಬೇಕಿದೆ’ ಎಂದರು.

ADVERTISEMENT

‘ಕರ್ನಾಟಕ ಸಾಮಾಜಿಕ ನ್ಯಾಯದ ಜಾಗೃತ ನೆಲ. ಹೀಗಾಗಿ ಇಲ್ಲಿ ಮಾನವೀಯತೆ ಜೀವಂತವಾಗಿದೆ. ಆ ಕಾರಣದಿಂದ ಬೇರೆ ರಾಜ್ಯಗಳಷ್ಟು ಅಮಾನವೀಯ ಸ್ಥಿತಿ ಇಲ್ಲಿ ಕಂಡುಬಂದಿಲ್ಲ. ಇತಿಹಾಸ ಆರಂಭವಾಗಿದ್ದಿನಿಂದ ಈವರೆಗೆ ರಾಜ್ಯದಲ್ಲಿ ವಿಭಿನ್ನ ಚಳವಳಿ ನಡೆಯುತ್ತಾ ಬಂದಿದೆ. ಏಳು ಬೀಳುಗಳ ನಡುವೆ ಅವು ದೇಶವನ್ನು ಪ್ರಭಾವಿಸಿದೆ. 12ನೇ ಶತಮಾನದ ಕಲ್ಯಾಣ ಕ್ರಾಂತಿಯು ಭಕ್ತಿ ಚಳವಳಿಯನ್ನು ದೇಶಕ್ಕೆ ವ್ಯಾಪಿಸುವಂತೆ ಮಾಡಿತು. ಬುದ್ಧ ಪೂರ್ವದಲ್ಲಿ ಮತಂಗನ ಮಹಾ ಸಾಮಾಜಿಕ ನ್ಯಾಯದ ದಾರ್ಶನಿಕ ಚಳವಳಿ ನಡೆದಿರುವುದರ ಬಗ್ಗೆ ಉಲ್ಲೇಖಗಳಿವೆ’ ಎಂದರು.

‘70-80ರ ಶತಮಾನದ ದಲಿತ ಚಳವಳಿ ಜಾತಿವಿನಾಶದ ವಿಶಿಷ್ಟ ಪ್ರಯೋಗವಾಗಿ ಮೂಡಿಬಂತು. ಆದರೆ ಇಂದು ಈ ರೀತಿಯ ಚಳವಳಿಗಳು ಸತ್ತು ಹೋಗಿವೆ. ಉತ್ತರ ಭಾರತದಲ್ಲಿ ದೇಶಕ್ಕೆ ಜಾತೀಯತೆ ಬಿತ್ತಿ, ಬೆಳೆಸಿ ಜನರನ್ನು ವಿಂಗಡಿಸಿದ ಆರ್ಯ ವರ್ಧ ಇದ್ದ ಕಾರಣ ಅಲ್ಲಿ ಚಳವಳಿ ನಡೆದಿಲ್ಲ. ಸಾಮಾಜಿಕ ಅನ್ಯಾಯವನ್ನಷ್ಟೇ ಅಲ್ಲಿ ಪ್ರತಿಪಾದಿಸಲಾಗಿದೆ. ಈ ವ್ಯವಸ್ಥೆಯಿಂದ ಜನ ಹೊರಬರಬೇಕು’ ಎಂದು ಸಲಹೆ ನೀಡಿದರು.

ಚಿತ್ರದುರ್ಗದ ಕೋಡಿಹಳ್ಳಿ ಸಂತೋಷ್‌, ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಕೆ.ಸದಾಶಿವ, ಸಂಶೋಧನಾ ಅಧಿಕಾರಿ ಎಂ.ಶ್ರೀನಿವಾಸ ಮೂರ್ತಿ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.