ಮೈಸೂರು: ‘ಮೈಸೂರು ಆತಿಥ್ಯಕ್ಕೆ ಹೆಸರುವಾಸಿಯಾಗಿದ್ದು, ಪ್ರತಿ ವರ್ಷ ದಸರಾ ಯಶಸ್ವಿಯಾಗಲು ಇಲ್ಲಿನ ಹೋಟೆಲ್‌ಗಳ ಪಾತ್ರ ದೊಡ್ಡದಿದೆ’ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ಮೈಸೂರು ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ 30ನೇ ವಾರ್ಷಿಕೋತ್ಸವ ಹಾಗೂ ಹಿರಿಯ ಹೋಟೆಲ್ ಉದ್ಯಮಿಗಳಿಗೆ ‘ಸಹಕಾರ ಮಿತ್ರ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ದಸರಾದಲ್ಲಿ ಒಂದು ದಿನ ಹೋಟೆಲ್‌ಗಳು ಬಂದ್ ಆದರೂ ಪರಿಸ್ಥಿತಿ ಊಹಿಸಿಕೊಳ್ಳುವಂತಿಲ್ಲ. ದಸರಾದ ಯಾವುದೇ ಕಾರ್ಯಕ್ರಮ ನೋಡಿಕೊಂಡು ಬರುವವರಿಗೆ ಇಲ್ಲಿನ ಹೋಟೆಲ್‌ನವರು ತಡರಾತ್ರಿವರೆಗೂ ರುಚಿ– ಶುಚಿಯಾದ ಆಹಾರ ನೀಡುತ್ತಿದ್ದಾರೆ. ದೇಶ-ವಿದೇಶಗಳಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಅತ್ಯುತ್ತಮ ಆತಿಥ್ಯ ಸಿಗುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೋಟೆಲ್ ಉದ್ಯಮಿಗಳಾದ ಬಿ. ವಿಜಯಲಕ್ಷ್ಮೀ ಹಯವದನ ಆಚಾರ್, ಬಿ. ಬಾಲಕೃಷ್ಣಭಟ್ ಹಾಗೂ ಡಿ.ಚಂದ್ರಶೇಖರ್ ಶೆಟ್ಟಿ ಅವರಿಗೆ ‘ಸಹಕಾರ ಮಿತ್ರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಸಹಕಾರ ಸಂಘದ ಅಧ್ಯಕ್ಷ ನಾರಾಯಣ ವಿ.ಹೆಗಡೆ, ಉಪಾಧ್ಯಕ್ಷ ಆನಂದ ಎಂ.ಶೆಟ್ಟಿ , ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.