ADVERTISEMENT

ಮೈಸೂರು: ಮಹಾರಾಣಿ ಮಾದರಿ ಶಾಲೆ; ಮೊದಲ ಹಂತದ ಸಂಧಾನ ಸಭೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 9:51 IST
Last Updated 30 ಜೂನ್ 2021, 9:51 IST

ಮೈಸೂರು: ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ಸದಸ್ಯರು ಹಾಗೂ ರಾಮಕೃಷ್ಣ ಆಶ್ರಮದ ಪ್ರತಿನಿಧಿಗಳ ಜತೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಇಲ್ಲಿ ಬುಧವಾರ ಸಂಧಾನ ಸಭೆ ನಡೆಸಿದರು.

ಎನ್‌ಟಿಎಂ ಕನ್ನಡ ಶಾಲೆಯನ್ನು ದೇವರಾಜ ಅರಸು ಶಾಲೆಯಲ್ಲಿ ವಿಲೀನಗೊಳಿಸದಿರಲು ಸಭೆ ಒಮ್ಮತದ ನಿರ್ಧಾರ ಕೈಗೊಂಡಿತು. ಈಗ ಇರುವ ಸ್ಥಳದಲ್ಲೇ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಲು ಎರಡೂ ಕಡೆಯವರು ಒಪ್ಪಿಗೆ ನೀಡಿದರು.

ಆದರೆ, ಈಗ ಇರುವ ಶಾಲೆ ಶಿಥಿಲವಾಗಿದ್ದು, ಇದನ್ನು ತೆರವುಗೊಳಿಸಿ, ಹೊಸ ಕಟ್ಟಡ ನಿರ್ಮಿಸಬೇಕು ಎಂಬ ಸೂತ್ರಕ್ಕೆ ಇನ್ನೂ ಹೋರಾಟಗಾರರು ಒಪ್ಪಿಗೆ ನೀಡಿಲ್ಲ. ಇದನ್ನು ಇತರ ಸಂಘಟನೆಗಳೊಂದಿಗೆ ವಿಸ್ತೃತ ನೆಲೆಯಲ್ಲಿ ಚರ್ಚಿಸಿ ಮೂರು ದಿನಗಳ ನಂತರ ಮತ್ತೆ ಸಭೆ ಸೇರಿ ಅಂತಿಮ ತೀರ್ಮಾನ ತಿಳಿಸುವುದಾಗಿ ಹೋರಾಟಗಾರರು ಹೇಳಿದ್ದಾರೆ ಎಂದು ಸಭೆಯ ನಂತರ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಹಂಚೆ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಕನ್ನಡ ಶಾಲೆಯನ್ನೂ ಉಳಿಸಿಕೊಂಡು ಸ್ಮಾರಕ ನಿರ್ಮಿಸುವತ್ತ ಎರಡೂ ಕಡೆಯವರು ಒಲವು ತೋರಿದ್ದಾರೆ. ಮೊದಲ ಹಂತದ ಸಭೆಯು ಯಶಸ್ವಿಯಾಗಿದೆ ಎಂದರು.

ಅಂತಿಮ ತೀರ್ಮಾನ ಹೊರಹೊಮ್ಮುವವರೆಗೂ ಹೋರಾಟ ಮುಂದುವರೆಯುತ್ತದೆ. ಶಾಲೆಯ ಮುಂದೆ ನಿರಂತರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದ್ದಾರೆ.

ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ಪರವಾಗಿ ಪ.ಮಲ್ಲೇಶ್, ಸ.ರ.ಸುದರ್ಶನ್, ಪುರುಷೋತ್ತಮ್, ಪಿ.ವಿ.ನಂಜರಾಜೇಅರಸ್, ಅರುಣ್‌ಕುಮಾರ್, ಹೊಸಕೋಟೆ ಬಸವರಾಜು, ಬೆಟ್ಟಯ್ಯ ಕೋಟೆ ಭಾಗವಹಿಸಿದ್ದರು.

ರಾಮಕೃಷ್ಣ ಆಶ್ರಮದ ಪರವಾಗಿ ಚಿದಾನಂದಗೌಡ, ಡಿ.ಮಾದೇಗೌಡ, ಸಿ.ಪಿ.ಕೃಷ್ಣಕುಮಾರ್, ಚಕ್ರವರ್ತಿ ಇದ್ದರು.

ಸುತ್ತೂರು ಮಠದ ಪರವಾಗಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಜಯೇಂದ್ರ, ನಾಗಭೂಷಣ್, ಎಚ್.ವಿ.ರಾಜೀವ್, ರಘು ಕೌಟಿಲ್ಯ, ನಂದೀಶ ಹಂಚೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.