ADVERTISEMENT

ಮೈಸೂರು ಕಾರಾಗೃಹ ಸಾಮರ್ಥ್ಯ ಹೆಚ್ಚಳಕ್ಕೆ ಪ್ರಸ್ತಾವ

ಕೇಂದ್ರ ಕಾರಾಗೃಹ ನಿರ್ಮಾಣಕ್ಕೆ ಸಿಗದ ಜಾಗ: ಹಳೆ ಜೈಲಲ್ಲೇ ಹೊಸ ಕಟ್ಟಡ

ಡಿ.ಬಿ, ನಾಗರಾಜ
Published 10 ಜೂನ್ 2021, 5:08 IST
Last Updated 10 ಜೂನ್ 2021, 5:08 IST
ಮೈಸೂರಿನ ಕೇಂದ್ರ ಕಾರಾಗೃಹ
ಮೈಸೂರಿನ ಕೇಂದ್ರ ಕಾರಾಗೃಹ   

ಮೈಸೂರು: ಕೇಂದ್ರ ಕಾರಾಗೃಹ ನಿರ್ಮಾಣಕ್ಕೆ ಅವಶ್ಯವಿರುವ 60 ಎಕರೆ ಭೂಮಿ ಮೈಸೂರಿನಿಂದ 15 ಕಿ.ಮೀ. ಸುತ್ತಳತೆಯಲ್ಲಿ ಸಿಗದಿರುವುದರಿಂದ, ನಗರದೊಳಗಿರುವ ಈಗಿನ ಜೈಲಿನ ಆವರಣದಲ್ಲೇ ಹೊಸ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಕಾರಾಗೃಹದ ಅಧಿಕಾರಿಗಳು ಪ್ರಸ್ತಾವ ಸಿದ್ಧಪಡಿಸುತ್ತಿದ್ದಾರೆ.

ಹೊಸ ಕಾರಾಗೃಹ ನಿರ್ಮಾಣಕ್ಕಾಗಿ ಐದಾರು ವರ್ಷಗಳಿಂದ ಜಾಗದ ಶೋಧ ನಡೆದಿದೆ. ಆದರೆ ಎಲ್ಲಿಯೂ ಸೂಕ್ತ ಸ್ಥಳ ಸಿಗದಿದ್ದರಿಂದ ಅನಿವಾರ್ಯವಾಗಿ ಈಗಿನ ಜೈಲಿನ ಆವರಣದಲ್ಲೇ 200 ಕೈದಿಗಳಿಗೆ ಅವಕಾಶ ಕಲ್ಪಿಸುವ ಮೂಲ ಸೌಲಭ್ಯ ಹೊಂದಿದ ಹೊಸ ಬ್ಯಾರಕ್‌ನ ಕಟ್ಟಡ ನಿರ್ಮಾಣಕ್ಕೆ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ ಎಂದು ಕೇಂದ್ರ ಕಾರಾಗೃಹದ ಮೂಲಗಳು ತಿಳಿಸಿವೆ.

ಕೇಂದ್ರ ಕಾರಾಗೃಹದಲ್ಲಿ 562 ಕೈದಿಗಳಿಗಷ್ಟೇ ಸೌಲಭ್ಯ ಒದಗಿಸುವ ಸಾಮರ್ಥ್ಯವಿದೆ. ಆದರೆ, ಜೈಲಿನಲ್ಲಿ ಯಾವಾಗಲೂ ಕೈದಿಗಳ ಸಂಖ್ಯೆ ಸಾಮರ್ಥ್ಯಕ್ಕಿಂತಲೂ ಕನಿಷ್ಠ 100ರಿಂದ 300ರವರೆಗೂ ಹೆಚ್ಚಿರುತ್ತದೆ. ಇದು ಹಲವು ಸಮಸ್ಯೆಗೆ ಕಾರಣವಾಗಿದೆ. ಕೆಲವೊಮ್ಮೆ ಕಿರಿಕಿರಿಯೂ ಆಗಲಿದೆ. ಸಕಾಲಕ್ಕೆ ಸೂಕ್ತ ಜಾಗ ಸಿಗದಿದ್ದರಿಂದ, ಅನಿವಾರ್ಯವಾಗಿ ಹೊಸ ಬ್ಯಾರಕ್‌ನ ಕಟ್ಟಡ ನಿರ್ಮಾಣಕ್ಕೆ ರೂಪುರೇಷೆ ಸಿದ್ಧವಾಗುತ್ತಿದೆ ಎಂಬುದು ಗೊತ್ತಾಗಿದೆ.

ADVERTISEMENT

‘ಹೊಸ ಕಟ್ಟಡದ ನಕ್ಷೆ, ಅಂದಾಜು ವೆಚ್ಚದ ಪ್ರಸ್ತಾವವನ್ನು ಸಿದ್ಧಪಡಿಸಿ ಕೊಡುವಂತೆ ಪೊಲೀಸ್‌ ಹೌಸಿಂಗ್‌ ಕಾರ್ಪೊರೇಷನ್‌ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕೋರಲಾಗಿದೆ. ಎರಡೂ ಕಡೆ ನೀಲಿನಕ್ಷೆ ಸಿದ್ಧಗೊಳ್ಳುತ್ತಿದೆ. ವಾರದೊಳಗೆ ಕೈ ಸೇರುವ ನಿರೀಕ್ಷೆಯಿದೆ’ ಎಂದು ಮೈಸೂರಿನ ಕೇಂದ್ರ ಕಾರಾಗೃಹದ ಚೀಫ್ ಸೂಪರಿಂಟೆಂಡೆಂಟ್‌ ಕೆ.ಸಿ.ದಿವ್ಯಶ್ರೀ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಪ್ರಸ್ತಾವ ನಮಗೆ ಸಿಗುತ್ತಿದ್ದಂತೆ ಒಮ್ಮೆ ಪರಾಮರ್ಶನೆ ನಡೆಸಿ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಜಿಪಿ ಅವರಿಗೆ ಕಳುಹಿಸಿಕೊಡಲಾಗುವುದು. ನಮ್ಮ ಪ್ರಸ್ತಾವಕ್ಕೆ ಶೀಘ್ರದಲ್ಲೇ ಅನುಮೋದನೆ ದೊರಕಲಿದೆ ಎಂಬ ವಿಶ್ವಾಸವಿದೆ’ ಎಂದು ಅವರು ಹೇಳಿದರು.

‘ಪೆರೋಲ್‌ ಸಿಕ್ಕರೂ ಹೋಗಿಲ್ಲ’

‘ಸುಪ್ರೀಂಕೋರ್ಟ್‌ ಮಾರ್ಗಸೂಚಿ ಯಂತೆ ಹಿಂದಿನ ವರ್ಷ ಕೋವಿಡ್‌ ಉಲ್ಬಣಿಸಿದ್ದ ಸಮಯದಲ್ಲಿ ಪೆರೋಲ್‌ ಮೇರೆಗೆ ಜೈಲಿನಿಂದ 63 ಕೈದಿಗಳು ಹೊರಗೋಗಿದ್ದರು. ಈ ಬಾರಿಯೂ ಇಷ್ಟೇ ಸಂಖ್ಯೆಯ ಕೈದಿಗಳಿಗೆ ಹೊರಗೋಗಲು ಅವಕಾಶವಿತ್ತು. ಆದರೂ 8 ಜನರು ಕಾರಾಗೃಹದಿಂದ ಹೊರಹೋಗಿಲ್ಲ’ ಎಂದು ಕೆ.ಸಿ.ದಿವ್ಯಶ್ರೀ ತಿಳಿಸಿದರು.

‘ಹೊರಗೆ ಕೋವಿಡ್ ಹೆಚ್ಚಿದೆ. ಲಾಕ್‌ಡೌನ್‌ನ ಸಂಕಷ್ಟದ ಸಮಯದಲ್ಲಿ ದುಡಿಮೆಯೂ ಕಷ್ಟವಾಗಲಿದೆ. ಕುಟುಂಬದ ಸ್ವೀಕಾರವೂ ಅಷ್ಟಕ್ಕಷ್ಟೇ ಎಂಬಂತಹ ಪರಿಸ್ಥಿತಿ ಎದುರಿಸಿದ ಕೈದಿಗಳು ಮಾತ್ರ, ಪೆರೋಲ್‌ ಮೇಲೆ ಹೊರಗೋಗುವುದಕ್ಕಿಂತ ಜೈಲೇ ನೂರು ಪಾಲು ವಾಸಿ ಎಂದು ನಮ್ಮಲ್ಲೇ ಉಳಿದಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.