ADVERTISEMENT

ಮೈಸೂರು | SSLC: ಎಡವಿದ ವಸತಿ ಶಾಲೆ, ಹಾಸ್ಟೆಲ್‌: ಫಲಿತಾಂಶದಲ್ಲಿ ಕುಸಿತ

ಎಂ.ಮಹೇಶ
Published 5 ಮೇ 2025, 5:08 IST
Last Updated 5 ಮೇ 2025, 5:08 IST
   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ತವರಾದ ಮೈಸೂರು ಜಿಲ್ಲೆಯಲ್ಲಿ ಸರ್ಕಾರಿ ವಸತಿಶಾಲೆಗಳು 2024–25ನೇ ಸಾಲಿನ ಎಸ್ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಇಳಿಕೆ ಕಂಡಿವೆ. ಸರ್ಕಾರಿ ಹಾಸ್ಟೆಲ್‌ಗಳಲ್ಲಿನ ವಿದ್ಯಾರ್ಥಿಗಳ ಫಲಿತಾಂಶವೂ ಕುಸಿದಿದೆ.

ಹಿಂದಿನ ಶೈಕ್ಷಣಿಕ ಸಾಲಿಗೆ ಹೋಲಿಸಿದರೆ ಈ ಬಾರಿ ಈ ಶಾಲೆಗಳು ಫಲಿತಾಂಶದಲ್ಲಿ ಜಾರುಹಾದಿಯಲ್ಲಿವೆ. ಸುಧಾರಣೆಗೆಂದು ನಡೆಸಿದ ಹಲವು ಪ್ರಯತ್ನಗಳ ನಡುವೆಯೂ ವಿದ್ಯಾರ್ಥಿಗಳು ‘ತೇರ್ಗಡೆಯ ದಡ’ ಮುಟ್ಟಲು ಸಾಧ್ಯವಾಗಿಲ್ಲ.

ಕೆಲವು ವಿದ್ಯಾರ್ಥಿಗಳು ವೈಯಕ್ತಿಕ ಗಳಿಗೆಯಲ್ಲಿ ಸಾಧನೆ ತೋರಿರುವುದು ಕಂಡುಬಂದಿದೆ. 211 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಮುನ್ನಡೆದಿದ್ದಾರೆ.

ADVERTISEMENT

ಸಮಾಜಕಲ್ಯಾಣ ಇಲಾಖೆಯ 23 ಸೇರಿದಂತೆ ಇತರೆ ಇಲಾಖೆಗಳಿಗೆ ಸೇರಿದ ಒಟ್ಟು 35 ವಸತಿಶಾಲೆಗಳು ಜಿಲ್ಲೆಯ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ ಕಲಿಯುತ್ತಾ ಪರೀಕ್ಷೆ ತೆಗೆದುಕೊಂಡಿದ್ದ 1,408 ವಿದ್ಯಾರ್ಥಿಗಳಲ್ಲಿ 1,195 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 84.09ರಷ್ಟು ಫಲಿತಾಂಶ ಬಂದಿದೆ. ಕಳೆದ ಸಾಲಿನಲ್ಲಿ 1,502 ಅಭ್ಯರ್ಥಿಗಳಲ್ಲಿ 1,481 ಮಂದಿ ತೇರ್ಗಡೆ ಆಗಿದ್ದರು. ಶೇ 98.43ರಷ್ಟು ಫಲಿತಾಂಶ ದಾಖಲಾಗಿತ್ತು. ಈ ಬಾರಿ ಕುಸಿತ ಕಂಡುಬಂದಿರುವುದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.

ನಂಜನಗೂಡು ತಾಲ್ಲೂಕು ಅಂಬೇಡ್ಕರ್‌ ವಸತಿಶಾಲೆಯ 26 ವಿದ್ಯಾರ್ಥಿಗಳ ಪೈಕಿ 7 ಮಂದಿ ಮಾತ್ರವೇ ಪಾಸಾಗಿದ್ದಾರೆ. ಹನಗೋಡು ಅಂಬೇಡ್ಕರ್ ವಸತಿಶಾಲೆಯಲ್ಲಿ 33ಕ್ಕೆ 21, ರಾವಂದೂರು ಅಂಬೇಡ್ಕರ್‌ ವಸತಿ ಶಾಲೆಯಲ್ಲಿ 31 ಮಂದಿಯಲ್ಲಿ 14 ಮಕ್ಕಳಷ್ಟೇ ತೇರ್ಗಡೆಯಾಗಿದ್ದಾರೆ.

ಬಿಸಿಎಂ ಹಾಸ್ಟೆಲ್‌ ಕಥೆ ಏನು?: ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಮೆಟ್ರಿಕ್‌ ಪೂರ್ವ ಹಾಗೂ ಮೆಟ್ರಿಕ್ ನಂತರದವು ಸೇರಿದಂತೆ ಒಟ್ಟು 106 ಹಾಸ್ಟೆಲ್‌ಗಳಿದ್ದು, ಒಟ್ಟು 10,485 ಸೀಟುಗಳಿವೆ. ಕೆಲವು ತಿಂಗಳಿಂದೀಚೆಗೆ ಪಿರಿಯಾಪಟ್ಟಣದ ಬೆಟ್ಟದಪುರದಲ್ಲಿ ಮೆಟ್ರಿಕ್‌ನಂತರದ ಬಾಲಕರ ಹಾಸ್ಟೆಲ್‌, ನಗರದಲ್ಲಿ ಉಳಿದ 13 ಹಾಸ್ಟೆಲ್‌ಗಳನ್ನು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಒಟ್ಟು 1,875 ಮೆಟ್ರಿಕ್‌ ಪೂರ್ವ ಸೀಟುಗಳಿವೆ. ಅದರಲ್ಲಿ 305 ಮಕ್ಕಳು ಈ ಬಾರಿ ಎಸ್ಎಸ್‌ಎಲ್‌ಸಿ ಪರೀಕ್ಷೆ ತೆಗೆದುಕೊಂಡಿದ್ದರು. ಅವರಲ್ಲಿ 246 ಮಂದಿ ಉತ್ತೀರ್ಣರಾಗಿದ್ದಾರೆ.

ಶೇ 90ಕ್ಕಿಂತ ಜಾಸ್ತಿ ಅಂಕಗಳನ್ನು ಐವರು ಗಳಿಸಿದ್ದಾರೆ. 26 ವಿದ್ಯಾರ್ಥಿಗಳು ಶೇ 80ಕ್ಕಿಂತಲೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 40 ಮಂದಿ ಶೇ 70ಕ್ಕಿಂತ ಜಾಸ್ತಿ, 66 ಮಕ್ಕಳು ಶೇ 60ಕ್ಕಿಂತ ಹೆಚ್ಚು ಅಂಕಗಳನ್ನು ಹಾಗೂ 137 ಮಂದಿ ಪ್ರಥಮ ಶ್ರೇಣಿಯನ್ನು ಪಡೆದಿದ್ದಾರೆ. ಶೇ 80.65ರಷ್ಟು ಮಾತ್ರವೇ ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 10ರಷ್ಟು ಕಡಿಮೆ ಇದೆ.

‘ನಮ್ಮ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆಂದು ವಾರಕ್ಕೊಮ್ಮೆ ಪರೀಕ್ಷೆ ನಡೆಸಲಾಗಿತ್ತು. ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಟ್ಯೂಷನ್‌ ಮಾಡಿಸಿದ್ದೆವು. ಬಹಳಷ್ಟು ಮಂದಿ ಅದರಿಂದ ಪ್ರಯೋಜನ ಪಡೆದುಕೊಂಡಿದ್ದಾರೆ. ವಿಫಲವಾದ ವಿದ್ಯಾರ್ಥಿಗಳು ಪರೀಕ್ಷೆ–2 ಎದುರಿಸಿ ಉತ್ತೀರ್ಣರಾಗಲು ಅವಕಾಶವಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ಪ್ರತಿಕ್ರಿಯಿಸಿದರು.

  • ವಸತಿಶಾಲೆಗಳ 213 ವಿದ್ಯಾರ್ಥಿಗಳು ಫೇಲ್‌

  • ಬಿಸಿಎಂ ಹಾಸ್ಟೆಲ್‌ನ 59 ವಿದ್ಯಾರ್ಥಿಗಳು ಅನುತ್ತೀರ್ಣ

  • ಹಲವು ಪ್ರಯತ್ನಗಳ ನಡುವೆಯೂ ಕಾಣದ ಸಾಧನೆ

ಶೇ 100ರಷ್ಟು ಫಲಿತಾಂಶ

ನಂಜನಗೂಡು ತಾಲ್ಲೂಕು ಹುರ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕೆ.ಆರ್.ನಗರ ತಾಲ್ಲೂಕು ಕುಪ್ಪರವಳ್ಳಿಯ ಇಂದಿರಾಗಾಧಿ ವಸತಿ ಶಾಲೆ ನಂಜನಗೂಡು ತಾಲ್ಲೂಕು ದೊಡ್ಡಕವಲಂದೆ ಹಾಗೂ ಮೈಸೂರು ತಾಲ್ಲೂಕು ಇಲವಾಲದ ಅಂಬೇಡ್ಕರ್‌ ವಸತಿ ಶಾಲೆ ಶೇ 100ಕ್ಕೆ 100ರಷ್ಟು ಫಲಿತಾಂಶ ಗಳಿಸಿ ಮಿಂಚಿವೆ.

600 ಅಂಕ ಸಾಧಕರು

ನಂಜನಗೂಡು ತಾಲ್ಲೂಕು ಹುರ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವರ್ಷಿತಾ (615) ನಂಜನಗೂಡಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ಬಾಲಕಿಯರ ಶಾಲೆಯ ಬೇಜಿ (610) ಇಲವಾಲ ಅಂಬೇಡ್ಕರ್‌ ವಸತಿ ಶಾಲೆಯ ಯಶೋದಾ ಎಂ.ಗುರೇಮಟ್ಟಿ (608) ತಿ.ನರಸೀಪುರ ತಾಲ್ಲೂಕು ಕೂಡ್ಲೂರಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಐಶ್ವರ್ಯಾ ಆರ್. (608) ವರಕೋಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆರ್.ಅಜಯ್‌ (607) ಹುಣಸೂರು ತಾಲ್ಲೂಕು ಸಬ್ಬನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಲಿಖಿತ ಆರ್. (606) ಸಾಲಿಗ್ರಾಮದ ಡಿ.ಎನ್. ದೀಪಿಕಾ (606) ತಲಕಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಮಿತ್ ಎಸ್. (605) ಉತ್ತಮ ಸಾಧನೆ ತೋರಿದ್ದಾರೆ.

ಇತರ ಶಾಲೆಗಳಿಂತ ಉತ್ತಮ ಸಾಧನೆ: ಎಚ್‌ಸಿಎಂ

ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ನಮ್ಮ ಕರ್ನಾಟಕ ವಸತಿಶಿಕ್ಷಣ ಸಂಸ್ಥೆಗಳ ವಸತಿಶಾಲೆಯ ಮಕ್ಕಳು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದ ಇತರ ಶಿಕ್ಷಣ ಸಂಸ್ಥೆಗಳಿಗಿಂತಲೂ ಉತ್ತಮ ಸಾಧನೆ ಮಾಡಿದ್ದಾರೆ. ನಮ್ಮ ಶಾಲೆಯ ಮಕ್ಕಳ ಪೈಕಿ ಶೇ 34ರಷ್ಟು ಮಕ್ಕಳು ಡಿಸ್ಟಿಂಕ್ಷನ್ ಪಡೆದಿದ್ದು ಶೇ 55ಕ್ಕೂ ಜಾಸ್ತಿ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮೂವರು ಮಕ್ಕಳು ರಾಜ್ಯಕ್ಕೆ 2ನೇ ರ‍್ಯಾಂಕ್‌ ಪಡೆದಿದ್ದು 12 ಮಕ್ಕಳು ರಾಜ್ಯಕ್ಕೆ 3ನೇ ರ‍್ಯಾಂಕ್‌ ಗಳಿಸಿದ್ದಾರೆ. ಸಾಮಾಜಿಕ ನ್ಯಾಯ ಸಾಧಿಸಲು ಶಿಕ್ಷಣ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ನಮ್ಮ ಸರ್ಕಾರದಿಂದ ವಸತಿಶಾಲೆಗಳನ್ನು ಬಲಪಡಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.