ADVERTISEMENT

ಮೈಸೂರು | ಚಾಮುಂಡಿಬೆಟ್ಟದಲ್ಲಿ ಏಕಬಳಕೆ ಪ್ಲಾಸ್ಟಿಕ್ ಮುಕ್ತಗೊಳಿಸಲು ಕ್ರಮ: ಖಂಡ್ರೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 13:56 IST
Last Updated 23 ಜೂನ್ 2025, 13:56 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಮೈಸೂರು: ‘ನಾಡದೇವತೆ ಚಾಮುಂಡೇಶ್ವರಿ ದೇವಾಲಯವಿರುವ ಚಾಮುಂಡಿ ಬೆಟ್ಟ ಪ್ರದೇಶವನ್ನು ಏಕಬಳಕೆ ಪ್ಲಾಸ್ಟಿಕ್ ಮುಕ್ತಗೊಳಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಅರಣ್ಯ, ಜೀವಿವಿಜ್ಞಾನ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದ್ದಾರೆ.

ಅರಣ್ಯ, ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಪಡೆ ಮುಖ್ಯಸ್ಥರು ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿರುವ ಸಚಿವರು, ‘ಆಷಾಢ ಶುಕ್ರವಾರ ಹಾಗೂ ಆ ಮಾಸದಲ್ಲಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಈ ವೇಳೆ ಬೆಟ್ಟದ ಮೇಲಿರುವ ಯಾವುದೇ ಮಳಿಗೆಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಬಳಕೆ ಆಗದಂತೆ ಕಟ್ಟೆಚ್ಚರ ವಹಿಸಬೇಕು’ ಎಂದು ತಿಳಿಸಿದ್ದಾರೆ.

‘ಮೈಸೂರು ನಗರವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಘೋಷಿಸಿದ್ದಾರೆ. ಆದರೂ ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ದಾಸ್ತಾನು, ಸಾಗಾಟ, ಮಾರಾಟ ನಡೆಯುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಬೆಟ್ಟದ ಮಳಿಗೆಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳಾದ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚ, ನೀರಿನ ಬಾಟಲಿ ಬಳಕೆ ಆಗದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.