ADVERTISEMENT

ಎಚ್.ಡಿ.ಕೋಟೆ: ಒಕ್ಕಲೆಬ್ಬಿಸಿದರೆ ಆತ್ಮಹತ್ಯೆ– ಆದಿವಾಸಿಗಳ ಬೆದರಿಕೆ

ಪುನರ್ವಸತಿ ಕೇಂದ್ರದಲ್ಲಿ ಸೌಲಭ್ಯ ಇಲ್ಲ; ಮೂಲಸ್ಥಳದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 19:30 IST
Last Updated 16 ಜನವರಿ 2022, 19:30 IST
ಪ್ರತಿಭಟನಾನಿರತ ಆದಿವಾಸಿಗಳನ್ನು ತಹಶೀಲ್ದಾರ್ ಮತ್ತು ಅಧಿಕಾರಿಗಳು ಭಾನುವಾರ ಭೇಟಿ ಮಾಡಿ ಪುನರ್ವಸತಿ ಕೇಂದ್ರಕ್ಕೆ ತೆರಳುವಂತೆ ಸೂಚಿಸಿದರು
ಪ್ರತಿಭಟನಾನಿರತ ಆದಿವಾಸಿಗಳನ್ನು ತಹಶೀಲ್ದಾರ್ ಮತ್ತು ಅಧಿಕಾರಿಗಳು ಭಾನುವಾರ ಭೇಟಿ ಮಾಡಿ ಪುನರ್ವಸತಿ ಕೇಂದ್ರಕ್ಕೆ ತೆರಳುವಂತೆ ಸೂಚಿಸಿದರು   

ಎಚ್.ಡಿ.ಕೋಟೆ: ಪುನರ್ವಸತಿ ಕಲ್ಪಿಸಿರುವ ಶೆಟ್ಟಹಳ್ಳಿಯಲ್ಲಿ ವಾಸ್ತವ್ಯಕ್ಕೆ ಸರಿಯಾದ ಸೌಲಭ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ 43 ಆದಿವಾಸಿ ಕುಟುಂಬಗಳು ಮೂಲಸ್ಥಳಕ್ಕೆ ವಾಪಸಾಗಿ ಭಾನುವಾರ ಪ್ರತಿಭಟನೆ ನಡೆಸಿವೆ. ಒಕ್ಕಲೆಬ್ಬಿಸಿದರೆ ಆತ್ಮಹತ್ಯೆ ಮಾಡಿಕೊಳ್ಳು ವುದಾಗಿ ಬೆದರಿಕೆ ಹಾಕಿವೆ.

ತಾಲ್ಲೂಕಿನ ಡಿ.ಬಿ.ಕುಪ್ಪೆ ಪಂಚಾಯಿತಿ ವ್ಯಾಪ್ತಿಯ ಮಚ್ಚೂರು ಗ್ರಾಮದ ಸಮೀಪವಿರುವ ಬೋಗಾಪುರ ಹಾಡಿಯಿಂದ ಹತ್ತು ವರ್ಷಗಳ ಹಿಂದೆ ಈ ಕುಟುಂಬಗಳನ್ನು ಹುಣಸೂರು ತಾಲ್ಲೂಕಿನ ಶೆಟ್ಟಹಳ್ಳಿ (ಲಕ್ಕಪಟ್ಟಣ) ಬಳಿ ಮನೆ ನಿರ್ಮಿಸಿ, ಜಮೀನು ನೀಡಿ ಸ್ಥಳಾಂತರ ಮಾಡಲಾಗಿತ್ತು. ಆದರೆ, ಅಲ್ಲಿ ಸೌಲಭ್ಯ ಇಲ್ಲವೆಂದು ವಾಪಸ್‌ ಮೂಲ ಸ್ಥಳಕ್ಕೆ ಬಂದಿದ್ದಾರೆ.

‘ಹತ್ತು ವರ್ಷ ಕಳೆದರೂ ನಮಗೆ ಸರ್ಕಾರ ಸೌಲಭ್ಯ ಕಲ್ಪಿಸಿಲ್ಲ. ಜಮೀನಿನ ಆರ್‌ಟಿಸಿ ನೀಡಿಲ್ಲ. ಆಧಾರ್‌ ಸಂಖ್ಯೆ, ರೇಷನ್ ಕಾರ್ಡ್‌ ವ್ಯವಸ್ಥೆಯೂ ಇಲ್ಲ. ನಮಗೆ ಅಲ್ಲಿ ಸರಿಯಾದ ಸೌಲಭ್ಯ ಇಲ್ಲದಿರುವುದರಿಂದ ಜೀವನ ನಡೆಸಲು ತೊಂದರೆಯಾಗಿದೆ. ಹೀಗಾಗಿ, ಮೂಲ ಸ್ಥಳದಲ್ಲಿಯೇ ಜೀವನ ನಡೆಸುತ್ತೇವೆ. ಇಲ್ಲಿಂದ ನಮ್ಮನ್ನು ಹೊರ ಹಾಕಿದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಪ್ರತಿಭಟ ನಾನಿರತರು ಬೆದರಿಕೆ ಹಾಕಿದ್ದಾರೆ.

ADVERTISEMENT

ಸ್ಥಳಕ್ಕೆ ತಹಶೀಲ್ದಾರ್ ಎನ್‌.ಎಸ್‌.ನರಗುಂದ, ಎಸಿಎಫ್‌ ಮಹದೇವ್‌, ಸಿಪಿಐ ಆನಂದ್‌ ಭೇಟಿ ನೀಡಿದ್ದರು. ‘ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿದ್ದು, ಇಲ್ಲಿಂದ ಹೊರಡಿ’ ಎಂದು ಸೂಚಿಸಿದರು. ಅಲ್ಲದೇ, ಆದಿವಾಸಿಗಳು ಸಿದ್ಧಪಡಿಸಿದ್ದ ಆಹಾರವನ್ನು ಕಿತ್ತುಕೊಂಡರು.

ಪಟ್ಟು ಬಿಡದ ಆದಿವಾಸಿಗಳು, ‘ನಾವು ಸತ್ತರೂ, ಬದುಕಿದರೂ ಇಲ್ಲಿಯೇ. ಎಲ್ಲಿಗೂ ಹೋಗುವುದಿಲ್ಲ. ನಮಗೆ ಸರ್ಕಾರವೇ ಮೋಸ ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾವು ದೇವರ ಪೂಜೆಗೆಂದು ಇಲ್ಲಿಗೆ ಬಂದೆವು. ಆದರೆ, ನಮಗೆ ಅಲ್ಲಿನ ಕಿರುಕುಳ ನೆನಪಿಸಿಕೊಂಡರೆ ವಾಪಸ್ ಹೋಗುವುದೇ ಬೇಡ ಎನಿಸುತ್ತಿದೆ. ಇಲ್ಲಿ ಗೆಡ್ಡೆ ಗೆಣಸು ತಿಂದು ಬದುಕುತ್ತೇವೆ’ ಎಂದು ಬೋಗಾಪುರ ಹಾಡಿಯಿಂದ ಸ್ಥಳಾಂತರಗೊಂಡ ತಿಮ್ಮಮ್ಮ ಹೇಳಿದರು.

‘₹10 ಲಕ್ಷ ನೀಡುವ ಭರವಸೆಯನ್ನು ಸರ್ಕಾರ ಈಡೇರಿಸಿಲ್ಲ. ನಮ್ಮಲ್ಲಿಯೇ ಇನ್ನೂ 5 ಕುಟುಂಬದವರಿಗೆ ಮನೆ ಮತ್ತು ಭೂಮಿ ಸಿಕ್ಕಿಲ್ಲ. ಸ್ಥಳೀಯರು ಕಿರುಕುಳ ನೀಡುತ್ತಿದ್ದು, ಜೀವನ ನಡೆಸುವುದು ದುಸ್ತರವಾಗಿದೆ‌’ ಎಂದು ಡಿ.ಬಿ.ಕುಪ್ಪೆ ಪಂಚಾಯಿತಿ ಸದಸ್ಯ ರಮೇಶ್ ತಿಳಿಸಿದರು.

***

ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿದರೆ ಕಾನೂನು ರೀತಿಯಲ್ಲಿ ಬಂಧಿಸಲಾಗುತ್ತದೆ. ಆದಿವಾಸಿಗಳು ತಮ್ಮ ಬೇಡಿಕೆಗಳನ್ನು ಪುನರ್ವಸತಿ ಕೇಂದ್ರದಲ್ಲಿಯೇ ಕೇಳಬೇಕು.

– ಎನ್.ಎಸ್.ನರಗುಂದ, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.