ಮೈಸೂರು: ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಗೆ ಗೋಲ್ಡ್ ಕಾರ್ಡ್, ವಿಐಪಿ ಟಿಕೆಟ್ ಇದ್ದರೂ ಒಳಗೆ ಪ್ರವೇಶ ಸಿಗದೇ ನೂರಾರು ಜನ ಪರದಾಡಿದರು.
ಮಧ್ಯಾಹ್ನ 12ರ ವೇಳೆಗೆ ಅರಮನೆ ಆವರಣ ಭರ್ತಿಯಾಗಿದ್ದರಿಂದ ನಂತರ ಬಂದವರಿಗೆ ಪೊಲೀಸರು ಪ್ರವೇಶ ನಿರಾಕರಿಸಿದರು. ಪಾಸ್ ಹಿಡಿದು ಸಾಲಿನಲ್ಲಿ ನಿಂತರೂ ಪ್ರವೇಶ ಸಿಗದ ಕಾರಣ ಬೇಸತ್ತ ಪ್ರವಾಸಿಗರು– ಸ್ಥಳೀಯರು ಪೊಲೀಸರೊಂದಿಗೆ ವಾಗ್ದಾದ ನಡೆಸಿದರು. ಗಂಟೆಗಟ್ಟಲೆ ಕಾದು ನಿಂತರೂ ಪ್ರಯೋಜನವಾಗಲಿಲ್ಲ.
‘₹6,500 ಕೊಟ್ಟು ಗೋಲ್ಡ್ ಕಾರ್ಡ್ ಪಡೆದಿದ್ದೇವೆ. ದಸರಾ ಮೆರವಣಿಗೆ ಆರಂಭದ ಒಂದು ಗಂಟೆ ಮುನ್ನವೇ ಬಂದು ಸಾಲಿನಲ್ಲಿ ನಿಂತಿದ್ದೆವು. ಹೀಗಿದ್ದೂ ಒಳಗೆ ಬಿಡದೆ ಸತಾಯಿಸಲಾಗುತ್ತಿದೆ’ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು.
‘ಟಿಕೆಟ್ ಪಡೆದಿರುವವರಿಗೇ ಜಾಗವಿಲ್ಲ ಎಂತಾದರೆ ಆ ಆಸನಗಳು ಏನಾದವು? ಜಿಲ್ಲಾಡಳಿತವು ಹೆಚ್ಚುವರಿಯಾಗಿ ಟಿಕೆಟ್, ಪಾಸ್ ಹಂಚಿದೆಯೇ’ ಎಂದು ಅಖಿಲ ಭಾರತ ಗ್ರಾಹಕರ ಕಲ್ಯಾಣ ಪರಿಷತ್ ಕಾರ್ಯಾಧ್ಯಕ್ಷ ಎಂ.ಪಿ. ವರ್ಷ ಎಂಬುವರು ಅಸಮಾಧಾನ ವ್ಯಕ್ತಪಡಿಸಿದರು.
ಮಧ್ಯಾಹ್ನ ಮೂರು ಗಂಟೆಯವರೆಗೂ ಪ್ರವೇಶ ದ್ವಾರದಲ್ಲಿಯೇ ಟಿಕೆಟ್ ಹಿಡಿದು ಆಸೆಗಣ್ಣಿನಿಂದ ಕಾದವರು ನಿರಾಸೆಯಿಂದ ಮರಳಿದರು. ಇನ್ನೂ ಕೆಲವರು ಜಂಬೂಸವಾರಿ ಅರಮನೆಯಿಂದ ಹೊರಹೋಗುವವರೆಗೂ ಅಲ್ಲಿಯೇ ಕಾದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.