ADVERTISEMENT

ಆದಿವಾಸಿಗಳ ಸಮಸ್ಯೆಗೆ ಸ್ಪಂದಿಸಿ: ಚಿಂತನಾ ಸಮಾವೇಶದಲ್ಲಿ ಹಕ್ಕೊತ್ತಾಯ

ಜಾಗತಿಕ ಮೂಲನಿವಾಸಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 4:15 IST
Last Updated 10 ಆಗಸ್ಟ್ 2025, 4:15 IST
ಮೈಸೂರಿನ ರೋಟರಿ ಸಭಾಂಗಣದಲ್ಲಿ ಆದಿವಾಸಿ ಸಂಘರ್ಷ ಮೋರ್ಚಾದಿಂದ ಶನಿವಾರ ನಡೆದ ಚಿಂತನಾ ಸಮಾವೇಶದಲ್ಲಿ ಭಾಗವಹಿಸಿದ್ದ ಜನರು
ಮೈಸೂರಿನ ರೋಟರಿ ಸಭಾಂಗಣದಲ್ಲಿ ಆದಿವಾಸಿ ಸಂಘರ್ಷ ಮೋರ್ಚಾದಿಂದ ಶನಿವಾರ ನಡೆದ ಚಿಂತನಾ ಸಮಾವೇಶದಲ್ಲಿ ಭಾಗವಹಿಸಿದ್ದ ಜನರು   

ಮೈಸೂರು: ‘ನಮ್ಮ ಹಕ್ಕುಗಳು, ನಮ್ಮ ಭವಿಷ್ಯ’, ‘ಆದಿವಾಸಿಗಳ ಸಮಸ್ಯೆಗೆ ಸ್ಪಂದಿಸಿ, ವಸತಿ, ಶಿಕ್ಷಣ, ಮೂಲಸೌಲಭ್ಯ ಒದಗಿಸಿ’ ಎಂಬ ಹಕ್ಕೊತ್ತಾಯವು ಇಲ್ಲಿನ ರೋಟರಿ ಸಭಾಂಗಣದಲ್ಲಿ ಶನಿವಾರ ನಡೆದ ಚಿಂತನಾ ಸಮಾವೇಶದಲ್ಲಿ ಕೇಳಿಬಂದವು.

ಆದಿವಾಸಿ ಸಂಘರ್ಷ ಮೋರ್ಚಾದಿಂದ ಜಾಗತಿಕ ಮೂಲನಿವಾಸಿ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಜಿಲ್ಲೆ ಮಾತ್ರವಲ್ಲದೇ ಕೊಡಗು ಹಾಗೂ ಇತರ ಸ್ಥಳಗಳಿಂದಲೂ ಬಂದಿದ್ದ ಆದಿವಾಸಿಗಳು ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ಅಗತ್ಯ ಸೌಲಭ್ಯ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಕಡ್ಡಾಯ ಒಕ್ಕಲೆಬ್ಬಿಸುವಿಕೆಯನ್ನು ತಡೆಯಬೇಕು. ಈ ಹಿಂದೆ ಕಾಡಿನಿಂದ ಹೊರದಬ್ಬಿದವರನ್ನು ವಾಪಸ್‌ ಕರೆತರಬೇಕು. 2006ರ ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಆದಿವಾಸಿಗಳ ಸಾಂಸ್ಕೃತಿಕ, ಧಾರ್ಮಿಕ ನಂಬಿಕೆಗಳಿಗೆ ಮಾನ್ಯತೆ ನೀಡಬೇಕು. ದೌರ್ಜನ್ಯ, ತಾರತಮ್ಯ ನಿಲ್ಲಬೇಕು ಎಂದು ಆಗ್ರಹಿಸಿದರು.

ADVERTISEMENT

ರಜೆ ಘೋಷಿಸಿ: ಆ.9ರ ಮೂಲನಿವಾಸಿ ದಿನಾಚರಣೆಗೆ ರಜೆ ಘೋಷಿಸಬೇಕು. ರಾಜ್ಯದಲ್ಲಿ ಶೇ 2ಕ್ಕೂ ಅಧಿಕ ಜನಸಂಖ್ಯೆಯಿರುವ ಆದಿವಾಸಿ ಪ್ರದೇಶಗಳನ್ನು ಅನುಸೂಚಿತ ಎಂದು ಘೋಷಿಸಬೇಕು. ಉದ್ಯೋಗ ಖಾತರಿ ಯೋಜನೆ ಅನುಷ್ಠಾನ ಹಾಗೂ ವನ್ಯಜೀವಿ ಕಾಯ್ದೆಯಡಿ ಸುಳ್ಳು ಪ್ರಕರಣಗಳಿಂದಾಗಿ ಹಲವರು ಜೈಲಿನಲ್ಲಿದ್ದು, ಅವರ ಸ್ಥಿತಿಗತಿ ಅಧ್ಯಯನ ಆಗಬೇಕು ಎಂದು ಒತ್ತಾಯಿಸಿದರು.

ಮಾನವ ಹಕ್ಕುಗಳ ಕಾರ್ಯಕರ್ತ, ವಕೀಲ ಕ್ಲಿಫ್ಟನ್ ಡಿ. ರೊಸಾರಿಯೊ ಮಾತನಾಡಿ, ‘ದಲಿತರ ಹಕ್ಕುಗಳ ಬಗ್ಗೆ, ಹಿಂದುಳಿದವರ ಸಮಸ್ಯೆ ಬಗ್ಗೆ ಚರ್ಚಿಸುವವರು ಆದಿವಾಸಿಗಳನ್ನು ಏಕೆ ಮರೆಯುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

‘ಕೊಡಗಿನಲ್ಲಿ ಪಣಿ ಎರವ ಸಮುದಾಯದವರು ಕಾಫಿ ತೋಟಗಳ ಲೈನ್ ಮನೆಗಳಲ್ಲಿ ಜೀವನ ದೂಡುತ್ತಿದ್ದಾರೆ. ವಾರವಿಡೀ ದುಡಿದರೂ ಸಂಸಾರ ಸಾಗಿಸಲು ಸಾಧ್ಯವಾಗದೇ ಸಾಲದಲ್ಲಿ ಸಿಲುಕಿದ್ದು, ಕುಡಿತದ ದುಶ್ಚಟಕ್ಕೆ ಬಲಿಯಾಗಿದ್ದಾರೆ. ಅಕ್ಷರಶಃ ಜೀತಕ್ಕೆ ಒಳಗಾಗಿದ್ದಾರೆ’ ಎಂದರು.

ಕೊಡಗಿನ ಪಣಿ ಎರವ ಸಮುದಾಯದ ಸವಿತಾ ಮಾತನಾಡಿ, ‘ಚಿಕ್ಕ ಮಕ್ಕಳನ್ನು ದೂರದ ಅಂಗನವಾಡಿಗೆ ಕಳುಹಿಸಲು ಭಯವಾಗುತ್ತದೆ. ದಿನಗೂಲಿಗೆ ತೆರಳುವ ನಮ್ಮ ಸಮುದಾಯದ ಮನೆಗಳ ಸಮೀಪದಲ್ಲಿಯೇ ಪ್ರಾಥಮಿಕ ಶಿಕ್ಷಣ ಒದಗಿಸುವ ಪ್ರಯತ್ನವನ್ನು ಸರ್ಕಾರ ಮಾಡಬೇಕು’ ಎಂದು ಮನವಿ ಮಾಡಿದರು.

ಕೆಬ್ಬೇಪುರ ಹಾಡಿಯ ಸೀರಂ ಪಾರ್ವತಿ ಮಾತನಾಡಿ, ‘ರಸ್ತೆ, ಸಾರಿಗೆ, ವಸತಿ ಮುಂತಾದ ಮೂಲಸೌಕರ್ಯಗಳ ಬಗ್ಗೆ ಹಲವು ಬಾರಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದರೂ ಪ್ರಯೋಜನವಾಗುತ್ತಿಲ್ಲ. ಅಗತ್ಯ ಸರ್ಕಾರಿ ದಾಖಲೆಗಳನ್ನು ಪಡೆಯುವುದೂ ಕಷ್ಟವಾಗಿದೆ’ ಎಂದು ದೂರಿದರು.

ಸಮಾವೇಶದಲ್ಲಿ ಕೊಡಗಿನ ಆದಿವಾಸಿ ಸಂಘಟನೆಯ ಗೌರಿ, ಮೋಹನ್, ತೋಲಾ, ಬೋಳ್ಕಾ, ಹಕ್ಕಿಪಿಕ್ಕಿ ಸಮುದಾಯದ ಸಮಿತ್ ಕುಮಾರ್, ಕೆಂಪಯ್ಯ, ಹರಪನಹಳ್ಳಿಯ ಪ್ರಸಾದ್ ಹಾಜರಿದ್ದರು.

‘ಸಾಂವಿಧಾನಿಕ ಹಕ್ಕಿಗೆ ಹೋರಾಟ ಅಗತ್ಯ’

‘ರಾಜ್ಯದಲ್ಲಿ ಆದಿವಾಸಿಗಳ ಸಮಸ್ಯೆ ನಿವಾರಣೆ ಹಾಗೂ ಸ್ಥಿತಿಗತಿ ಸುಧಾರಣೆಗೆ ದೀರ್ಘಕಾಲದ ಹೋರಾಟ ಅಗತ್ಯವಿದೆ’ ಎಂದು ವಕೀಲ ಕ್ಲಿಫ್ಟನ್ ಡಿ. ರೊಸಾರಿಯೊ ಹೇಳಿದರು. ‘ಸಮುದಾಯದ ಪರಿಸ್ಥಿತಿ ಸುಧಾರಣೆಯಾಗಲು ಸಾಂವಿಧಾನಿಕ ಹಕ್ಕನ್ನು ಪಡೆಯುವುದೇ ಗುರಿಯಾಗಬೇಕು. ಆದಿವಾಸಿ ದಿನಾಚರಣೆ ಮೂಲಕ ಹಕ್ಕನ್ನು ಪಡೆಯುವ ಘೋಷಣೆ ಮಾಡಬೇಕು’ ಎಂದರು. ‘270 ವರ್ಷಗಳ ಹಿಂದೆಯೇ ಬ್ರಿಟಿಷರ ಜಮೀನ್ದಾರರ ಹಾಗೂ ರಾಜರ ವಿರುದ್ಧ ಹೋರಾಟ ಮಾಡಿದ ಆದಿವಾಸಿಗಳ ಬದುಕು ಇಂದಿಗೂ ಬದಲಾಗಿಲ್ಲ. ಸಮುದಾಯದಲ್ಲಿ ಒಬ್ಬರೂ ಐಎಎಸ್ ಐಪಿಎಸ್ ಅಧಿಕಾರಿಗಳಾಗಿಲ್ಲ. ಇದಕ್ಕೆ ಕಾರಣ ಹುಡುಕುವ ಪ್ರಯತ್ನವನ್ನೂ ಜನಪ್ರತಿನಿಧಿಗಳು ಮಾಡುತ್ತಿಲ್ಲ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.