ಮೈಸೂರು: ‘ನಾವು ಪರಿಪೂರ್ಣತೆಯನ್ನು ಬೆನ್ನತ್ತಿದರೆ ಶ್ರೇಷ್ಠತೆ ನಮ್ಮನ್ನು ಹುಡುಕಿಕೊಂಡು ಬರುತ್ತದೆ’ ಎಂದು ಇನ್ಫೊಸಿಸ್ ಮೈಸೂರು ಕೇಂದ್ರದ ಹಿರಿಯ ಉಪಾಧ್ಯಕ್ಷ ಹಾಗೂ ಮುಖ್ಯಸ್ಥ ವಿನಾಯಕ ಹೆಗಡೆ ತಿಳಿಸಿದರು.
ಹೊರವಲಯದ ಬೋಗಾದಿ 2ನೇ ಹಂತದಲ್ಲಿರುವ ಅಮೃತ ವಿಶ್ವವಿದ್ಯಾಪೀಠದಲ್ಲಿ ಭಾನುವಾರ ನಡೆದ 15ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
‘ಪದವೀಧರರು ಜೀವನದಲ್ಲಿ ಪೋಷಕರ ಪಾತ್ರವನ್ನು ನೆನಪಿಸಿಕೊಳ್ಳುವಂತೆಯೇ, ಗುರುಗಳ ಕೊಡುಗೆಯನ್ನೂ ಸ್ಮರಿಸಬೇಕು. ಘಟಿಕೋತ್ಸವವು ಉನ್ನತ ಅಧ್ಯಯನ ಅಥವಾ ವೃತ್ತಿಜೀವನವನ್ನು ಪ್ರವೇಶಿಸುವುದಲ್ಲ, ಬದಲಾಗಿ ನಿಜ ಜೀವನಕ್ಕೆ ಕಾಲಿಡುವುದೇ ಆಗಿದೆ’ ಎಂದರು.
‘ಪದವಿ ಪಡೆಯುವುದು ವಿದ್ಯಾರ್ಥಿ ಜೀವನದ ಅಂತ್ಯವಲ್ಲ. ಅದು ಆರಂಭ. ಜೀವನವೆಂದರೆ ನಾಯಕತ್ವ, ಸಮಗ್ರತೆ, ನ್ಯಾಯಸಮ್ಮತತೆ ಮತ್ತು ಶ್ರೇಷ್ಠತೆ. ಯಶಸ್ಸು ಎನ್ನುವುದು ಕಲ್ಪನೆ, ಗೆಲ್ಲುವ ಗೀಳು, ವೇಗ, ಕಾರ್ಯಗತಗೊಳಿಸುವಿಕೆ ಮತ್ತು ಶ್ರೇಷ್ಠತೆಯ ಮೇಲೆ ಅವಲಂಬಿತವಾಗಿದೆ’ ಎಂದು ವ್ಯಾಖ್ಯಾನಿಸಿದರು.
ದೊಡ್ಡ ಕನಸು ಕಾಣಬೇಕು:
‘ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ಸಾಧನೆಯಷ್ಟೇ ಸ್ಥಿತಿಸ್ಥಾಪಕತ್ವವನ್ನೂ ಸ್ವೀಕರಿಸಬೇಕು. ವಿಚಾರಗಳಿಗೆ ಮುಕ್ತರಾಗಿರಬೇಕು. ತಂಡದ ಕೆಲಸಕ್ಕೆ ಬೆಲೆ ನೀಡಬೇಕು. ಸರಿಯಾದ ಗೆಳೆಯರ ಸಹವಾಸವನ್ನು ಆಯ್ಕೆ ಮಾಡುವ ಹಾಗೂ ಜೀವನಪರ್ಯಂತ ಕಲಿಯುವವರಾಗಿ ಉಳಿಯಬೇಕು’ ಎಂದು ಸಲಹೆ ನೀಡಿದರು.
ಅಮೃತ ವಿಶ್ವವಿದ್ಯಾಪೀಠದ ಕುಲಸಚಿವ ಪಿ. ಅಜಿತ್‌ಕುಮಾರ್ ಮಾತನಾಡಿ, ‘ಪದವಿ ಎಂದರೆ ಕೇವಲ ಜ್ಞಾನದ ಗುರುತಿಸುವಿಕೆ ಅಲ್ಲ. ಆ ಜ್ಞಾನವನ್ನು ಬುದ್ಧಿವಂತಿಕೆಯ ಮೂಲಕ ನಿಸ್ವಾರ್ಥವಾಗಿ ಬಳಸುವ ಜವಾಬ್ದಾರಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.
661 ಮಂದಿ ಪಿಎಚ್.ಡಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಸ್ವೀಕರಿಸಿದರು. 61 ವಿದ್ಯಾರ್ಥಿಗಳು ರ‍್ಯಾಂಕ್ ಹಾಗೂ ಪದಕಗಳನ್ನು (13 ಚಿನ್ನ ಹಾಗೂ 12 ಬೆಳ್ಳಿ) ವಿತರಿಸಲಾಯಿತು.
ಅಮೃತ ವಿಶ್ವವಿದ್ಯಾಪೀಠದ ಪರೀಕ್ಷಾ ನಿಯಂತ್ರಕ ಪಿ. ಕೃಷ್ಣಕುಮಾರ್, ಮೈಸೂರು ಕ್ಯಾಂಪಸ್‌ನ ನಿರ್ದೇಶಕ ಅನಂತಾನಂದ ಚೈತನ್ಯ, ಸಂಚಾಲಕ ಮುಕ್ತಿಧಾಮೃತ ಚೈತನ್ಯ, ಅಸೋಸಿಯೇಟ್ ಡೀನ್ ಶೇಖರ್ ಬಾಬು, ಪ್ರಾಂಶುಪಾಲ ಜಿ.ರವೀಂದ್ರನಾಥ್ ಉಪಸ್ಥಿತರಿದ್ದರು.
661 ಅಭ್ಯರ್ಥಿಗಳಿಗೆ ವಿವಿಧ ಪದವಿ ಜ್ಞಾನವನ್ನು ನಿಸ್ವಾರ್ಥವಾಗಿ ಬಳಸಲು ಸಲಹೆ
ಪದವೀಧರರು ಯುವಜನರು ಹೆಮ್ಮೆ ಮತ್ತು ಸಮರ್ಪಣಾ ಭಾವದೊಂದಿಗೆ ಮಾತೃಭೂಮಿಯ ಸೇವೆ ಸಲ್ಲಿಸಬೇಕು
-ವಿನಾಯಕ ಹೆಗಡೆ ಹಿರಿಯ ಉಪಾಧ್ಯಕ್ಷ ಇನ್ಫೊಸಿಸ್ ಮೈಸೂರು ಕೇಂದ್ರ
‘ಅಜ್ಞಾನ ಜಯಿಸಲು ಅರಿವು ಅಗತ್ಯ’
ಮಾತಾ ಅಮೃತಾನಂದಮಯಿ ಮಠದ ಪ್ರಧಾನ ಕಾರ್ಯದರ್ಶಿ ಸ್ವಾಮಿ ಪೂರ್ಣಾಮೃತಾನಂದ ಪುರಿ ಮಾತನಾಡಿ ‘ಜೀವನವು ದೈವಿಕ ಶಕ್ತಿಗಳಾದ ಇಚ್ಛಾ ಶಕ್ತಿ ಜ್ಞಾನ ಶಕ್ತಿ ಮತ್ತು ಕ್ರಿಯಾ ಶಕ್ತಿಗಳನ್ನು ಸಮನ್ವಯಗೊಳಿಸುವುದರಲ್ಲಿದೆ. ಕೇವಲ ಮಾಹಿತಿ ಎಂದಿಗೂ ಸಾಕಾಗುವುದಿಲ್ಲ. ಅದು ಆಂತರಿಕ ಪರಿವರ್ತನೆಗೆ ಕಾರಣವಾಗಬೇಕು’ ಎಂದು ಪ್ರತಿಪಾದಿಸಿದರು. ‘ಶಿಕ್ಷಣವು ಕೇವಲ ಜ್ಞಾನವನ್ನು ಒದಗಿಸುವ ಕ್ರಿಯೆಯಲ್ಲ. ಬದಲಾಗಿ ಅದು ವ್ಯಕ್ತಿತ್ವಗಳನ್ನು ರೂಪಿಸುವ ಮತ್ತು ಮೌಲ್ಯಗಳನ್ನು ತುಂಬುವ ಕ್ರಿಯೆಯಾಗಿದೆ. ನಿಜವಾದ ಶಿಕ್ಷಣ ಹಾಗೂ ಬುದ್ಧಿವಂತಿಕೆಯು ವಿನಮ್ರತೆಯನ್ನು ತರುತ್ತದೆ’ ಎಂದರು. ‘ಪ್ರತಿ ವ್ಯಕ್ತಿಯೂ ಎದುರಿಸುವ ಆಂತರಿಕ ಯುದ್ಧ ಮತ್ತು ಅಜ್ಞಾನವನ್ನು ಜಯಿಸಲು ಅರಿವಿನ ಅಗತ್ಯವಿದೆ. ಪದವೀಧರರು ಮೌಲ್ಯಾಧಾರಿತ ಶಿಕ್ಷಣವನ್ನು ಸಾಕಾರಗೊಳಿಸಬೇಕು. ಕರುಣೆ ಹಾಗೂ ಜವಾಬ್ದಾರಿಯುತ ನಾಯಕರಾಗಿ ಮುಂದುವರಿಯಬೇಕು. ಪದವಿಗಳಿಗಿಂತ ವ್ಯಕ್ತಿತ್ವ ಬಹಳ ಮುಖ್ಯ ಎನ್ನುವುದನ್ನು ಮರೆಯಬಾರದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.