ADVERTISEMENT

ಮೈಸೂರು: ಖಾದ್ಯದ ಜೊತೆ ಹಾಸ್ಯದ ಹೊನಲು

ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಮೈದಾನದಲ್ಲಿ ನಡೆದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 19:27 IST
Last Updated 6 ಅಕ್ಟೋಬರ್ 2019, 19:27 IST
ಗಂಗಾವತಿ ಪ್ರಾಣೇಶ್‌
ಗಂಗಾವತಿ ಪ್ರಾಣೇಶ್‌   

ಮೈಸೂರು: ಆಹಾರ ಮೇಳದಲ್ಲಿ ಭಾನುವಾರ ಜನವೋ ಜನ. ಊಟ, ತಿಂಡಿ ಸವಿದು ಹಾಸ್ಯ ಕಲಾವಿದರ ಮಾತು ಆಲಿಸಿ ಸಂಭ್ರಮಿಸಿದರು.

ದಸರಾ ಮಹೋತ್ಸವ ಅಂಗವಾಗಿ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಮೈದಾನದಲ್ಲಿ ಗಂಗಾವತಿ ಪ್ರಾಣೇಶ್‌, ಬಸವರಾಜು ಮಹಾಮನಿ, ನರಸಿಂಹ ಜೋಷಿ ಹಾಸ್ಯದ ಹೊನಲು ಹರಿಸಿದರು.

ಗಂಗಾವತಿ ಪ್ರಾಣೇಶ್‌ ಅವರು ಹಲವು ವಿಚಾರಗಳನ್ನು ಸುಮ್ಮನೇ ಹೇಳುತ್ತಾ ಹೋದರು. ಅವರ ಮಾತಿನ ಶೈಲಿಗೆ ಜನರು ಬಿದ್ದು
ಬಿದ್ದು ನಕ್ಕರು. ಕಾನ್ವೆಂಟ್‌ನಲ್ಲಿ ಓದುವ ಮಕ್ಕಳ ಬದುಕನ್ನು ತೆರೆದಿಟ್ಟರು. ಗಂಡ ಹೆಂಡತಿಯ ಜಗಳ, ರೊಮ್ಯಾನ್ಸ್‌ ಅನ್ನು ವಿಧವಿಧವಾಗಿ ತೆರೆದಿಟ್ಟರು.

ADVERTISEMENT

‘ಜಗತ್ತಿನಲ್ಲಿ ಎಲ್ಲೂ ಬೇಕಾದರೂ ಹಣ ನೀಡಿ ಭೂಮಿ ಖರೀದಿಸಬಹುದು. ಆದರೆ, ಸ್ಮಶಾನದಲ್ಲಿ ಭೂಮಿ ಖರೀದಿಸಲು ಜೀವವನ್ನೇ ಕೊಡಬೇಕಾಗುತ್ತದೆ’ ಎಂದಾಗ ನಗುವಿನೊಂದಿಗೆ ಜೋರು ಚಪ್ಪಾಳೆ.

ನರಸಿಂಹ ಜೋಷಿ ಅವರು ರಾಜಕಾರಣಗಳ ಮಾತನ್ನು ಮಿಮಿಕ್ರಿ ಮಾಡಿದರು. ಹಾಗೆಯೇ ಮಹಾಮನಿ ಕಾಲೆಳೆದರು. ಮಹಾಮನಿ ಕೂಡ ಜನರನ್ನು ನಕ್ಕು ನಗಿಸಿದರು.

ಒಮ್ಮೆ ಮನೆಗೆ ಬೇಸರದಿಂದ ಬಂದೆ. ಏಕೆಂದು ಹೆಂಡತಿ ಕೇಳಿದಳು. ನಾನು ಕೆಲಸ ಮಾಡ್ತಿದ್ದ ಫ್ಯಾಕ್ಟರಿಗೆ ಬೆಂಕಿ ಬಿದ್ದು 10 ಜನ ಸತ್ತೋದ್ರು ಎಂದೆ. ಅದಕ್ಕೆ ಅವಳು, ‘ನೀವು ಬದುಕಿ ಬಂದಿದ್ದೀರಿ’ ಎಂದು ಪ್ರಶ್ನಿಸಿದರು. ಸಿಗರೇಟು ಸೇದಲು ಹೊರಬಂದಿದ್ದಾಗ ಬೆಂಕಿ ಬಿತ್ತು ಎಂದೆ. ಅಷ್ಟರಲ್ಲಿ ಮೃತಪಟ್ಟವರಿಗೆ ಸರ್ಕಾರ ₹ 10 ಲಕ್ಷ ಬಹುಮಾನ ಘೋಷಿಸಿತು. ಇದರಿಂದ ಅವಳ ಕೋಪ ನೆತ್ತಿಗೇರಿ, ‘ಸಿಗರೇಟು ಸೇದಬೇಡಿ ಎಂದು ಬಡ್ಕೊಂಡೆ, ಕೇಳಿದ್ರಾ ನನ್‌ ಮಾತು’ ಎಂದಳು....ಈ ಜೋಕ್‌ ಅರ್ಥವಾಗುತ್ತಿದ್ದಂತೆ ನಗುವಿನ ಅಲೆ.

ಕ್ಲಾಸ್‌ಗೆ ಮೊದಲು ಬರುತ್ತಿದ್ದೆ. ಈ ವಿಚಾರ ಇಡೀ ಊರಿಗೆ ಹಬ್ಬಿತ್ತು. ಮೇಸ್ಟ್ರು ಕೂಡ ನನ್ನ ಅವ್ವನಿಗೆ ‘ನಿನ್ನ ಮಗ ಕ್ಲಾಸ್ಟ್‌ಗೆ ಫರ್ಸ್ಟ್‌ ಬರ್ತಾನೆ’ ಎಂದಿದ್ದರು. ಆದರೆ, ಪರೀಕ್ಷೆಯಲ್ಲಿ ಥರ್ಡ್‌ ಕ್ಲಾಸ್ ಬಂದ್ಬಿಟ್ಟೆ. ಆಗ ನಮ್ಮವ್ವ, ಊರಿನವರು ಮೇಸ್ಟ್ರಿಗೆ ತರಾಟೆಗೆ ತೆಗೆದುಕೊಂಡರು.

‘ಇಷ್ಟು ದಿನ ಕ್ಲಾಸ್ಟ್‌ಗೆ ಫರ್ಸ್ಟ್‌ ಬರ್ತಿದ್ದವನು ಈಗ ಏಕೆ ಥರ್ಡ್‌ ಕ್ಲಾಸ್‌ ಬಂದ’ ಎಂದು ಪ್ರಶ್ನಿಸಿದರು. ನಿಜವಾಗಿಯೂ ನಡೆದ ಸಂಗತಿ ಎಂದರೆ ಬೆಳಿಗ್ಗೆ ಕ್ಲಾಸ್‌ಗೆ ಫರ್ಸ್ಟ್‌ ಹೋಗ್ತಿದ್ದೆ. ಅದನ್ನು ಎಲ್ಲರೂ ತಪ್ಪಾಗಿ ಅರ್ಥೈಸಿಕೊಂಡಿದ್ದರು ಎಂದಾಗ ಸಭಾಂಗಣದಲ್ಲಿ ಮತ್ತೆ ನಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.