ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಪಂಜಿನ ಕವಾಯತಿನ ರೋಮಾಂಚಕಾರಿ ‘ಬೈಕ್ ಸ್ಟಂಟ್’ ಅನ್ನು ಈ ಬಾರಿ ರದ್ದುಗೊಳಿಸಲಾಗಿದೆ. ಈ ಪಾರಂಪರಿಕ ಸಾಹಸಮಯ ಪ್ರದರ್ಶನವನ್ನು ಕೈ ಬಿಟ್ಟಿರುವುದಕ್ಕೆ, ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.
ಪಂಜಿನ ಕವಾಯತಿನಲ್ಲಿ ವಿವಿಧ ಪೊಲೀಸ್ ಪಡೆಗಳ ಪಥಸಂಚಲನ, ಡ್ರೋನ್ ಶೋ, ಲೇಸರ್ ಶೋ, ಅಶ್ವಾರೋಹಿ ದಳದ ಟೆಂಟ್ ಪೆಗ್ಗಿಂಗ್ ಗಮನ ಸೆಳೆಯುತ್ತಿತ್ತು. ವಿಶ್ವದಾಖಲೆಗಳನ್ನು ಮಾಡಿರುವ ಭಾರತೀಯ ಸೇನೆಯ ಡೇರ್ ಡೆವಿಲ್ ಟೀಮ್ ಮತ್ತು ಕಾರ್ಫ್ಸ್ ಆಫ್ ಮಿಲಿಟರಿ ಫೋರ್ಸ್ (ಸಿಎಂಪಿ) ತಂಡವು ಪ್ರದರ್ಶಿಸುತ್ತಿದ್ದ ಬೈಕ್ ಸ್ಟಂಟ್ ವೀಕ್ಷಿಸಲೆಂದೇ ಸಾವಿರಾರು ಮಂದಿ ಬರುತ್ತಾರೆ.
ಮಾನವ ಪಿರಮಿಡ್, ಸಮತೋಲನ ಕಸರತ್ತು, ರಿವರ್ಸ್ ರೈಡ್, ಕ್ರಿಸ್ ಕ್ರಾಸ್ ಜಂಪ್ ಮತ್ತು ಸಿಂಕ್ರನೈಸ್ಡ್ ಹೈ ಸ್ಪೀಡ್ ಸಿಸ್ ಪ್ಲೇ ಹಾಗೂ ಸಿಎಂಪಿ ತಂಡವು ಪ್ರದರ್ಶಿಸುವ ಸಿಂಕ್ರನೈಸ್ಡ್ ಡ್ರಿಲ್ ಮತ್ತು ಆಕ್ರೋಬ್ಯಾಟಿಕ್ ಪ್ರದರ್ಶನ ಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವ ನೀಡುತ್ತಿತ್ತು.
‘ಬೈಕ್ ಸ್ಟಂಟ್ ಬದಲಿಗೆ ವಿವಿಧ ರಾಜ್ಯಗಳ ವಿಶೇಷ ಸಂಗೀತ ಪರಿಕರಗಳ ಪ್ರದರ್ಶನ ನಡೆಯಲಿದ್ದು, ಪ್ರೇಕ್ಷಕರಿಗೆ ಮನರಂಜನೆ ದೊರೆಯಲಿದೆ’ ಎಂದು ಪಂಜಿನ ಕವಾಯತು ಸಮಿತಿಯ ಉಪ ವಿಶೇಷಾಧಿಕಾರಿಯಾಗಿರುವ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ರಾಜಾಡಳಿತದಲ್ಲಿ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತು ಜನರಲ್ಲಿ ವಿಶ್ವಾಸ ತುಂಬಲು ಪಂಜಿನ ಕವಾಯತು ನಡೆಸಲಾಗುತ್ತಿತ್ತು. ಈಗಿನ ಕಾಲಘಟ್ಟಕ್ಕೆ ಅನುಗುಣವಾಗಿ ಸೇನೆ ಹಾಗೂ ಪೊಲೀಸ್ ತುಕಡಿಗಳು ಸಾಹಸ ಪ್ರದರ್ಶನಗಳನ್ನು ನೀಡುತ್ತಿದ್ದವು. ಈಗ ಅಂತಹ ಪ್ರದರ್ಶನಗಳನ್ನೇ ಕೈಬಿಟ್ಟರೇ, ಟಿಕೆಟ್‌ಗೆ ಹಣ ನೀಡಿ ತೆರಳುವವರು ನಿರಾಸೆ ಅನುಭವಿಸುತ್ತಾರೆ’ ಎಂಬುದು ನಗರದ ನಿವಾಸಿಗಳಾದ ರಾಘವೇಂದ್ರ, ಮನೋಹರ್ ಅವರ ಆಕ್ಷೇಪ.
ಪಂಜಿನ ಕವಾಯತಿನಲ್ಲಿ ನಡೆಯುತ್ತಿದ್ದ ಬೈಕ್ ಸ್ಟಂಟ್ ಜನರಿಗೆ ಖುಷಿ ಕೊಡುತ್ತಿತ್ತು.ಶಂಕರೇಗೌಡ, ನಿವೃತ್ತ ಎಸ್‌ಪಿ
ಅದು ಏರ್ ಶೋನಷ್ಟೇ ಪ್ರಖ್ಯಾತಿ ಪಡೆದಿದೆ. ಹೀಗಾಗಿ ಉಪಸಮಿತಿಯು ಬೈಕ್ ಸ್ಟಂಟ್ ನಿಲ್ಲಿಸಬಾರದು
ಕಳೆದ ವರ್ಷ ಮಳೆಯಿಂದಾಗಿ ಬೈಕ್ ಸ್ಟಂಟ್ ಎರಡೂ ಮುಕ್ಕಾಲು ಗಂಟೆ ತಡವಾಯಿತು. ಈ ಬಾರಿಯೂ ಮಳೆ ಬಂದರೆ ಕಷ್ಟವಾಗುತ್ತದೆ. ಕವಾಯತಿನ ಇನ್ನಿತರ ಕಾರ್ಯಕ್ರಮಗಳಿಗೂ ತೊಂದರೆಯಾಗುತ್ತದೆಂದು ರದ್ದುಗೊಳಿಸಲಾಗಿದೆಸೀಮಾ ಲಾಟ್ಕರ್ ನಗರ ಪೊಲೀಸ್ ಆಯುಕ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.