
ಮೈಸೂರು: ದಸರೆಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ಬರುವವರಿಗೆ ಬಗೆಬಗೆಯ ಖಾದ್ಯಗಳನ್ನು ಉಣಬಡಿಸುವ ‘ದಸರಾ ಆಹಾರ ಮೇಳ’ಕ್ಕೆ ಸಿದ್ಧತೆ ನಡೆದಿದ್ದು, ಮಳಿಗೆಗಾಗಿ ವರ್ತಕರಿಂದ ಬೇಡಿಕೆ ಹೆಚ್ಚಿದೆ.
ಈ ಬಾರಿ ಸೆ. 22ರಿಂದ ಅಕ್ಟೋಬರ್ 5ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಎರಡು ವಾರ ಪೂರ್ತಿ ಮೇಳ ನಡೆಯಲಿರುವುದು ವಿಶೇಷ. ಅ. 2ರಂದು ಗುರುವಾರ ವಿಜಯದಶಮಿ ಮುಗಿದರೂ ನಂತರದ ಮೂರು ದಿನ ಸಹ ಮೇಳ ಮುಂದುವರಿಯಲಿದೆ. ವಾರಾಂತ್ಯದಲ್ಲೂ ಪ್ರವಾಸಿಗರು– ಸ್ಥಳೀಯರು ತಮ್ಮಿಷ್ಟದ ಖಾದ್ಯ ಸವಿಯಲು ಅವಕಾಶ ಕಲ್ಪಿಸಲಾಗುತ್ತಿದೆ.
‘ಆಹಾರ ಮೇಳದಲ್ಲಿ ಮಳಿಗೆ ತೆರೆಯಲು ವರ್ತಕರಿಂದ ಬೇಡಿಕೆ ಹೆಚ್ಚಿದೆ. ಈವರೆಗೆ 360ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 120 ಮಳಿಗೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ರುಚಿ–ಶುಚಿಯ ಹಾಗೂ ವಿಭಿನ್ನ ಬಗೆಯ ಖಾದ್ಯ ತಯಾರಿಸುವವರಿಗೆ ಆದ್ಯತೆ ಸಿಗಲಿದೆ’ ಎನ್ನುತ್ತಾರೆ ಆಹಾರ ಮೇಳ ಉಪಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ್.
ಕಳೆದ ವರ್ಷ ಆಹಾರ ಮೇಳದಲ್ಲಿ ಮಳಿಗೆಗಳ ಹಂಚಿಕೆಯಲ್ಲಿ ಗೊಂದಲವಾಗಿದ್ದು, ಕಡೆಯ ಕ್ಷಣದಲ್ಲಿ ಮಳಿಗೆಗಳ ಹಂಚಿಕೆಗೆ ವಿರೋಧ ವ್ಯಕ್ತವಾಗಿತ್ತು. ಈ ಬಾರಿ ಮುಂಚಿತವಾಗಿಯೇ ಅರ್ಜಿ ಕರೆದು ಮಳಿಗೆ ಹಂಚಿಕೆಗೆ ಆಹಾರ ಮೇಳ ಉಪ ಸಮಿತಿಯು ಕ್ರಮ ಕೈಗೊಂಡಿದೆ.
ಬಾಡಿಗೆ ಎಷ್ಟು?:
ಮೇಳದಲ್ಲಿ ಪ್ರತಿ ಮಳಿಗೆಗೆ ಮೊದಲೇ ಬಾಡಿಗೆ ನಿಗದಿಪಡಿಸಲಾಗಿದೆ. ಮಾಂಸಾಹಾರ ಮಳಿಗೆಗಳಿಗೆ ಹೆಚ್ಚಿನ ದರವಿದೆ. ಸಸ್ಯಾಹಾರ ಮಳಿಗೆಗಳಿಗೆ ₹ 50 ಸಾವಿರ ಹಾಗೂ ಮಾಂಸಾಹಾರ ಮಳಿಗೆಗಳಿಗೆ ₹75 ಸಾವಿರ ದರ ನಿಗದಿಪಡಿಸಿದ್ದು, ಇದರೊಟ್ಟಿಗೆ ಮಳಿಗೆ ಪಡೆದವರು ಶೇ 18ರಷ್ಟು ಜಿಎಸ್‌ಟಿ ಪ್ರತ್ಯೇಕವಾಗಿ ಪಾವತಿಸಬೇಕಿದೆ.
ಮೇಳದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರದ ವಿವಿಧ ಆಹಾರಗಳು ಭಕ್ಷ್ಯಪ್ರಿಯರ ನಾಲಿಗೆ ರುಚಿ ತಣಿಸಲಿವೆ. ಮೈಸೂರು ಜೊತೆಗೆ ದಾವಣಗೆರೆ, ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಸೀಮೆಯ ಆಹಾರಗಳೂ ಇರಲಿವೆ. ಬಗೆಬಗೆಯ ಬಿರಿಯಾನಿಗಳು, ಬೆಣ್ಣೆ– ಮಸಾಲೆ ದೋಸೆ, ಮಿರ್ಚಿ–ಚುರುಮುರಿ ಸಹಿತ ಹಲವು ಖಾದ್ಯಗಳು ಸಿಗಲಿವೆ.
ಸಸ್ಯಾಹಾರ ಹಾಗೂ ಮಾಂಸಾಹಾರ ವಿಭಾಗಗಳು ಪ್ರತ್ಯೇಕವಾಗಿ ಇರಲಿವೆ. ಬರುವವರಿಗಾಗಿ ನೆರಳಿನ ವ್ಯವಸ್ಥೆ ಜೊತೆಗೆ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯದ ವ್ಯವಸ್ಥೆಯೂ ಇರಲಿದೆ.
ಈ ಬಾರಿ 14 ದಿನ ಕಾಲ ಮೇಳ ಆಯೋಜನೆ ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ ವಿಜಯದಶಮಿ ನಂತರವೂ ಮೇಳ ಮುಂದುವರಿಕೆ
- ಸೆ. 22ರಿಂದ ಅ. 5ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ ನಡೆಯಲಿದೆ. ಮಳಿಗೆಗಾಗಿ ಬೇಡಿಕೆ ಹೆಚ್ಚಿದ್ದು 120 ಮಂದಿಗೆ ಮಾತ್ರ ಅವಕಾಶ ಸಿಗಲಿದೆಚಂದ್ರಶೇಖರ್ ಕಾರ್ಯಾಧ್ಯಕ್ಷ ಆಹಾರ ಮೇಳ ಉಪಸಮಿತಿ
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಈ ಬಾರಿ ಆಹಾರ ಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೂ ಇರಲಿದೆ. ಆದರೆ ಹೆಸರಾಂತ ಕಲಾವಿದರು– ಅತಿಥಿಗಳ ಬದಲಿಗೆ ಶಾಲಾ ಮಕ್ಕಳೇ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಂಜಿಸಲಿದ್ದಾರೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತಿಭಾ ಕಾರಂಜಿಯಂತಹ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಅವಕಾಶ ಸಿಗಲಿದೆ. ಪ್ರತಿ ತಾಲ್ಲೂಕಿನಿಂದ 5–6 ಶಾಲೆಗಳಿಗೆ ಅವಕಾಶ ದೊರೆಯಲಿದೆ. ಇದರೊಟ್ಟಿಗೆ ಉಚಿತ ಕಾರ್ಯಕ್ರಮ ನೀಡಲು ಕೆಲವು ಸಂಘ–ಸಂಸ್ಥೆಗಳು ಆಸಕ್ತಿ ತೋರಿದ್ದು ಅಂತಹವರಿಗೂ ಅವಕಾಶ ನೀಡಲು ಚಿಂತನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.