ಮೈಸೂರು: ಕೆಂಪಕ್ಕಿ, ಸುವಾಸನೆಯುಳ್ಳ ಅಕ್ಕಿ, ಕಪ್ಪು ಅಕ್ಕಿ, ಔಷಧಿ ಅಕ್ಕಿ, ದಪ್ಪಕ್ಕಿ ...ಹೀಗೆ ವೈವಿಧ್ಯಮಯ ‘ದೇಸಿ ಅಕ್ಕಿ’ಗಳು ಹಾಗೂ ಅವುಗಳ ಮೌಲ್ಯವರ್ಧಿತ ಪದಾರ್ಥಗಳಿಂದ ನಗರದ ನಂಜರಾಜ ಛತ್ರವು ಕಳೆಗಟ್ಟಿದ್ದು, ಗ್ರಾಹಕರನ್ನು ಕೈಬೀಸಿ ಕರೆಯುತ್ತಿದೆ.
ಭತ್ತ ಉಳಿಸಿ ಆಂದೋಲನ ಹಾಗೂ ಸಹಜ ಸಮೃದ್ಧ ಸಂಘಟನೆಯು ಶನಿವಾರದಿಂದ ಏರ್ಪಡಿಸಿರುವ ಎರಡು ದಿನಗಳ ‘ದೇಸಿ ಅಕ್ಕಿ ಮೇಳ’ವು ವಿವಿಧ ರಾಜ್ಯಗಳ ನೂರಕ್ಕೂ ಅಧಿಕ ದೇಸಿ ಅಕ್ಕಿಗಳ ಸಂಗ್ರಹದಿಂದ ಸೆಳೆಯಿತು.
ರಾಜಮುಡಿ, ಬರ್ಮಾ ಬ್ಲಾಕ್, ಸಿದ್ದ ಸಣ್ಣ, ರತ್ನಚೂಡಿ, ನವರ, ಗೋವಿಂದ ಭೋಗ್, ಎಚ್.ಎಂ.ಟಿ, ಸಿಂಧೂರ ಮಧುಸಾಲೆ ಮೊದಲಾದ ದೇಸಿ ಭತ್ತಗಳ ಬೀಜಗಳನ್ನೂ ಪ್ರದರ್ಶನಕ್ಕಿಟ್ಟಿದ್ದು, ಭತ್ತ ಸಂರಕ್ಷಕರು ತಾವು ಬೆಳೆದ ದೇಸಿ ಅಕ್ಕಿಗಳ ನೇರ ಮಾರಾಟ ಮಾಡಿದರು. ಸಿರಿಧಾನ್ಯ, ತರಕಾರಿ ಬಿತ್ತನೆ ಬೀಜಗಳು, ಗೆಡ್ಡೆ ಗೆಣಸು ಮತ್ತು ಸಾವಯವ ಉತ್ಪನ್ನಗಳು, ಹಣ್ಣಿನ ಗಿಡಗಳನ್ನು ಮಾರಾಟಕ್ಕೆ ಇಡಲಾಗಿದೆ.
ಅಸ್ಸಾಂನಿಂದ ಬಂದಿರುವ ಕೋಮಲ್ ಚಾವಲ್ ಅಕ್ಕಿ ಎಲ್ಲರನ್ನು ಸೆಳೆಯುತ್ತಿದೆ. ಇದರ ಅನ್ನ ಮಾಡಲು ಸ್ಟೌವ್ ಹೊತ್ತಿಸಬೇಕಿಲ್ಲ. ಉಗುರು ಬೆಚ್ಚಗಿನ ಅಥವಾ ಕುದಿ ನೀರು ಸಾಕು. ಅದರಲ್ಲಿ ಅಕ್ಕಿ ನೆನೆಸಿಟ್ಟರೆ ಹತ್ತು ನಿಮಿಷದಲ್ಲಿ ಅನ್ನ ಸಿದ್ಧವಾಗುತ್ತದೆ. ‘ಮ್ಯಾಜಿಕ್ ರೈಸ್’ ಎಂದು ಕರೆಯುವ ಈ ಅಕ್ಕಿ ನೋಡಲು ಜನ ಮುಗಿಬಿದ್ದರು.
ಅಕ್ಕಿಯನ್ನೇ ಮೊಳಕೆ ಬರಿಸಿ ಆಹಾರ ತಯಾರಿಕೆಗೆ ಬಳಸುವ ಥಾಯ್ಲ್ಯಾಂಡಿನ ವಿಧಾನವನ್ನು ಮೇಳದಲ್ಲಿ ಪ್ರಾಯೋಗಿಕವಾಗಿ ತೋರಿಸಲಾಗಿದೆ. ತಮಿಳುನಾಡಿನ ರೈತರು ‘ಮಾಪಿಳ್ಳೆ ಸಾಂಬ’ ಎಂಬ ಔಷಧೀಯ ಭತ್ತವನ್ನು ಮಾರಾಟ ಮಾಡುತ್ತಿದ್ದಾರೆ.
ಅಕ್ಕಿ ಅಡುಗೆ ಮತ್ತು ಚಿತ್ರಕಲಾ ಸ್ಪರ್ಧೆ:
ಮೇಳದಲ್ಲಿ ಭಾನುವಾರ ಮಧ್ಯಾಹ್ನ 12.30ಕ್ಕೆ ‘ಅಕ್ಕಿ ಅಡುಗೆ ಸ್ಪರ್ಧೆ’ ಆಯೋಜಿಸಲಾಗಿದೆ.
ಆಸಕ್ತರು ದೇಸಿ ಅಕ್ಕಿಯಿಂದ ಮಾಡಿದ ಯಾವುದೇ ಬಗೆಯ ಅಡುಗೆಗಳನ್ನು ಮನೆಯಲ್ಲೇ ತಯಾರಿಸಿ ತರಬಹುದು. ಆಯ್ದ ಉತ್ತಮ ಅಡುಗೆಗೆ ನಗದು ಬಹುಮಾನವಿದೆ. 15 ವರ್ಷದೊಳಗಿನ ಮಕ್ಕಳಿಗಾಗಿ ‘ಭತ್ತದ ಲೋಕ -ನಾ ಕಂಡಂತೆ’ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತರು ಮನೆಯಲ್ಲೇ ಚಿತ್ರ ಬರೆದು ಬೆಳಿಗ್ಗೆ 11ಕ್ಕೆ ಮೇಳಕ್ಕೆ ತರಬೇಕು ಎಂದು ಸಂಘಟಕರು ತಿಳಿಸಿದ್ದಾರೆ.
‘ದೇಸಿ ಭತ್ತಕ್ಕೆ ಸರ್ಕಾರದ ಸಹಕಾರ ಅಗತ್ಯ’
‘ದೇಸಿ ಅಕ್ಕಿ’ ಮೇಳಕ್ಕೆ ಕೊಡಗಿನ ಪೊನ್ನಂಪೇಟೆಯ ಹುದೂರಿನ ಬೀಜ ಸಂರಕ್ಷಕ ಬಿ.ಪಿ. ರವಿಶಂಕರ್ ಚಾಲನೆ ನೀಡಿದರು. ಬಳಿಕ ಮಾತನಾಡಿ ‘ಭತ್ತದ ಕೃಷಿ ದುಬಾರಿಯಾಗುತ್ತಿದೆ. ವಾಣಿಜ್ಯ ಬೆಳೆಗಳ ಆಗಮನದಿಂದ ಮೂಲೆಗೆ ಸರಿಯುತ್ತಿರುವ ದೇಸಿ ಭತ್ತಗಳನ್ನು ಮತ್ತೆ ರೈತರ ಹೊಲಕ್ಕೆ ತರಲು ಅಗತ್ಯವಿರುವ ನೆರವನ್ನು ಸರ್ಕಾರ ನೀಡಬೇಕು’ ಎಂದು ಒತ್ತಾಯಿಸಿದರು. ‘ನೂರಾರು ವರ್ಷಗಳಿಂದ ರೈತರು ಸ್ಥಳೀಯ ಭತ್ತದ ತಳಿಗಳನ್ನು ಉಳಿಸಿ ಬೆಳೆಸುತ್ತಾ ಬಂದಿದ್ದಾರೆ. ದೇಸಿ ಅಕ್ಕಿಗಳು ನಮ್ಮ ಆಹಾರ ಸಂಸ್ಕೃತಿ- ಸೊಗಡಿನೊಂದಿಗೆ ಬೆಳೆದುಕೊಂಡು ಬಂದಿವೆ’ ಎಂದರು. ಔಷಧೀಯ ಅಕ್ಕಿಗಳನ್ನು ಕೇಂದ್ರಿಯ ಆಹಾರ ಸಂಶೋಧನಾಲಯದ ನಿವೃತ್ತ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಅನಾವರಣ ಮಾಡಿದರು. ತಮಿಳುನಾಡಿನ ಭತ್ತ ಉಳಿಸಿ ಆಂದೋಲನದ ಸುರೇಶ್ ಕನ್ನ ರೇಣುಕಾ ಮಹಿಳಾ ಸಂಘದ ಮುಖ್ಯಸ್ಥೆ ಪ್ರೇಮ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ತೀರ್ಥ ಗ್ರಾಮದ ‘ಬೀಬಿ ಫಾತಿಮಾ ಮಹಿಳಾ ಸಂಘ’ದ ಅಧ್ಯಕ್ಷೆ ಬೀಬಿ ಜಾನ್ ಸಮೃದ್ಧ- ಸಾವಯವ ಕೃಷಿಕರ ಬಳಗದ ನಿರ್ದೇಶಕ ಜಿ.ಕೃಷ್ಣ ಪ್ರಸಾದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.