ADVERTISEMENT

ಮೈಸೂರು ಅಭಿವೃದ್ಧಿಗೆ ₹ 2,578 ಕೋಟಿ: ವಿವಿಧ ಕಾಮಗಾರಿಗಳಿಗೆ ಸಿಎಂ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 5:23 IST
Last Updated 19 ಜುಲೈ 2025, 5:23 IST
ಮೈಸೂರಿನ ಮಹಾರಾಜ ಮೈದಾನದ ಆವರಣದಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಪ್ರಯುಕ್ತ ಮಹಿಳೆಯರು ಧಾನ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಚಿತ್ರಿಸಿದರು – ಪ್ರಜಾವಾಣಿ ಚಿತ್ರ
ಮೈಸೂರಿನ ಮಹಾರಾಜ ಮೈದಾನದ ಆವರಣದಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಪ್ರಯುಕ್ತ ಮಹಿಳೆಯರು ಧಾನ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಚಿತ್ರಿಸಿದರು – ಪ್ರಜಾವಾಣಿ ಚಿತ್ರ   

ಮೈಸೂರು: ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಇಂದು (ಶನಿವಾರ) ನಡೆಯಲಿದ್ದು, ₹ 2,578.03 ಕೋಟಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. 

ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉದ್ದೇಶಿತ ₹192.99 ಕೋಟಿ ವೆಚ್ಚದ ‘ಯುನಿಟಿ ಮಾಲ್’, ಬನ್ನಿಮಂಟಪದಲ್ಲಿ ₹ 120 ಕೋಟಿ ವೆಚ್ಚದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ, ₹ 409 ಕೋಟಿ ವೆಚ್ಚದ ಭೂಗತ ಕೇಬಲ್ ಅಳವಡಿಕೆಯ ಸೆಸ್ಕ್‌ ಕಾಮಗಾರಿಗಳು ಶಂಕುಸ್ಥಾಪನೆಯಾಗುವ ನಗರದ ಮಹತ್ವಾಕಾಂಕ್ಷಿ ಯೋಜನೆಯಾಗಿವೆ. 

ಇದಲ್ಲದೇ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಉದ್ದೇಶಿಸಲಾಗಿರುವ ತಲಾ ₹ 9.5 ಕೋಟಿ ವೆಚ್ಚದ ನೀರಿನ ಕಾರಂಜಿ, ಇ–ಬ್ಲಾಕ್ ಅಭಿವೃದ್ಧಿ ಹಾಗೂ ₹ 1 ಕೋಟಿ ವೆಚ್ಚದ ಮೂಲಸೌಕರ್ಯ ಅಭಿವೃದ್ಧಿ, ₹ 3.59 ಕೋಟಿಯ ‘ಡ್ರ್ಯಾಗನ್ ಬೋಟಿಂಗ್ ಕೊಳ’ ಸೇರಿದಂತೆ ₹ 23.59 ಕೋಟಿ ವೆಚ್ಚದ ಕಾಮಗಾರಿಗಳೂ ಇವೆ. 

ADVERTISEMENT

ಲೋಕೋಪಯೋಗಿ ಇಲಾಖೆಯು 108.56 ಕೋಟಿಯ ವೆಚ್ಚದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಥಾಪಿಸಿರುವ ದೀನ್‌ ದಯಾಳ್ ಉಪಾಧ್ಯಾಯ ಬಾಲಕ– ಬಾಲಕಿಯರ ವಿದ್ಯಾರ್ಥಿ ನಿಲಯಗಳು, ನಂಜನಗೂಡು, ನರಸಿಂಹರಾಜ, ಕೃಷ್ಣರಾಜ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ವಿದ್ಯಾರ್ಥಿನಿಲಯಗಳ ಕಾರ್ಯಾರಂಭಕ್ಕೆ ಚಾಲನೆ ಸಿಗಲಿದೆ. 

ಕಾಂಕ್ರೀಟ್‌ ರಸ್ತೆ ಕಾಮಗಾರಿ: ₹393.41 ಕೋಟಿ ವೆಚ್ಚದಲ್ಲಿ ಜೆಎಲ್‌ಬಿ, ಹುಣಸೂರು– ಬೋಗಾದಿ, ಇರ್ವಿನ್‌, ಹಾರ್ಡಿಂಜ್ ವೃತ್ತದಿಂದ ಕೊಲಂಬಿಯಾ ಏಷ್ಯಾ, ಮಹದೇವಪುರ, ಮಾನಂದವಾಡಿ, ಕುಕ್ಕರಹಳ್ಳಿ ಜಂಕ್ಷನ್, ವಾಣಿವಿಲಾಸ ರಸ್ತೆಗಳ ಕಾಂಕ್ರೀಟ್‌ ಕಾಮಗಾರಿ, ₹ 380.84 ಕೋಟಿಯ ಪಾಲಿಕೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನಡೆಯಲಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ₹ 55.5 ಕೋಟಿ, ಕೆಪಿಟಿಸಿಎಲ್‌ನ ₹ 38.73 ಕೋಟಿ, ಸಮಾಜ ಕಲ್ಯಾಣ ಇಲಾಖೆಯ ₹ 29.35, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ₹ 14.63 ಕೋಟಿ, ಸಣ್ಣ ನೀರಾವರಿ ಇಲಾಖೆಯ ₹ 13 ಕೋಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ₹ 10.8 ಕೋಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ₹ 163.78 ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆಯಲಿವೆ. 

ಕಾರ್ಯಕ್ರಮದ ವೇದಿಕೆಯ ಸಿದ್ಧತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ ವೀಕ್ಷಿಸಿದರು.

ನೀರಾವರಿ: ₹ 419.86 ಕೋಟಿ ಜಲಸಂಪನ್ಮೂಲ ಇಲಾಖೆಯ ₹ 419.86 ಕೋಟಿ ವೆಚ್ಚದ ಕಾಮಗಾರಿಗಳು ಅನುಷ್ಠಾನಗೊಳ್ಳಲಿದ್ದು ನಂಜನಗೂಡು ತಾಲ್ಲೂಕಿನ ಕೆರೆಗಳಿಗೆ ನೀರು ಪೂರೈಸಲು ಹೆಗ್ಗಡಹಳ್ಳಿಯಲ್ಲಿ ಕಬಿನಿ ನದಿಯಲ್ಲಿ ಸ್ಥಾಪಿಸಲಾದ ₹ 58.8 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪಂಪ್‌ಹೌಸ್‌ ಉದ್ಘಾಟನೆಗೊಳ್ಳಲಿದೆ. ಪಿರಿಯಾಪಟ್ಟಣ ಎಚ್‌.ಡಿ.ಕೋಟೆಯಲ್ಲಿ ನಾಲೆಗಳು ಕೆಆರ್‌ನಗರ ಪಿರಿಯಾಪಟ್ಟಣ ತಾಲ್ಲೂಕಿನ ಏತನೀರಾವರಿ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಯಲಿದೆ. 

ಕ್ಯಾನ್ಸರ್ ಕೇಂದ್ರ ಗಾಂಧಿ ಭವನ ಉದ್ಘಾಟನೆ

ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾದ ತಲಾ ₹ 50 ಕೋಟಿ ವೆಚ್ಚದ ಕ್ಯಾನ್ಸರ್ ಕೇಂದ್ರ ಎಂಡೋಕ್ರೋನಾಲಜಿ ಕೇಂದ್ರ ಹಾಗೂ ₹ 75.5 ಕೋಟಿ ವೆಚ್ಚದ ಕಿಡ್ನಿ ಕೇಂದ್ರ ಕಟ್ಟಡಗಳು ಲೋಕಾರ್ಪಣೆ ಆಗಲಿವೆ.  ಕಾರ್ಮಿಕ ಇಲಾಖೆಯಿಂದ ಚಾಮುಂಡಿಪುರಂನಲ್ಲಿ ₹ 19.76 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ಕಾರ್ಮಿಕ ಭವನ ಕ್ರೀಡಾ ಇಲಾಖೆಯಿಂದ ನಿರ್ಮಾಣವಾದ ₹ 3.5 ಕೋಟಿಯ ಕ್ರೀಡಾ ವಿಜ್ಞಾನ ಕೇಂದ್ರ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿ ವಾರ್ತಾ ಇಲಾಖೆಯಿಂದ ನಿರ್ಮಿಸಿರುವ ₹ 3 ಕೋಟಿಯ ಗಾಂಧಿ ಭವನ ಉದ್ಘಾಟನೆಯಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.