
ಮೈಸೂರು: ‘ಗಾಂಧಿನಗರದ ಐದನೇ ಕ್ರಾಸ್‌ನ ನಗರ ಆರೋಗ್ಯ ಪ್ರಾಥಮಿಕ ಕೇಂದ್ರಕ್ಕೆ ಕಾಯಂ ವೈದ್ಯರನ್ನು ನೇಮಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ದಲಿತ ಪ್ಯಾಂಥರ್ಸ್ ಸದಸ್ಯರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
‘ಕಳೆದ ಆರು ತಿಂಗಳಿಂದ ಕಾಯಂ ವೈದ್ಯರಿಲ್ಲದೆ ಅನಾರೋಗ್ಯ ಪೀಡಿತರು, ವೃದ್ಧರು, ಗರ್ಭಿಣಿಯರು, ಮಕ್ಕಳಿಗೆ, ತೊಂದರೆ ಆಗುತ್ತಿದೆ. ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಈ ಪ್ರದೇಶದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಿದ್ದು, ಶೀಘ್ರದಲ್ಲೇ ವೈದ್ಯರು ಹಾಗೂ ಹೆಚ್ಚಿನ ಸಿಬ್ಬಂದಿ ನೇಮಿಸಬೇಕು’ ಎಂದು ಆಗ್ರಹಿಸಿದರು.
‘ಗಾಂಧಿನಗರ ಪ್ರದೇಶವು ವಾರ್ಡ್ ಸಂಖ್ಯೆ 27, 28, 29ನ ಪ್ರದೇಶವಾಗಿದ್ದು ಸದರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ವಾರ್ಡ್ ಸಂಖ್ಯೆ 14 ಸತ್ಯಾನಗರ, ವಾರ್ಡ್ ಸಂಖ್ಯೆ 34 ಗಾಯತ್ರಿಪುರಂವರೆಗೂ ವಿಸ್ತರಿಸಿದ್ದು, ಇದರಿಂದ ಗಾಂಧಿನಗರದ ಜನತೆಗೆ ದೊರೆಯಬೇಕಾದ ಆರೋಗ್ಯ ಸೌಲಭ್ಯವು ಕಡಿಮೆಯಾಗುತ್ತಿದೆ. ವಿಸ್ತಾರಗೊಂಡಿರುವ ವಾರ್ಡ್ ಕೈ ಬಿಡಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂ. ಕಿರಣ್ ಕುಮಾರ್, ವಕೀಲರಾದ ಅರವಿಂದ್, ನಾಗಣ್ಣ, ಧನಲಕ್ಷ್ಮೀ, ಅನುಪಮ್, ಜವರಪ್ಪ, ಸಂತೋಷ, ನವೀನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.