ADVERTISEMENT

ಮೈಸೂರು | ಉದ್ಯೋಗ ಮೇಳಕ್ಕೆ ವೇದಿಕೆ ಸಜ್ಜು: ಇಂದೂ ನೋಂದಣಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 2:43 IST
Last Updated 17 ಅಕ್ಟೋಬರ್ 2025, 2:43 IST
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಉದ್ಯೋಗ ಮೇಳಕ್ಕಾಗಿ ವೇದಿಕೆ ಸಜ್ಜುಗೊಳಿಸಲಾಗಿದೆ
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಉದ್ಯೋಗ ಮೇಳಕ್ಕಾಗಿ ವೇದಿಕೆ ಸಜ್ಜುಗೊಳಿಸಲಾಗಿದೆ   

ಮೈಸೂರು: ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ನಡೆದಿದ್ದ ಬೌದ್ಧ ಮಹಾಸಮ್ಮೇಳನಕ್ಕಾಗಿ ಹಾಕಲಾಗಿದ್ದ ವೇದಿಕೆಯಲ್ಲೇ, ಶುಕ್ರವಾರ (ಅ.17) ರಾಜ್ಯ ಸರ್ಕಾರದಿಂದ ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಮೇಳ ಆಯೋಜಿಸಲಾಗಿದೆ. ಇದರೊಂದಿಗೆ ‘ಯುವ ಸಮೃದ್ಧಿ ಸಮ್ಮೇಳನ’ವನ್ನೂ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಪಾಲ್ಗೊಳ್ಳಲಿದ್ದಾರೆ. ಶಾಸಕ ಕೆ.ಹರೀಶ್‌ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. 

ಈಗಾಗಲೇ ಮೇಳದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಭಾಗಗಳ 24ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 221 ಕಂಪನಿಗಳು ಭಾಗವಹಿಸಲಿದೆ. ತಮಗೆ ಬೇಕಾದ ಕೌಶಲವಿರುವ ವಿವಿಧ ವಿದ್ಯಾರ್ಹತೆಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಿದ್ದಾರೆ.

ADVERTISEMENT

ಮೇಳದ ತಯಾರಿಯ ಬಗ್ಗೆ ಅಧಿಕಾರಿಗಳಿಂದ ಗುರುವಾರ ಮಾಹಿತಿ ಪಡೆದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಆರ್‌.ಪಾಟೀಲ ಅವರು, ಉದ್ಯೋಗಕ್ಕಾಗಿ ಬರುವ ಆಕಾಂಕ್ಷಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು. ಉಪಾಹಾರದ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದಾರೆ.

ನೋಂದಣಿ ಮಾಡದವರು ಕೂಡ ಭಾಗವಹಿಸಬಹುದು. ನೇರವಾಗಿ ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಮೇಳದಲ್ಲಿ ಸುಮಾರು 45ಸಾವಿರ ಉದ್ಯೋಗದ ಅವಕಾಶ ಇದೆ. ಹೆಸರು ನೋಂದಾಯಿಸಿಕೊಂಡು ಮೇಳದಲ್ಲಿ ಭಾಗವಹಿಸಿದ ನಂತರ ಉದ್ಯೋಗ ಸಿಗದೇ ಇರುವ ಅಭ್ಯರ್ಥಿಗಳ ವಿವರವನ್ನು ಪಡೆದುಕೊಂಡು ಅವರಿಗೆ ಬೇಕಿರುವ ಕೌಶಲದ ತರಬೇತಿಯನ್ನು ಇಲಾಖೆಯ ವತಿಯಿಂದಲೇ ನೀಡಲಾಗುವುದು ಎಂದು ತಿಳಿಸಲಾಗಿದೆ.

ಈ ಹಿಂದೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಸಿದ 6 ಉದ್ಯೋಗ ಮೇಳದಲ್ಲಿ 12,966 ಅಭ್ಯರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ. ಕಾಲೇಜುಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಮೂರು ಉದ್ಯೋಗ ಮೇಳದಲ್ಲಿ 1,177 ಅಭ್ಯರ್ಥಿಗಳಿಗೆ ನೌಕರಿ ಸಿಕ್ಕಿದೆ ಎಂದು ಪ್ರಕಟಣೆ ತಿಳಿಸಿದೆ.