ADVERTISEMENT

ಮೈಸೂರು | ಬೃಹತ್‌ ಉದ್ಯೋಗ ಮೇಳ ಅ.17ರಂದು: 221ಕ್ಕೂ ಹೆಚ್ಚು ಕಂಪನಿಗಳು ಭಾಗಿ-ಸಚಿವ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 2:50 IST
Last Updated 15 ಅಕ್ಟೋಬರ್ 2025, 2:50 IST
ಶರಣಪ್ರಕಾಶ ಪಾಟೀಲ
ಶರಣಪ್ರಕಾಶ ಪಾಟೀಲ   

ಮೈಸೂರು: ‘ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಕೌಶಲ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಅಕ್ಟೋಬರ್‌ 17ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗಿದೆ. ರಾಜ್ಯದ ಯಾವುದೇ ಜಿಲ್ಲೆಗಳ ಆಸಕ್ತರು ಪಾಲ್ಗೊಳ್ಳಬಹುದು’ ಎಂದು ಸಚಿವ ಶರಣಪ್ರಕಾಶ ಪಾಟೀಲ ಮಾಹಿತಿ ನೀಡಿದರು.

‘ಮೇಳಕ್ಕೆ ಆನ್‌ಲೈನ್‌ ಮೂಲಕ ಈಗಾಗಲೇ 24 ಸಾವಿರ ಮಂದಿ ನೋಂದಾಯಿಸಿಕೊಂಡಿದ್ದಾರೆ. 220ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುತ್ತಿವೆ. ಅಭ್ಯರ್ಥಿಗಳ ನೋಂದಣಿಗಾಗಿ 60 ಮಳಿಗೆ ಹಾಗೂ ಕಂಪನಿಗಳ ನೋಂದಣಿಗೆ 10 ಮಳಿಗೆಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಸುಮಾರು 45 ಸಾವಿರದಷ್ಟು ಉದ್ಯೋಗಾವಕಾಶ ಇದೆ ಎಂದು ಕಂಪನಿಗಳು ಮಾಹಿತಿ ನೀಡಿವೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೋಂದಣಿ ಹೇಗೆ?:

‘ಆಸಕ್ತರು https://udyogamela.ksdckarnataka.com ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು. ಸ್ಥಳದಲ್ಲೇ ನೋಂದಣಿಗೂ ಅವಕಾಶವಿದೆ. ಅಧಿಕೃತ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 96064– 94308 ಅಥವಾ 96064–94301 ಸಂಪರ್ಕಿಸಬಹುದು’ ಎಂದು ಸಚಿವರು ತಿಳಿಸಿದರು.

ADVERTISEMENT

‘ಮೇಳಕ್ಕೆ ಉಚಿತ ಪ್ರವೇಶವಿದ್ದು, ಯಾವುದೇ ಕನಿಷ್ಠ ವಿದ್ಯಾರ್ಹತೆ ಹಾಗೂ ವಯಸ್ಸಿನ ಮಿತಿ ಇಲ್ಲ. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಕಂಪನಿಗಳು ಸಂದರ್ಶನ ನಡೆಸಲಿವೆ. ಉದ್ಯೋಗ ಆಕಾಂಕ್ಷಿಗಳು ಹಾಗೂ ಉದ್ಯೋಗದಾತರ ನೋಂದಣಿಯಿಂದ ಪ್ರಾರಂಭಗೊಂಡು ಸಂದರ್ಶನ, ಅಂತಿಮ ಆಯ್ಕೆ ಪ್ರಕ್ರಿಯೆ ಎಲ್ಲವೂ ಸಂಪೂರ್ಣ ಡಿಜಿಟಲ್‌ ಪ್ರಕ್ರಿಯೆ ಮೂಲಕವೇ ನಡೆಯಲಿದೆ. ಈ ಡಾಟಾವನ್ನು ಬಳಸಿಕೊಂಡು ಮುಂದೆಯೂ ಯುವಜನರಿಗೆ ಉದ್ಯೋಗ ದೊರಕಿಸುವ ಪ್ರಯತ್ನ ಮುಂದುವರಿಯಲಿದೆ’ ಎಂದರು.

ಹಲವು ವ್ಯವಸ್ಥೆ:

ಮೇಳಕ್ಕೆ ಬರುವವರಿಗಾಗಿ ಆಯಾ ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಿಂದ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಕೋರಿದ್ದೇವೆ. ಬಂದವರಿಗೆ ಉಪಾಹಾರದ ವ್ಯವಸ್ಥೆ ಇರಲಿದೆ ಎಂದರು.

‘ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡವರಲ್ಲಿ ಈವರೆಗೆ 14,825 ಮಂದಿ ತಮ್ಮ ವೈಯಕ್ತಿಕ ವಿವರಗಳನ್ನು ಒದಗಿಸಿದ್ದಾರೆ. ಇವರಲ್ಲಿ 8894 ಪುರುಷರು, 5923 ಮಹಿಳೆಯರು ಹಾಗೂ 8 ಲಿಂಗತ್ವ ಅಲ್ಪಸಂಖ್ಯಾತರು ಸೇರಿದ್ದಾರೆ. ಮೈಸೂರು ಜಿಲ್ಲೆಯಿಂದ 8,998 ಅಭ್ಯರ್ಥಿಗಳು, ಬೆಂಗಳೂರು ನಗರದಿಂದ 1770 ಮಂದಿ ಸೇರಿದಂತೆ 29 ಜಿಲ್ಲೆಗಳಿಂದ ನೋಂದಣಿ ಆಗಿದೆ ಎಂದರು.

‘ಯುವನಿಧಿ ಯೋಜನೆಯಡಿ ರಾಜ್ಯದಾದ್ಯಂತ 3 ಲಕ್ಷ ಹಾಗೂ ಮೈಸೂರು ವಿಭಾಗದಲ್ಲಿ 43,500 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಅವರಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲಾಗುತ್ತಿದೆ’ ಎಂದರು.

ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್‌, ವ್ಯವಸ್ಥಾಪಕ ನಿರ್ದೇಶಕ ನಾಗರಾಜು, ಇಲಾಖೆ ಕಾರ್ಯದರ್ಶಿ ಮನೋಜ್‌ಕುಮಾರ್ ಮೀನ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಇದ್ದರು.

ಯುವನಿಧಿ: ಭತ್ಯೆ ಪಡೆಯುವ ಉತ್ಸಾಹ, ತರಬೇತಿಗಿಲ್ಲ!

‘ಯುವನಿಧಿ ಯೋಜನೆಗೆ ರಾಜ್ಯದ 2.77 ಲಕ್ಷ ಯುವಜನ ನೋಂದಾಯಿಸಿಕೊಂಡಿದ್ದರೂ ಕೌಶಲ ತರಬೇತಿಗೆ ಮಾತ್ರ 1,500 ಮಂದಿ ಹಾಜರಾಗಿದ್ದಾರೆ. ಹಣ ಪಡೆಯುವವರೆಲ್ಲ ತರಬೇತಿಗೆ ಬರುತ್ತಿಲ್ಲ’ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ ವಿಷಾದಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು ‘ಕೌಶಲ ತರಬೇತಿ ಪಡೆದರೆ ಸರ್ಕಾರವು ಪದವೀಧರರಿಗೆ ನೀಡುವ ಹಣ ಯುವನಿಧಿ ಹಣ ಬಂದ್‌ ಆಗುತ್ತದೆ ಎಂಬ ತಪ್ಪುಕಲ್ಪನೆ ಬಹುತೇಕರಲ್ಲಿ ಇದೆ. ಈ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ. ನೋಂದಣಿಯಾದವರಿಗೆ ಮುಂದಿನ 2 ವರ್ಷ ಅಥವಾ ಉದ್ಯೋಗ ಸಿಗುವವರೆಗೂ ಹಣ ಸಿಗಲಿದೆ’ ಎಂದು ಸ್ಪಷ್ಟನೆ ನೀಡಿದರು.

‘ರಾಜ್ಯ ಸರ್ಕಾರ ಯುವನಿಧಿ ಪ್ಲಸ್ ಯೋಜನೆ ಜಾರಿಗೆ ಬಂದಿದ್ದು, ಈ ವರ್ಷ 25 ಸಾವಿರ ಜನರಿಗೆ ಕೌಶಲ ತರಬೇತಿ ನೀಡುವ ಗುರಿ ಇದೆ. ರಾಜ್ಯದ ಕಲಬುರಗಿ, ಕೊಪ್ಪಳ ಹಾಗೂ ಮೈಸೂರು ಜಿಲ್ಲೆಯ ವರುಣದಲ್ಲಿ ಬಹುಕೌಶಲ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದರು.

ಈವರೆಗೆ 12,996 ಜನರಿಗೆ ಉದ್ಯೋಗ

‘ಇಲಾಖೆಯು 2023ರಿಂದ ಈವರೆಗೆ ರಾಜ್ಯದ ಆರು ಕಡೆಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಿದ್ದು, ಒಟ್ಟು 12,996 ಜನರಿಗೆ ಉದ್ಯೋಗ ದೊರೆತಿದೆ. 26,441 ಮಂದಿ ಅಂತಿಮ ಸುತ್ತಿನ ಸಂದರ್ಶನಕ್ಕೆ ಆಯ್ಕೆ ಆಗಿದ್ದಾರೆ’ ಎಂದು ಸಚಿವ ಶರಣಪ್ರಕಾಶ ಪಾಟೀಲ ಮಾಹಿತಿ ನೀಡಿದರು.

‘ರಾಜ್ಯದ ಶಿರಾ, ಸೇಡಂ, ಚನ್ನಪಟ್ಟಣ, ಬೆಂಗಳೂರು ಹಾಗೂ ಈ ವರ್ಷ ಕಲಬುರಗಿಯಲ್ಲಿ ಉದ್ಯೋಗ ಮೇಳಗಳು ನಡೆದಿವೆ. ಒಟ್ಟು 1,47,150 ಮಂದಿ ನೋಂದಾಯಿಸಿಕೊಂಡಿದ್ದು, ಇವರಲ್ಲಿ 70,855 ಮಂದಿ ಭಾಗಿ ಆಗಿದ್ದರು. 1575 ಕಂಪನಿಗಳು ಪಾಲ್ಗೊಂಡಿದ್ದವು’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.