ಮೈಸೂರಿನಲ್ಲಿ ಶನಿವಾರ ಆರಂಭವಾದ 9ನೇ ಆವೃತ್ತಿಯ ‘ಮೈಸೂರು ಸಾಹಿತ್ಯ ಸಂಭ್ರಮ’ಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಲೇಖಕಿ ಬಾನು ಮುಷ್ತಾಕ್ ಚಾಲನೆ ನೀಡಿದರು. ಶುಭಾ ಸಂಜಯ್ ಅರಸ್, ಪ್ರಹ್ಲಾದ ರಾಮರಾವ್, ಸ್ಯಾಮ್ ಚೆರಿಯನ್, ದೀಪಾ ಭಾಸ್ತಿ ಪಾಲ್ಗೊಂಡಿದ್ದರು
- ಪ್ರಜಾವಾಣಿ ಚಿತ್ರ/ ಹಂಪಾ ನಾಗರಾಜ
ಮೈಸೂರು: ಹೊರಗೆ ತುಂತುರು ಮಳೆ ಜಿನುಗುತ್ತಿದ್ದರೆ, ಒಳಗೆ ಕನ್ನಡ ಅಸ್ಮಿತೆ, ಸ್ತ್ರೀವಾದ, ಮುಸ್ಲಿಂ ಸಂವೇದನೆ, ತಂತ್ರಜ್ಞಾನ, ಸಾಹಿತ್ಯ– ಸಂಗೀತ ಕುರಿತ ಚರ್ಚೆಯು ಕಾವೇರಿತ್ತು.
–ಇಲ್ಲಿನ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ ‘ಮೈಸೂರು ಲಿಟ್ರರಿ ಫೋರಂ ಚಾರಿಟಬಲ್ ಟ್ರಸ್ಟ್’ ಹಾಗೂ ‘ಮೈಸೂರು ಬುಕ್ಸ್ ಕ್ಲಬ್ಸ್’ ಶನಿವಾರ ಆಯೋಜಿಸಿದ್ದ 9ನೇ ಆವೃತ್ತಿಯ ‘ಮೈಸೂರು ಸಾಹಿತ್ಯ ಸಂಭ್ರಮ’ವು ವೈವಿಧ್ಯಮಯ ಚಿತ್ರಣಕ್ಕೆ ಸಾಕ್ಷಿಯಾಗಿತ್ತು.
ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್, ಅನುವಾದಕಿ ದೀಪಾ ಭಾಸ್ತಿ ಅವರ ಗೋಷ್ಠಿಯೊಂದಿಗೆ ಉತ್ಸವ ಅರಳಿತು. ಹಾಸನದಿಂದ ಲಂಡನ್‌ವರೆಗೆ ಬಾನು ಅವರು ಮೂಡಿಸಿದ ಹೆಜ್ಜೆಗುರುತುಗಳ ಮಾತಿಗೆ ಓದುಗರು ಕಿವಿಯರಳಿಸಿದರೆ, ದೀಪಾ ಅವರ ಭಾಷಾಂತರದ ಸವಾಲುಗಳ ಪಾಠಕ್ಕೆ ತಲೆದೂಗಿದರು.
ಜೀವಪರ ಆಗಿರಬೇಕು: ‘ಕಥೆಗಳು ಬದುಕಿಗೆ ಅಭಿಮುಖ ಆಗಿರುತ್ತವೆ. ಅವು ಎಂದಿಗೂ ಜೀವಪರ, ಜನಪರ ಆಗಿರಬೇಕು. ದೇಶದ ಸಮಸ್ಯೆಗಳಿಗೆ ಬರಹಗಾರ ಪ್ರತಿಸ್ಪಂದಿಸಲೇಬೇಕು. ಸಮಸ್ಯೆ ಬಗೆಹರಿಸಲು ಆಗದಿದ್ದರೂ ಪರಿಹಾರ ಹುಡುಕುವಂತೆ ಮಾಡಬೇಕು’ ಎಂದು ಬಾನು ಪ್ರತಿಪಾದಿಸಿದರು.
ಭರವಸೆ: ‘ನನ್ನ ಕಥೆಗಳ ಪ್ರಧಾನ ಮನೋಭೂಮಿಕೆ ಭರವಸೆ ಆಗಿದೆ. ಕಥೆಯ ಯಾವ ಪಾತ್ರ, ಮಹಿಳೆ, ವಸ್ತುವೂ ನಿರಾಶಾವಾದದ ಕಡೆ ಹೋಗುವುದಿಲ್ಲ. ಬದುಕು ಎಂದಿಗೂ ಗೋಳೆ ಅಲ್ಲ. ಬಡವರು ಸಮಸ್ಯೆಯಿದೆ ಎಂದು ಗೋಳಾಡುತ್ತಲೇ ಇರುತ್ತಾರೆಯೇ? ಹೋರಾಡುತ್ತಾರೆ’ ಎಂದು ಉದಾಹರಿಸಿದರು.
‘ಗಂಡಾಳಿಕೆ ಸಮಾಜದಲ್ಲಿ ಜೀವಂತವಾಗಿದೆ. ಎಲ್ಲ ಕ್ಷೇತ್ರದಲ್ಲೂ ಇದೆ. ಅದು ಹೆಂಗಸರಲ್ಲೂ ಇದೆ. ಇದನ್ನು ಲಿಂಗಾಧಾರಿತವಾಗಿ ತೀರ್ಮಾನಿಸಲು ಆಗುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದಾಟಿಸುವುದು: ದೀಪಾ ಭಾಸ್ತಿ ಮಾತನಾಡಿ, ‘ಅನುವಾದವು ಲೇಖಕರ ಅಭಿವ್ಯಕ್ತಿಯನ್ನು ಮತ್ತೊಂದು ಭಾಷೆಗೆ ದಾಟಿಸುವುದಾಗಿದೆ. ಪದಶಃ ಅನುವಾದವಲ್ಲದೇ, ಅದು ಸೃಜನತ್ವದ ರೂಪಾಂತರ ಆಗಿದೆ. ಅನುವಾದಕರು ಭಾಷೆಗೆ ನಿಷ್ಠರಾಗಿರಬೇಕು’ ಎಂದರು.
‘ಜಗತ್ತನ್ನು ಯೂರೋಪ್ ಕೇಂದ್ರಿತವಾಗಿ, ದೇಶವನ್ನು ಉತ್ತರ ಭಾರತ ಕೇಂದ್ರಿತವಾಗಿ ನೋಡಬಾರದು. ಪ್ರತಿಯೊಂದು ಭಾಷೆಗೂ ಅದರದ್ದೇ ಅಸ್ಮಿತೆ ಇದ್ದು, ಅದನ್ನು ಗೌರವಿಸಬೇಕು. ರೊಟ್ಟಿಯನ್ನು ರೋಟಿ ಎಂತಲೋ, ಸೆರಗನ್ನು ಪಲ್ಲು ಎಂತಲೋ ಭಾಷಾನುವಾದದಲ್ಲಿ ವಿವರಿಸಲಾಗದು’ ಎಂದು ಹೇಳಿದರು.
ಭಾವಗನ್ನಡಿ: ಉತ್ಸವಕ್ಕೆ ಚಾಲನೆ ನೀಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ‘ಸಾಹಿತ್ಯವು ಜನರ ಹೋರಾಟ, ಕನಸುಗಳ ಭಾವಗನ್ನಡಿಯಾಗಿದೆ. ಜನ ಸಂಸ್ಕೃತಿಯೊಂದಿಗೆ ಬೆರೆತಿರುವ ಅದು ನಮ್ಮ ಸೃಜಶೀಲತೆ, ಬಹುತ್ವ, ಸೌಹಾರ್ದತೆ, ಬೌದ್ಧಿಕ ಸ್ವಾತಂತ್ರ್ಯದ ಸಂಭ್ರಮವಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಡಿಆರ್‌ಡಿಒದ ನಿವೃತ್ತ ವಿಜ್ಞಾನಿ ಪ್ರಹ್ಲಾದ್ ರಾಮ್‌ರಾವ್ ಮಾತನಾಡಿ, ‘ದೇಶವು ನೆಮ್ಮದಿಯಾಗಿ ಇರಬೇಕೆಂದರೆ ಆಹಾರ ಭದ್ರತೆ, ಬೌದ್ಧಿಕತೆ ಸೇರಿದಂತೆ ಆಂತರಿಕ ಭದ್ರತೆ ಇರಬೇಕು. ಸಂಗೀತ, ನಾಟಕ, ನೃತ್ಯ, ಕವಿತ್ವ, ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಯೇ ದೇಶದ ಬೆಳವಣಿಗೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.
ಟ್ರಸ್ಟ್‌ನ ಅಧ್ಯಕ್ಷೆ ಶುಭಾ ಸಂಜಯ್ ಅರಸ್, ಉಪಾಧಕ್ಷ ಸ್ಯಾಮ್ ಚೆರಿಯನ್, ಕಾರ್ಯದರ್ಶಿ ತಂಗಂ ಪಣಕ್ಕಲ್, ಪಾಲ್ಗೊಂಡಿದ್ದರು.
ಗಂಡಾಳಿಕೆ ಸಮಾಜದಲ್ಲಿ ಜೀವಂತ
ಅನುವಾದ ಸೃಜನತ್ವದ ರೂಪಾಂತರ
ಭಾಷೆಗೆ ನಿಷ್ಠರಾಗಿರಬೇಕು
‘ಕನ್ನಡ ಸಾಹಿತ್ಯ ಪರಿಷತ್ತು ಈಗಿರುವ ಪರಿಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನೀವು ಒಪ್ಪಿಕೊಳ್ಳುವುದಿಲ್ಲ ಎಂದುಕೊಂಡಿದ್ದೆ’ ಎಂಬ ಪ್ರೇಕ್ಷಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಬಾನು ಮುಷ್ತಾಕ್ ‘ಪರಿಷತ್ತು ಮುಖ್ಯವೋ.. ಅಧ್ಯಕ್ಷರೋ’ ಎಂದು ಮರುಪ್ರಶ್ನೆ ಹಾಕಿದರು. ‘ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಜರು ಕನ್ನಡದ ಉಳಿವಿಗಾಗಿ ಸ್ಥಾಪಿಸಿದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಅದಕ್ಕೆ ಗೌರವವನ್ನು ನೀಡಬೇಕು. ಅಧ್ಯಕ್ಷರ ನಡವಳಿಕೆ ಪ್ರಶ್ನಿಸಬೇಕು; ಅವರ ವಿರುದ್ಧ ತನಿಖೆ ಆಗಬೇಕು ಎಂಬುದನ್ನು ನಾನೂ ಒಪ್ಪುತ್ತೇನೆ. ಈಗ ಸರ್ಕಾರವೂ ತನಿಖೆಗೆ ಆದೇಶಿಸಿದೆ. ಫಲಿತಾಂಶವನ್ನು ನೋಡೋಣ’ ಎಂದು ಹೇಳಿದರು.
‘ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ ಅದನ್ನು ಅಡಗಿಸಲಾಗಿದೆ. ಅದಕ್ಕೆ ಕಾನೂನಿನ ಅಭಯವಿದ್ದರೂ ಮಾತನಾಡದಂತೆ ಭಯದ ವಾತಾವರಣ ಸೃಷ್ಟಿಸಲಾಗಿದೆ’ ಎಂದು ಲೇಖಕ ಗೋಪಾಲಕೃಷ್ಣ ಗಾಂಧಿ ಕಳವಳ ವ್ಯಕ್ತಪಡಿಸಿದರು. ‘ಎ ನೇಮ್ ಇನ್‌ಹೆರಿಟೆಡ್ ಎ ವಾಯ್ಸ್ ಅರ್ನಡ್’ ಕುರಿತ ಗೋಷ್ಠಿಯಲ್ಲಿ ‘ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ದೀರ್ಘ ಉಪನ್ಯಾಸ ಕೊಡುವವರು ಸತ್ಯವನ್ನೇ ಹೇಳುತ್ತಿಲ್ಲ. ಅವರು ಸ್ವವಿಮರ್ಶೆ ಮಾಡಿಕೊಳ್ಳಬೇಕಿದೆ. ಸತ್ಯವನ್ನು ಅದು ಇದ್ದಂತೆಯೇ ನಿರ್ಭಿಡೆಯಿಂದ ಹೇಳುವ ವಾತಾವರಣವು ಮಾಧ್ಯಮಗಳು ಸೇರಿದಂತೆ ಎಲ್ಲಕ್ಕೂ ಬರಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.