ಮೈಸೂರು: ವಿಶಿಷ್ಟ ಸುವಾಸನೆ ಹೊಂದಿರುವ ‘ಮೈಸೂರು ದುಂಡು ಮಲ್ಲಿಗೆ’ ಬೆಳೆಯುವ ಪ್ರದೇಶವು ಜಿಲ್ಲೆಯಲ್ಲಿ ಕ್ರಮೇಣ ಕ್ಷೀಣಿಸುತ್ತಿದೆ.
ಪ್ರಸ್ತುತ ಅಂದಾಜು 10 ಎಕರೆಯಲ್ಲಷ್ಟೇ ಈ ಪುಷ್ಪ ಕೃಷಿ ಮಾಡಲಾಗುತ್ತಿದೆ. ತಾಲ್ಲೂಕಿನ ಅಲ್ಲಲ್ಲಿ 4, 5 ಅಥವಾ 6 ಗುಂಟೆ ಲೆಕ್ಕದಲ್ಲಿ ರೈತರು ಬೆಳೆಯುತ್ತಿದ್ದಾರೆ. ಬೇಡಿಕೆ ಹೆಚ್ಚಿರುವುದರಿಂದ ಒಳ್ಳೆಯ ಬೆಲೆ ದೊರೆಯುತ್ತದೆಯಾದರೂ, ಹೂವು ಬಿಡಿಸುವುದು ನಾಜೂಕಿನ ಕೆಲಸವಾದ್ದರಿಂದ ಎಕರೆಗಟ್ಟಲೆ ಬೆಳೆಯಲು ಬೆಳೆಗಾರರು ಮುಂದೆ ಬರುತ್ತಿಲ್ಲ. ಇದರಿಂದ ಇಲ್ಲಿನ ಮಾರುಕಟ್ಟೆಯನ್ನು ತಮಿಳುನಾಡಿನ ಹೂವುಗಳೇ ಆಕ್ರಮಿಸಿವೆ.
ಇಲ್ಲಿನ ದೇವರಾಜ ಮಾರುಕಟ್ಟೆಯಲ್ಲಿ ಶನಿವಾರ ಕೆ.ಜಿ. ಮಲ್ಲಿಗೆ ಹೂವಿನ ದರ ₹800ರಿಂದ ₹900 ಇತ್ತು. ಹೂವಿನ ವ್ಯಾಪಾರಿಗಳ ಬಳಿ ಸಾಮಾನ್ಯ ದಿನಗಳಲ್ಲಿ ಮೊಳಕ್ಕೆ ₹50 ದರ ಇದ್ದರೆ, ಹಬ್ಬಗಳಿದ್ದಾಗ ₹150ರಿಂದ ₹200ರವರೆಗೂ ಬೆಲೆ ಏರಿಕೆ ಆಗುತ್ತದೆ.
ಸದ್ಯ ಮೈಸೂರು ಭಾಗದಿಂದ ಹೂವು ಬರುತ್ತಿರುವುದು ಕಡಿಮೆ ಪ್ರಮಾಣದಲ್ಲಿದೆ. ಇಲ್ಲಿಗೆ ತಮಿಳುನಾಡಿನ ಮಧುರೈ ಮೊದಲಾದ ಕಡೆಯಿಂದಲೇ ಹೆಚ್ಚು ಬರುತ್ತಿದೆ ಎನ್ನುತ್ತಾರೆ ಸಗಟು ವ್ಯಾಪಾರಿಗಳು.
ಕಾರಣ ಏನು?:
ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದು, ರೋಗ ಬಾಧೆ, ಕೊಯ್ಲಿಗೆ ಹೆಚ್ಚಿನ ಜನರ ಅಗತ್ಯ ಕಂಡುಬರುವುದು ಹಾಗೂ ಹರಸಾಹಸಪಟ್ಟು ಮಾರುಕಟ್ಟೆಗೆ ತಂದರೆ ಸೂಕ್ತ ಬೆಲೆ ಸಿಗದಿರುವುದು ಸೇರಿ ಮೊದಲಾದ ಕಾರಣದಿಂದ ಈ ಕೃಷಿ ಮಾಡುವುದರಿಂದ ವಿಮುಖರಾಗುವಂತಾಗಿದೆ ಎನ್ನುತ್ತಾರೆ ರೈತರು.
‘ಬೆಳೆದವರಿಗಿಂತಲೂ ಹೆಚ್ಚಿನ ಲಾಭವನ್ನು ಮಧ್ಯವರ್ತಿಗಳು, ವ್ಯಾಪಾರಿಗಳು ಮಾಡಿಕೊಳ್ಳುತ್ತಾರೆ. ನಮಗೆ ದೊರೆಯುವ ಲಾಭ ಕಡಿಮೆ’ ಎನ್ನುವುದು ಅವರ ಬೇಸರದ ನುಡಿ.
ಮೈಸೂರು ಮಲ್ಲಿಗೆ ತಳಿಯ ಸಸಿಗಳು ಕುಕ್ಕರಹಳ್ಳಿ ಕೆರೆಯ ನರ್ಸರಿಯಲ್ಲಿ ಸಿಗುತ್ತವೆ. ಖರ್ಚು ಹೆಚ್ಚು ಎಂಬ ಕಾರಣಕ್ಕೆ ರೈತರು ಖರೀದಿಸಲು ಹಾಗೂ ಬೆಳೆಯಲು ನಿರಾಸಕ್ತಿ ತೋರುತ್ತಿದ್ದಾರೆ. ಬೆಳೆಯಲು ಮುಂದೆ ಬರುವವರಿಗೆ ಮಾರ್ಗದರ್ಶನ ನೀಡಲು ಸಿದ್ಧವಿದ್ದೇವೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.
‘ನಾನೀಗ ಅರ್ಧ ಎಕರೆಯಲ್ಲಿ ಮೈಸೂರು ಮಲ್ಲಿಗೆ ಬೆಳೆಯುತ್ತಿದ್ದೇನೆ. ಸಸಿ ಮಾಡಿ ತಲಾ ₹30ಕ್ಕೆ ಮಾರುತ್ತಿದ್ದೇನೆ. ಹೂವನ್ನು ದೇವರಾಜ ಮಾರುಕಟ್ಟೆಗೆ ಒಯ್ದು ಮಾರುತ್ತೇನೆ. ತಮಿಳುನಾಡಿನ ಹೂವಿನಲ್ಲಿ ಪರಿಮಳವೇ ಇರುವುದಿಲ್ಲ. ಹೀಗಾಗಿ, ಮೈಸೂರು ಮಲ್ಲಿಗೆಗೆ ಬೆಲೆ ಹೆಚ್ಚಿರುತ್ತದೆ’ ಎಂದು ತಾಲ್ಲೂಕಿನ ಮಾರಗೌಡನಹಳ್ಳಿಯ ರೈತ ಕೃಷ್ಣಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.