ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ದಶಕದ ಹಿಂದೆ ನಳನಳಿಸುತ್ತಿದ್ದ ‘ಸಾತಿ ಕೆರೆ’ ಅವಸಾನದ ಅಂಚಿಗೆ ತಲುಪಿದೆ.
ಆಲನಹಳ್ಳಿ, ಗಿರಿದರ್ಶಿನಿ ಬಡಾವಣೆ, ನೇತಾಜಿ ನಗರದ ಚರಂಡಿ ನೀರು ನೇರವಾಗಿ ಕೆರೆ ಒಡಲು ಸೇರುತ್ತಿದೆ. ಕಟ್ಟಡ ತ್ಯಾಜ್ಯ ಜಲದ ಕಣ್ಣನ್ನೇ ಮುಚ್ಚಿ ಹಾಕುತ್ತಿದೆ.
ಕೆರೆ 3.29 ಎಕರೆ ವಿಸ್ತೀರ್ಣವಿದ್ದು, ಆಲನಹಳ್ಳಿ ಸರ್ವೆ ಸಂಖ್ಯೆ 34ರಲ್ಲಿದೆ. ಲಲಿತಾದ್ರಿಪುರ ರಸ್ತೆ ಪಕ್ಕದಲ್ಲಿ ಕೆರೆಯನ್ನು ಕಾಣದಂತೆ ಮಾಡಲಾಗಿದ್ದು, ಒತ್ತುವರಿದಾರರಿಗೆ ಈ ಕೆರೆಯು ನಾಶವಾಗುವುದೇ ಬೇಕಿದೆ. ಈ ಕೆರೆ ಸೌಂದರ್ಯವನ್ನು ನೋಡಲು ಯಾವುದೇ ಸಂಪರ್ಕವೂ ಇಲ್ಲ.
ಗಿರಿದರ್ಶಿನಿ ಬಡಾವಣೆ ಕಡೆಯಿಂದ ಲಲಿತಾದ್ರಿಪುರ ರಸ್ತೆ ಕಡೆಗೆ ಕೆರೆಯನ್ನು ಸೀಳುವಂತೆ ಮಣ್ಣು ರಸ್ತೆ ಮಾಡಲಾಗಿದ್ದು, ಅದರ ಇಕ್ಕೆಲದಲ್ಲಿ ಕಟ್ಟಡ ತ್ಯಾಜ್ಯ ತುಂಬಿಸಿ ಕಿರಿದಾಗಿಸಲಾಗುತ್ತಿದೆ.
‘ಚಾಮುಂಡಿ ಬೆಟ್ಟದ ಕಣಿವೆಯಲ್ಲಿರುವ ಈ ಕೆರೆಯ ಉತ್ತರ ಭಾಗದಲ್ಲಿ ಕಟ್ಟಡ ತ್ಯಾಜ್ಯದಿಂದ ತುಂಬಿ ಮುಚ್ಚಲಾಗಿದೆ’ ಎನ್ನುತ್ತಾರೆ ಆಲನಹಳ್ಳಿ ಬಡಾವಣೆ ನಿವಾಸಿ ಗುರುನಂದನ್.
‘ದಶಕದ ಹಿಂದೆ ಕೆರೆಯು ಸುಂದರವಾಗಿತ್ತು. ಆಗ ಬಡಾವಣೆಗಳು ಇರಲಿಲ್ಲ. ಒಳಚರಂಡಿ ನೀರು ಕೆರೆಗೆ ನೇರವಾಗಿ ಸೇರುತ್ತಿದೆ. ತಿಪ್ಪಯ್ಯನ ಕೆರೆಯ ಮೇಲಿನ ಹಂತದ ಕೆರೆಯಾಗಿದ್ದು, ಇದನ್ನು ಪುನರುಜ್ಜೀವನಗೊಳಿಸಬೇಕು. ತ್ಯಾಜ್ಯ ಸೇರುವುದನ್ನು ತಪ್ಪಿಸಬೇಕಿದೆ’ ಎಂದು ಜಲತಜ್ಞ ಯು.ಎನ್.ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಬೆಟ್ಟದ ಸೌಂದರ್ಯಕ್ಕೂ ಧಕ್ಕೆ:
ಲಲಿತಾದ್ರಿಪುರ ರಸ್ತೆಯ ಪಕ್ಕದಲ್ಲಿಯೇ ಇರುವ ‘ಆಲನಹಳ್ಳಿ ಅರಣ್ಯ ಉದ್ಯಾನ’ದ ಸಮೀಪದಲ್ಲಿಯೇ ಕೆರೆಯು ಇದೆ. ಇವರೆಡರ ಮಧ್ಯೆ ಸರ್ವೆ ಸಂಖ್ಯೆ 31 ಇದ್ದು, 16.21 ಎಕರೆಯ ವಿಶಾಲ ಭೂಮಿಯನ್ನು 2009ರಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಸ್ವಾಧೀನ ಪಡಿಸಿಕೊಂಡಿದೆ. ಈ ಮೊದಲು ಅದು ಗೋಮಾಳವಾಗಿತ್ತು. ಬೆಟ್ಟ– ಗುಡ್ಡದ ಭಾಗವಾಗಿದ್ದು, ಈ ಪರಿಸರ ಸೂಕ್ಷ್ಮ ವಲಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಇಲ್ಲಿ ನಡೆದರೆ, ಬೆಟ್ಟದ ಸೌಂದರ್ಯಕ್ಕೂ ಧಕ್ಕೆ ಆಗಲಿದೆ.
ಇದರ ಪಕ್ಕದಲ್ಲಿಯೇ ಸರ್ವೆ ಸಂಖ್ಯೆ 28 ಇದ್ದು, 555 ಎಕರೆ ವಿಸ್ತೀರ್ಣ ಹೊಂದಿದೆ. ಸರ್ಕಾರಿ ಗೋಮಾಳ, ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಯಿಂದ 2003–04ರಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲಾಗಿದೆ. ಅಲ್ಲಿ ಈಗಾಗಲೇ ರಸ್ತೆಗಳನ್ನು ಮಾಡಲಾಗಿದೆ. ಕಲ್ಲು– ಬಂಡೆಗಳಿರುವ ಬೆಟ್ಟದ ಪ್ರದೇಶದಲ್ಲಿ ವಸತಿ ಹಾಗೂ ಗುಂಪು ಮನೆಗಳನ್ನು ನಿರ್ಮಿಸುವುದೂ ಅವೈಜ್ಞಾನಿಕ.
‘ಸಾತಿ ಕೆರೆಯನ್ನೂ ಒಳಗೊಂಡಂತೆ ಗೋಮಾಳ, ಅರಣ್ಯ ಭೂಮಿ ಆಗಿದ್ದ ಸುತ್ತ– ಮುತ್ತಲ ಸರ್ಕಾರಿ ಭೂಮಿಯನ್ನು ವಸತಿ ಯೋಜನೆಗಳಿಗೆ ನೀಡದೇ, ಪರಿಸರ ಕೇಂದ್ರಿತ ಅಭಿವೃದ್ಧಿ ಕಡೆಗೆ ಯೋಚಿಸಬೇಕು. ಚಾಮುಂಡಿ ಬೆಟ್ಟದ ಬಫರ್ ವಲಯ ಉಳಿಸುವ ಕೆಲಸ ಮಾಡಬೇಕು’ ಎಂದು ವನ್ಯಜೀವಿ ಛಾಯಾಗ್ರಾಹಕ ಶೈಲಜೇಶ ಹೇಳಿದರು.
ದಶಕದ ಹಿಂದೆ ಸುಂದರ ಕೆರೆ ಚರಂಡಿ ನೀರಿನ ತೊಟ್ಟಿಯಾದ ಒಡಲು ಬೆಟ್ಟದ ಸೌಂದರ್ಯಕ್ಕೂ ಧಕ್ಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.