ADVERTISEMENT

ಸಿದ್ದರಾಮಯ್ಯ ಜನ್ಮದಿನಾಚರಣೆ: ಸೌಹಾರ್ದ ಸಾರಿದ ಸಹಪಂಕ್ತಿ ಭೋಜನ

ಸ್ಥಳದಲ್ಲೇ ಅಡುಗೆ ತಯಾರಿಸಿ ಭೋಜನ ಸವಿದ ಪೌರಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 3:56 IST
Last Updated 13 ಆಗಸ್ಟ್ 2025, 3:56 IST
ಮೈಸೂರಿನ ವಿಶ್ವ ಮೈತ್ರಿ ಬುದ್ಧ ವಿಹಾರದಲ್ಲಿ ಮಂಗಳವಾರ ಆಯೋಜಿಸಿದ್ದ ಸಹಪಂಕ್ತಿ ಭೋಜನದಲ್ಲಿ ರಾಜಕೀಯ ಮುಖಂಡರು, ಪ್ರಗತಿಪರ ಚಿಂತಕರು ಪೌರಕಾರ್ಮಿಕರೊಂದಿಗೆ ಊಟ ಸವಿದರು
ಮೈಸೂರಿನ ವಿಶ್ವ ಮೈತ್ರಿ ಬುದ್ಧ ವಿಹಾರದಲ್ಲಿ ಮಂಗಳವಾರ ಆಯೋಜಿಸಿದ್ದ ಸಹಪಂಕ್ತಿ ಭೋಜನದಲ್ಲಿ ರಾಜಕೀಯ ಮುಖಂಡರು, ಪ್ರಗತಿಪರ ಚಿಂತಕರು ಪೌರಕಾರ್ಮಿಕರೊಂದಿಗೆ ಊಟ ಸವಿದರು   

ಮೈಸೂರು: ಇಲ್ಲಿನ ವಿಶ್ವ ಮೈತ್ರಿ ಬುದ್ಧ ವಿಹಾರದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ಆಯೋಜಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆಯು ಸೌಹಾರ್ದದ ಮೌಲ್ಯ ಸಾರಿತು. ಸ್ಥಳದಲ್ಲೇ ಅಡುಗೆ ತಯಾರಿಸಿ ರಾಜಕೀಯ ಮುಖಂಡರು, ಪ್ರಗತಿಪರ ಚಿಂತಕರು ಪೌರಕಾರ್ಮಿಕರೊಂದಿಗೆ ಸಹಪಂಕ್ತಿಯಲ್ಲಿ ಭೋಜನ ಸವಿದರು.

‘ಸಿದ್ದರಾಮಯ್ಯ ಹೆಸರಿನಲ್ಲಿ ರಾಜಕೀಯ ತರಬೇತಿ ಶಾಲೆ ತೆರೆಯುವ ಅಗತ್ಯವಿದೆ. ಅಲ್ಲಿ ಕಲಿತಾಗ ಉತ್ತಮ ರಾಜಕಾರಣಿಗಳಾಗಲು ಸಾಧ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಹಿಯಾ, ಜಯಪ್ರಕಾಶ್ ನಾರಾಯಣ, ನಂಜುಂಡಸ್ವಾಮಿ ಪ್ರಭಾವ ಬೀರಿದ್ದಾರೆ. ಅವರನ್ನು ಓದಿಕೊಂಡು ಸಿದ್ಧಾಂತಕ್ಕೆ ಬದ್ಧರಾಗಿ ಯಾವುದೇ ವಿಷಯದಲ್ಲಿಯೂ ರಾಜೀಯಾಗದೆ ಬದುಕಿದ್ದಾರೆ’ ಎಂದು ಗ್ರಾಮಾಂತರ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌ ತಿಳಿಸಿದರು.

ಚಿಂತಕ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ‘ಬಸವಲಿಂಗಪ್ಪ ಅವರು ಮಲ ಹೊರುವ ಪದ್ಧತಿ ನಿರ್ಮೂಲನೆಗೆ ಕಾಯ್ದೆ ಜಾರಿಗೆ ತಂದರು. ಇಂದು ನಾವು ತಲೆಯಲ್ಲಿ ತುಂಬಿರುವ ಜಾತಿ ತಾರತಮ್ಯ, ಮೇಲು- ಕೀಳಿನ ಕಸವನ್ನು ಕೊನೆಗಾಣಿಸಲು ಪಣತೊಡಬೇಕು. ಸಾಮೂಹಿಕ ಹೊಣೆಗಾರಿಕೆಯಿಂದ ಈ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಸಾಹಿತಿ ಪ್ರೊ.ಕೆ.ಎಸ್.ಭಗವಾನ್‌ ಮಾತನಾಡಿ, ‘ದೇಶದಲ್ಲಿ‌ ಮನುಷ್ಯರ ಬದಲಾಗಿ ಜಾತಿ ತುಂಬಿದೆ. ಕಸುಬನ್ನು ಜಾತಿಯನ್ನಾಗಿ ಬಿಂಬಿಸಿದ್ದಾರೆ. ವಿದೇಶದಲ್ಲಿ ಈ ವ್ಯವಸ್ಥೆ ಇಲ್ಲ. ಜಾತಿ ವ್ಯವಸ್ಥೆ, ಧರ್ಮ ದಬ್ಬಾಳಿಕೆ ತಿರಸ್ಕರಿಸದಿದ್ದರೆ ಮನುಷ್ಯರಾಗಿ ಉಳಿಯುವುದಿಲ್ಲ. ಆತ್ಮಾಭಿಮಾನ ಬರಲು ಭೇದ-ಭಾವ ಬಿಡಬೇಕು’ ಎಂದು ಸಲಹೆ ನೀಡಿದರು.

ಪೌರಕಾರ್ಮಿಕ ಮಹಿಳೆಯರಿಗೆ ಆದಿ ಕರ್ನಾಟಕ ಮಹಾಸಂಸ್ಥಾನದ ಪೀಠಾಧ್ಯಕ್ಷ ಜ್ಞಾನ ಸ್ವರೂಪಾನಂದ ಸ್ವಾಮೀಜಿ ಸೀರೆ ವಿತರಿಸಿದರು. 

ಮಾಜಿ ಮೇಯರ್‌ ಪುರುಷೋತ್ತಮ್‌, ಸಂವಿಧಾನ ಸಂರಕ್ಷಣಾ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎನ್.ಭಾಸ್ಕರ್, ಸಮಾಜ ಸೇವಕ ಕೆ.ರಘುರಾಮ ವಾಜಪೇಯಿ, ವಕೀಲ ಶಿವಪ್ರಸಾದ್, ದಲಿತ ನವ ನಿರ್ಮಾಣ ವೇದಿಕೆಯ ಹರಿಹರ ಆನಂದ ಸ್ವಾಮಿ, ಉಪ್ಪಾರ ಸಂಘದ ಯೋಗೇಶ್ ಉಪ್ಪಾರ್, ಮೊಗಣ್ಣಾಚಾರ್, ಲೋಕೇಶ್ ಮಹದೇವಪುರ, ನಗರಪಾಲಿಕೆ ಪೌರ ಕಾರ್ಮಿಕರ ಸಂಘದ ಎನ್.ಮಾರಾ, ಮಂಜುಳಾ ಮಂಜುನಾಥ, ಮಾನಸ, ಪೌರಕಾರ್ಮಿಕ ಮುಖಂಡ ಶ್ರೀನಿವಾಸ್, ರೆಸ್ಪಾಸಿಬಲ್ ಸಿಟಜನ್ಸ್ ವಾಯ್ಸ್‌ನ ಎಸ್.ಎಂ.ಕಲೀಂ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.