ADVERTISEMENT

ಮೈಸೂರು | ಸಮೀಕ್ಷೆಗೆ ‘ವಾಮಮಾರ್ಗ’: ಆತಂಕ

ಜನರ ವೈಯಕ್ತಿಕ ಮಾಹಿತಿಯ ಸೋರಿಕೆ, ದುರ್ಬಳಕೆ ಸಾಧ್ಯತೆ ಆರೋಪ

ಎಂ.ಮಹೇಶ
Published 7 ಅಕ್ಟೋಬರ್ 2025, 4:50 IST
Last Updated 7 ಅಕ್ಟೋಬರ್ 2025, 4:50 IST
   

ಮೈಸೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ‘ಗುರಿ’ ತಲುಪಲು ಅಲ್ಲಲ್ಲಿ ಶಿಕ್ಷಕರು ಖಾಸಗಿಯವರ ಮೊರೆ ಹೋಗಿದ್ದು, ಮಾಹಿತಿ ಸೋರಿಕೆಯ ಆತಂಕ ಮೂಡಿಸಿದೆ.

ಸೆ.22ರಿಂದ ರಾಜ್ಯದಾದ್ಯಂತ ಆರಂಭವಾದರೂ ಹಲವು ತಾಂತ್ರಿಕ ತೊಡಕುಗಳನ್ನು ಎದುರಿಸಿದ ಪರಿಣಾಮವಾಗಿ, ಸಮೀಕ್ಷೆಯು ಅಧಿಕೃತವಾಗಿ ಆರಂಭವಾದದ್ದು ಸೆ.27ರಿಂದಲೇ.

ಹೀಗಾಗಿ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಧಾವಂತದಲ್ಲಿ, ಕೆಲವು ಶಿಕ್ಷಕರು ತಮ್ಮ ಲಾಗ್‌ಇನ್‌ಗಳನ್ನು ಬೇರೆಯವರಿಗೆ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿರುವುದು ನಡೆದಿದೆ.

ADVERTISEMENT

ಇದು ಶಿಕ್ಷಕರ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಚರ್ಚೆಯಾಗುತ್ತಿದೆ. 

ಹೇಗೆ ನಡೆಯುತ್ತಿದೆ?: ‘ಆಯೋಗದಿಂದ ನೀಡಲಾದ ಮೊಬೈಲ್ ಆ್ಯ‍ಪ್‌ನಲ್ಲಿ ಸರ್ವೆ ನಡೆಸಲಾಗುತ್ತಿದೆ. ಒಬ್ಬರಿಗೆ 40 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಯಾವುದನ್ನೂ ಖಾಲಿ ಬಿಡುವಂತಿಲ್ಲ. ಖಾಲಿ ಬಿಟ್ಟರೆ ಮುಂದಿನ ಹಂತಕ್ಕೆ ಹೋಗುವುದಕ್ಕೆ ಅವಕಾಶವಿಲ್ಲ. ಸಮೀಕ್ಷಕರು, ಎಷ್ಟೇ ವೇಗವಾಗಿ ಮಾಡಿದರೂ ಒಂದು ದಿನಕ್ಕೆ 10 ರಿಂದ 15 ಮನೆಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಹುದು. ಆದರೆ, ಕೆಲವರು ಸಮೀಕ್ಷೆ ಪ್ರಾರಂಭವಾದ ನಾಲ್ಕೇ ದಿನಗಳಲ್ಲಿ ‘ಗುರಿ’ ತ‍ಲುಪಿದ್ದಾರೆ.

ಇದು, ‘ಬೇರೆಯವರಿಂದ ಸಮೀಕ್ಷೆ ಮಾಡಿಸಿದ ಅನುಮಾನಕ್ಕೆ ಕಾರಣವಾಗಿದೆ’ ಎಂಬ ಮಾತುಗಳು ಶಿಕ್ಷಕರ ವಲಯದಲ್ಲಿ ಕೇಳಿಬರುತ್ತಿದೆ.

‘ಖಾಸಗಿ ವ್ಯಕ್ತಿಗಳಿಂದ ಸಮೀಕ್ಷೆ ಮಾಡಿಸಿದರೆ, ಮಾಹಿತಿ ಸೋರಿಕೆ ಆಗುತ್ತದೆ. ಅದು ದುರ್ಬಳಕೆ ಆಗುವ ಸಾಧ್ಯತೆಯೂ ಇದೆ. ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆಯೂ ಕಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎನ್ನುವುದು ಶಿಕ್ಷಕರ ಕಾಳಜಿ.

‘ಒತ್ತಡ’ದ ಚರ್ಚೆ

ಮೇಲ್ವಿಚಾರಕರು ಒತ್ತಡ ಹೇರುತ್ತಿರುವ ಬಗ್ಗೆಯೂ ಶಿಕ್ಷಕರ ವಲಯದಲ್ಲಿ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ.

‘ದಿನಕ್ಕೆ ಸರಾಸರಿ 30ರಿಂದ 50 ಸಮೀಕ್ಷೆ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ. ಒಂದು ಲಾಗ್‌ಇನ್‌ನಲ್ಲಿ ಬೆಳಿಗ್ಗೆ 8ಕ್ಕೆ ಪ್ರಾರಂಭಿಸಿ ರಾತ್ರಿ 8ರವರೆಗೆ ನಡೆಸಿದರೂ (ಬಿಡುವನ್ನೇ ಪಡೆಯದೇ ನಡೆಸಿದರೆ ಹಾಗೂ ಎಲ್ಲರೂ ಸರಿಯಾಗಿ ಮಾಹಿತಿ ಕೊಟ್ಟರೆ) ಹೆಚ್ಚೆಂದರೆ 25ರಿಂದ 30 ವ್ಯಕ್ತಿಗಳ ಸಮೀಕ್ಷೆ ಸಾಧ್ಯ.  ಹೀಗಿರುವಾಗ, ಹೆಚ್ಚಿನ ಒತ್ತಡ ಕೊಡುವುದು ಸರಿಯಲ್ಲ’ ಎಂದು ಶಿಕ್ಷಕರ ಗ್ರೂಪ್‌ನಲ್ಲಿ ಚರ್ಚೆ ಆಗುತ್ತಿದೆ. ಅಧಿಕಾರಿಗಳು ಹಾಗೂ ಮೇಲ್ವಿಚಾರಕರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. 

‘ಇಂದೇ ಪೂರ್ಣಗೊಳಿಸುವುದು ಕಷ್ಟ’

‘ಒಂದೇ ಮೊಬೈಲ್‌ನಲ್ಲಿ ಲಾಗ್‌ಇನ್‌ ಆಗಿ ಸಮೀಕ್ಷೆ ನಡೆಸಿದವರು ಸರಾಸರಿ 106 ಮನೆಗಳನ್ನು ಪೂರ್ಣಗೊಳಿಸುವುದಕ್ಕಷ್ಟೆ ಸಾಧ್ಯವಾಗಿದೆ. ಅಂದರೆ, ಬಹಳಷ್ಟು ಮಂದಿಗೆ ಅರ್ಧ ಗುರಿ ತಲುಪುವುದೂ ಸಾಧ್ಯವಾಗಿಲ್ಲ. ಹೀಗಾಗಿ, ಅ.7ರೊಳಗೆ ಪೂರ್ಣಗೊಳಿಸುವುದು ಕಷ್ಟ ಸಾಧ್ಯ’ ಎನ್ನುತ್ತಾರೆ ಶಿಕ್ಷಕರು.

ವಾಮಮಾರ್ಗ ಅರಿಯದೇ...

‘ಕೆಲವೆಡೆ ಜಿಲ್ಲಾಧಿಕಾರಿಗಳು, ಕೆಲ ಸಮೀಕ್ಷಕರ ವಾಮಮಾರ್ಗವನ್ನು ಅರಿಯದೇ ಸನ್ಮಾನವನ್ನೂ ಮಾಡಿದ್ದಾರೆ. ಇದರಿಂದಾಗಿ ಪ್ರಾಮಾಣಿಕವಾಗಿ ಸಮೀಕ್ಷೆ ನಡೆಸುತ್ತಿರುವ ನಮಗೆ ನೋವಾಗುತ್ತಿದೆ’ ಎಂದು ಕೆಲ ಶಿಕ್ಷಕರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಬ್ಬ ಶಿಕ್ಷಕ ಮೊಬೈಲ್ ಫೋನ್‌ ನಂಬರ್‌ನಲ್ಲಿ ಲಾಗ್ ಇನ್ ಆಗಿ ಸಮೀಕ್ಷೆ ನಡೆಸಬೇಕು. ತಮಗೆ ನೀಡಲಾದ ಎಂಪಿಐಎನ್‌ (ಎಂಪಿನ್‌) ನಂಬರ್‌ ಹಂಚಿಕೊಳ್ಳುವ ಕೆಲವರು 3–4 ಮೊಬೈಲ್ ಫೋನ್‌ನಿಂದ ಲಾಗ್‌ಇನ್‌ ಆಗಿ ಸಮೀಕ್ಷೆ ಮಾಡಿಸಿ ಪ್ರಗತಿ ಸಾಧಿಸುತ್ತಿದ್ದಾರೆ. ಕೆಲವರಿಗೆ ಸರಾಸರಿ 238ರಿಂದ 250 ಮನೆಗಳ ಗುರಿ ನೀಡಲಾಗಿದೆ. ನಿಗದಿತ ಪ್ರದೇಶ ಕೊಟ್ಟಿಲ್ಲ. ಒಂದೊಂದು ಯುಎಚ್‌ಐಡಿಗೂ ಒಂದೊಂದು ಮ್ಯಾಪ್ ನೀಡಲಾಗಿದೆ. ಹೀಗಾಗಿ, ಹುಡುಕಿ ಹೋಗಲು ಸಮಯ ಬೇಕಾಗುತ್ತದೆ. ಹೀಗಿರುವಾಗ ಕೆಲವೇ ದಿನಗಳಲ್ಲಿ ಗುರಿ ತಲುಪುವುದು ವಾಮಮಾರ್ಗದಿಂದಷ್ಟೆ ಸಾಧ್ಯ’ ಎಂಬುದು ಅವರ ದೂರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.