ನಂಜನಗೂಡು: ‘ನಗರದ ಕೃಷ್ಣ ಆಸ್ಪತ್ರೆಯಲ್ಲಿ ಗ್ರಾಮೀಣ ಪ್ರದೇಶದ 41 ವರ್ಷದ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 4.5 ಕೆ.ಜಿ. ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆ ಹೊರ ತೆಗೆಯಲಾಗಿದ್ದು, ಚೇತರಿಸಿದ ಮಹಿಳೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ’ ಎಂದು ಕೃಷ್ಣ ಆಸ್ಪತ್ರೆಯ ಸಂಸ್ಥಾಪಕಿ ಡಾ. ಗೀತಾ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು,‘ಹೊಟ್ಟೆನೋವೆಂದು ದಾಖಲಾಗಿದ್ದ ಮಹಿಳೆಯ ಅಂಡಾಶಯದಲ್ಲಿ ಗೆಡ್ಡೆಯಿರುವುದು ಸ್ಕ್ಯಾನಿಂಗ್‌ನಲ್ಲಿ ಪತ್ತೆಯಾಗಿತ್ತು. ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ತಜ್ಞ ವೈದ್ಯೆ ಡಾ.ಶ್ರೀನಿಧಿ ಹಾಗೂ ಅರಿವಳಿಕೆ ತಜ್ಞ ವೈದ್ಯೆ ಡಾ.ಸಾಯಿ ಸುಶ್ಮಿತಾ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ನಡೆಸಿ 4.5 ಕೆ.ಜಿ. ತೂಕದ ಗೆಡ್ಡೆಯನ್ನು ದೇಹದಿಂದ ಹೊರತೆಗೆದಿದ್ದಾರೆ. ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಬಳಿಕ ಮಹಿಳೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
‘ಅದೇ ದಿನ ಆಸ್ಪತ್ರೆಗೆ ದಾಖಲಾಗಿದ್ದ 51 ವರ್ಷದ ಮತ್ತೊಬ್ಬ ಮಹಿಳೆಯ ಹೊಟ್ಟೆಯಲ್ಲಿದ್ದ 2.5 ಕೆ.ಜಿ.ಗೆಡ್ಡೆಯನ್ನು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಪ್ರಭಾಕರ್ ನಾಯಕ್ ಹಾಗೂ ಡಾ.ಸಾಯಿ ಸುಶ್ಮಿತಾ ನೇತೃತ್ವದ ತಂಡ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದಿದ್ದರು’ ಎಂದರು.
ಕ್ಯಾನ್ಸರ್, ಡಯಾಲಿಸಿಸ್: ಆಸ್ಪತ್ರೆಯಲ್ಲಿ ಮೂತ್ರಪಿಂಡ ರೋಗ ತಜ್ಞ ವೈಧ್ಯ ಡಾ.ನಿರಂಜನ್ ನೇತೃತ್ವದಲ್ಲಿ ಮೂತ್ರಪಿಂಡದ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಡಯಾಲಿಸಿಸ್ ಸೇವೆಯನ್ನು ಆಸ್ಪತ್ರೆಯಲ್ಲಿ ಒದಗಿಸಲಾಗುತ್ತಿದೆ. ಪ್ರತಿ ಬುಧವಾರ ಇಲ್ಲಿ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ತಜ್ಞರು, ಶುಕ್ರವಾರ ಕ್ಯಾನ್ಸರ್ ರೋಗ ತಜ್ಞರು ರೋಗಿಗಳ ಸಲಹೆಗೆ ಲಭ್ಯವಿರುತ್ತಾರೆ ಎಂದು ಅವರು ತಿಳಿಸಿದರು.
ವೈದ್ಯಾರಾದ ಡಾ.ಕುಶಲ್ ಹಾಗೂ ಡಾ.ಜಸ್ವಂತ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.