
ನಂಜನಗೂಡು: ಸುತ್ತೂರು ಜಾತ್ರೆಯ ಅಂಗವಾಗಿ ಕೃಷಿ ಮೇಳದಲ್ಲಿ ರೈತರಿಗೆ ಅಪರೂಪದ ದೇಸಿ ತಳಿಗಳ ಪರಿಚಯ ಮಾಡಿಸುವ ಸಲುವಾಗಿ ಆಯೋಜಿಸಿರುವ ದೇಸಿ ಜಾನುವಾರು ತಳಿಗಳ ಪ್ರದರ್ಶನ ಜನರ ಮನಸೂರೆಗೊಳ್ಳುತ್ತಿದೆ.
ದೇಸಿ ತಳಿಗಳಾದ ಹಳ್ಳಿಕಾರ್, ಪುನಗನೂರು, ಸ್ವರ್ಣಕಪಿಲಾ, ರುಧ್ರಂ, ಕಾಂಕ್ರೇಜ್, ಮಲೆನಾಡು ಗಿಡ್ಡ, ಜಾಫ್ರಬಾದಿ ಎಮ್ಮೆ ಮುಂತಾದ ಜಾನುವಾರುಗಳ ಸಾಕಾಣಿಕೆ ಮತ್ತು ಬೆಲೆಯ ಬಗ್ಗೆ ಜಾನುವಾರುಗಳ ಮಾಲೀಕರಿಂದ ರೈತರು ಕುತೂಹಲದಿಂದ ವಿಚಾರಿಸಿ ಮಾಹಿತಿ ಪಡೆದರು.
ಪಾಂಡವಪುರ ತಾಲ್ಲೂಕಿನ ಹರವು ಗ್ರಾಮದ ಪ್ರದೀಪ್ ಹೆಬ್ಬಾರ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಪುರಾಣ ಕಥೆಯಲ್ಲಿ ಲಕ್ಷ್ಮಿಯನ್ನು ಹುಡುಕಿಕೊಂಡು ಬಂದ ನಾರಾಯಣ ಹುತ್ತದಲ್ಲಿ ನೆಲೆಗೊಂಡಾಗ ಪುಂಗನೂರು ಸ್ವರ್ಣ ಕಪಿಲಾ ತಳಿಯ ಹಸು ಪ್ರತಿದಿನ ಹುತ್ತದಲ್ಲಿರುವ ನಾರಾಯಣ ಸ್ವಾಮಿಗೆ ಹಾಲು ಉಣಿಸುತ್ತಿತ್ತು ಎಂಬ ಉಲ್ಲೇಖವಿದೆ. ಈ ನಂಬಿಕೆ ಕಲಿಯುಗದಲ್ಲೂ ಮುಂದುವರೆದಿದ್ದು, ಪುಂಗನೂರು ತಳಿ ಹಸುಗಳ ಹಾಲು ಪವಿತ್ರ, ಹೀಗಾಗಿ ತಿರುಪತಿಯ ತಿಮ್ಮಪ್ಪನ ಅಭಿಷೇಕಕ್ಕೆ ಪುಂಗನೂರು ತಳಿಯ ಹಸುವಿನ ಹಾಲನ್ನು ಮಾತ್ರ ಬಳಸಲಾಗುತ್ತದೆ. ಹರವು ಗ್ರಾಮದ 3 ಎಕರೆ ಪ್ರದೇಶದಲ್ಲಿ ಮಲೆನಾಡು ಗಿಡ್ಡ, ಕಾಸರಗೋಡು ಗಿಡ್ಡ, ಸ್ವರ್ಣ ಕಪಿಲಾ, ಶ್ವೇತ ಕಪಿಲಾ, ಪುಂಗನೂರು ಮುಂತಾದ ವಿರಳ ದೇಸಿ ತಳಿಗಳನ್ನು ಉಳಿಸಲು ಸಲಹುತ್ತೇವೆ, ದೇಸಿ ತಳಿಗಳ ಹಾಲಿನಿಂದ ತಯಾರಿಸಿದ ಶುದ್ಧ ತುಪ್ಪ, ಗೋಮೂತ್ರದಿಂದ ತಯಾರಿಸಿದ ಫಿನಾಯಿಲ್ , ಸಗಣಿಯಿಂದ ತಯಾರಿಸಿದ ಹಣತೆ, ಗಣೇಶ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆಯಿದೆ.
ಮಲೆನಾಡು ಗಿಡ್ಡ ತಳಿಯ ತುಪ್ಪ ಕೆ.ಜಿಗೆ ₹2,500, ಪುಂಗನೂರು, ಸ್ವರ್ಣಕಪಿಲಾ ಹಸುಗಳ ತುಪ್ಪಕ್ಕೆ ಜೆ.ಜಿಗೆ ₹4,500 ಬೆಲೆಯಿದೆ, ತಿಂಗಳಿಗೆ 60 ಕೆ.ಜಿ.ತುಪ್ಪ ತಯಾರಿಸಿ ಮಾರಾಟ ಮಾಡುತ್ತೇವೆ. ಈ ತಳಿಗಳ ತುಪ್ಪ ಸೇವನೆಯಿಂದ ಕ್ಯಾನ್ಸರ್ ಕಾಯಿಲೆ ವಿರುದ್ಧ ಪ್ರತಿರೋಧ ಶಕ್ತಿ ಹೆಚ್ಚಿಸುವ ಗುಣವಿದೆ ಎಂದು ಹೇಳಿದರು.
ಜಾಫ್ರಾಬಾದಿ ಎಮ್ಮೆ: ಶ್ರೀ ಕೃಷ್ಣಗೋಶಾಲೆಯ ಕೃಷ್ಣಮೂರ್ತಿ ಮಾತನಾಡಿ, ಒಂದೂವರೆ ಟನ್ ತೂಗುವ ಜಾಫ್ರಾಬಾದಿ ಎಮ್ಮೆ ತನ್ನ ಬೃಹತ್ ಗಾತ್ರದಿಂದ ರೈತರ ಗಮನಸೆಳೆಯುತ್ತದೆ. ಕಾಮಧೇನು ಕಾಡೆಮ್ಮೆಯಾ ಅಂತ ಕುತೂಹಲದಿಂದ ಪ್ರಶ್ನಿಸುತ್ತಾರೆ. ನಮ್ಮ ರೈತರಿಗೆ ನಮ್ಮ ವಿರಳ ದೇಸಿ ತಳಿಗಳ ಬಗ್ಗೆ ತಿಳಿದಿಲ್ಲ, ದೇಶದ ಅಪರೂಪವಾದ ದೇಸಿ ತಳಿಗಳನ್ನು ಉಳಿಸಿ, ತಳಿ ಅಭಿವೃದ್ಧಿಪಡಿಸುವ ಸಲುವಾಗಿ ಬೆಂಗಳೂರು ಬಳಿಯ ಬೇಗೂರು ಗ್ರಾಮದ 3 ಎಕರೆ ಪ್ರದೇಶಲ್ಲಿ ಕಳೆದ 13 ವರ್ಷಗಳಿಂದ ಸಲಹುತ್ತಿದ್ದೇವೆ. ನಮ್ಮಲ್ಲಿ ಭಾರತದಲ್ಲಿ ಲಭ್ಯವಿರುವ ವಿರಳ ತಳಿಗಳಾದ ಕಾಕ್ರೋಜ್, ಹೊಂಗನೂರು, ಗೀರ್, ಹಳ್ಳಿಕಾರ್, ಅಮೃತಮಹಲ್, ಮಲೆನಾಡು ಗಿಡ್ಡ, ಪುಂಗನೂರು, ಡಾಂಗಿ, ಸಾಂಗ್ಲಿ, ದಿಯೋನಿ ತಳಿಗಳಿವೆ. ರೈತರು ದೇಶದ ಅಪರೂಪದ ತಳಿಗಳನ್ನು ನಮ್ಮಲ್ಲಿ ಒಮ್ಮೆಗೆ ವೀಕ್ಷಿಸಬಹುದು. ಆಸಕ್ತಿಯುಳ್ಳ ರೈತರಿಗೆ ವಿಶಿಷ್ಟ ತಳಿಗಳ ಸಾಕಾಣಿಕೆ ಬಗ್ಗೆ ತರಬೇತಿ ಹಾಗೂ ವಿರಳ ತಳಿಗಳ ಕರುಗಳನ್ನು ಸಾಕಲು ಕೊಡುತ್ತೇವೆ. ಮಂಡ್ಯದಲ್ಲಿ ಈಚೆಗೆ ನಡೆದ ಕೃಷಿ ಮೇಳದಲ್ಲಿ ಶ್ರೀ ಕೃಷ್ಣಗೋಶಾಲೆಯ ದೇಸಿ ಜಾನುವಾರು ತಳಿಗಳನ್ನು ವೀಕ್ಷಿಸಿದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ನೀಡಿದ ಆಹ್ವಾನದ ಮೇರೆಗೆ ಜಾತ್ರೆಗೆ ವಿಶಿಷ್ಟ, ದೇಶದ ವಿರಳ ತಳಿ ಸ್ವರ್ಣ ಕಪಿಲಾ ಕರು ಮತ್ತು ಜಾನುವಾರುಗಳೊಂದಿಗೆ ಬಂದಿದ್ದೇವೆ. ಶುದ್ಧ ಸ್ವರ್ಣ ಕಪಿಲಾ ತಳಿ ಭಾರತದಲ್ಲಿ 7 ರಿಂದ 8 ಇರಬಹುದು. 10 ಲಕ್ಷ ಬೆಲೆಬಾಳುವ ಈ ವಿರಳತಳಿಯನ್ನು ಉಳಿಸಿ, ಬೆಳೆಸಬೇಕು ಎಂಬುದು ಸ್ವಾಮಿಜೀಯವರ ಆಶಯ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.