ಮೈಸೂರು: ಕಬಿನಿ ಜಲಾಶಯದಿಂದ ಹೊರಹರಿವಿನ ಪ್ರಮಾಣ ಹೆಚ್ಚಾಗಿದ್ದು, ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ. ಹದಿನಾರು ಕಾಲು ಮಂಟಪ ಮುಳುಗಡೆಯಾಗಿದ್ದು, ನದಿ ಪಾತ್ರದ ನಿವಾಸಿಗಳಿಗೆ ಪ್ರವಾಹದ ಆತಂಕ ಎದುರಾಗಿದೆ.
ಶ್ರೀಕಂಠೇಶ್ವರ ದೇವಸ್ಥಾನದ ಸ್ನಾನಘಟ್ಟದ ಮೆಟ್ಟಿಲುಗಳು ಮುಳುಗಡೆಯಾಗಿದ್ದು, ಪುಣ್ಯಸ್ನಾನ ನಿರ್ಬಂಧಿಸಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಗುರುಪೂರ್ಣಿಮೆ ದಿನವಾಗಿದ್ದರಿಂದ ಶನಿವಾರ ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ಬಂದಿದ್ದರು. ಪುಣ್ಯ ಸ್ನಾನ ಮತ್ತು ಮುಡಿ ಸೇವೆ ತಾತ್ಕಾಲಿಕವಾಗಿ ನಿಷೇಧಿಸಿರುವುದರಿಂದ ಭಕ್ತರು ಪರದಾಡುವ ಸ್ಥಿತಿ ಎದುರಾಯಿತು.
ಕೇರಳದ ವೈನಾಡು ಒಳಗೊಂಡಂತೆ ಕಬಿನಿ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಿದೆ. 30 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ಹೊರಹರಿವಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಯಿದ್ದು, ನದಿಯ ಅಂಚಿನಲ್ಲಿರುವ ಬಡಾವಣೆಗಳ ಜನರು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.