ADVERTISEMENT

ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ: ಶಾಸಕ ದರ್ಶನ್

​ಪ್ರಜಾವಾಣಿ ವಾರ್ತೆ
Published 16 ಮೇ 2025, 16:16 IST
Last Updated 16 ಮೇ 2025, 16:16 IST
ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ ಭೇಟಿ ನೀಡಿ ಗ್ರಾಮಸ್ಥರೊಡನೆ ಮಾತನಾಡಿದರು.
ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ ಭೇಟಿ ನೀಡಿ ಗ್ರಾಮಸ್ಥರೊಡನೆ ಮಾತನಾಡಿದರು.   

ನಂಜನಗೂಡು: ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿರುವುದು ಅಕ್ಷಮ್ಯ, ಇಂತಹ ಘಟನೆ ಮರುಕಳಿಸದಂತೆ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿದ ಪ್ರಕರಣ ನಡೆದ ತಾಲ್ಲೂಕಿನ ಹಲ್ಲರೆ ಗ್ರಾಮಕ್ಕೆ ಶುಕ್ರವಾರ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಜೊತೆಗೆ ಭೇಟಿ ನೀಡಿ, ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಅಹಿತಕರ ಘಟನೆಗಳಿಗೆ ಅವಕಾಶ ಇಲ್ಲ, ದೇಶದ ಕಾನೂನು ಯಾರ ಸ್ವತ್ತಲ್ಲ. ಗ್ರಾಮದಲ್ಲಿ ಶಾಂತಿಯುತವಾದ ಬದುಕಿಗೆ ಅವಕಾಶ ಕಲ್ಪಿಸಿಕೊಡಲು ನಾನು ಬದ್ಧ ಎಂದು ನೊಂದವರಿಗೆ ಧೈರ್ಯ ತುಂಬಿದರು. ತಾಳ್ಮೆ ಕಳೆದುಕೊಳ್ಳಬಾರದು, ಕಾನೂನಿನ ಬಗ್ಗೆ ಗೌರವ ಮತ್ತು ನಂಬಿಕೆ ಇರಬೇಕು. ಜಿಲ್ಲೆಯಲ್ಲಿ ಮುಂದೆ ಕೂಡ ಯಾವುದೇ ರಾಷ್ಟ್ರ ನಾಯಕರಿಗೂ ಕಿಡಿಗೇಡಿಗಳು ಅಪಮಾನ ಮಾಡಲು ಬೆಚ್ಚಿ ಬೀಳಬೇಕು. ಅಂತಹ ಕಠಿಣವಾದ ಕಾನೂನು ಕ್ರಮಕ್ಕೆ ನಾನು ಪೊಲೀಸರಲ್ಲಿ ಆಗ್ರಹಿಸಿದ್ದೇನೆ ಎಂದು ಹೇಳಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ವಿಷ್ಣುವರ್ಧನ್ ಮಾತನಾಡಿ, ‘ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು, ಶಾಸಕ ದರ್ಶನ್ ಧ್ರುವನಾರಾಯಣ  ಸಹಕಾರವನ್ನು ನೀಡಿದ್ದಾರೆ, ಕಿಡಿಗೇಡಿಗಳ ವಿರುದ್ಧ ತೆಗೆದುಕೊಳ್ಳುವ ಕ್ರಮ ಇತಿಹಾಸವಾಗಬೇಕು. ಶಾಂತಿಯುತವಾದ ಬದುಕು ಸಾಗಿಸಲು ಇಲಾಖೆ ಅನುವು ಮಾಡಿಕೊಡುತ್ತದೆ’ ಎಂದು ಹೇಳಿದರು.

ಮುಖಂಡರಾದ ಶಾಸಕ ಕಳಲೆ ಕೇಶವಮೂರ್ತಿ, ಎಸ್.ಸಿ.ಬಸವರಾಜು , ಡಿವೈಎಸ್ಪಿ ರಘು , ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಮಾರುತಿ, ತಾಲ್ಲೂಕು ನಾಯಕರ ಸಂಘದ ಅಧ್ಯಕ್ಷ ನಾಗರಾಜ್, ನಾಗೇಶ್ ರಾಜ್ , ಮಹದೇವ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.