
ಮೈಸೂರು: ‘ದ್ವೇಷ ಬಿಟ್ಟು, ದೇಶ ಕಟ್ಟುವುದು ಇಂದು ಎಲ್ಲದ್ದಕ್ಕಿಂತ ಮುಖ್ಯ’ ಎಂದು ಪ್ರೊ.ಕವಿತಾ ರೈ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪ್ರೊ.ಬರಗೂರು ರಾಮಚಂದ್ರಪ್ಪನವರ ‘ಸೌಹಾರ್ದ ಭಾರತ; ಸಮಾನತೆಯ ಸ್ನೇಹಿತ’ ಕೃತಿ ಜನಾರ್ಪಣೆಗೊಳಿಸಿ ಮಾತನಾಡಿದ ಅವರು, ‘ಸೌಹಾರ್ದ ಮತ್ತು ಸಮಾನತೆ ಎಂಬುದು ದೇಶದ ಎರಡು ಕಣ್ಣುಗಳಿದ್ದಂತೆ. ಒಂದನ್ನು ಬಿಟ್ಟು ಇನ್ನೊಂದು ಇರಲಾಗದು ಎಂಬ ಆಶಯವನ್ನೇ ರಾಮಚಂದ್ರನಪ್ಪನವರು ಹತ್ತು ಲೇಖನಗಳಲ್ಲಿ ಪ್ರತಿಪಾದಿಸಿದ್ದಾರೆ’ ಎಂದರು.
‘ಮಹಾತ್ಮ ಗಾಂಧೀಜಿ, ಬಿ.ಆರ್.ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರ ಜೀವನ–ಸಂದೇಶಗಳನ್ನು ವಿವರಿಸುವ ಮೂಲಕವೇ ದೇಶದಲ್ಲಿ ಸೌಹಾರ್ದ ಎಂಬುದು ಸಮಾನತೆಯ ಸ್ನೇಹಿತನಾಗಿರಬೇಕು ಎಂದೂ ಸಾರಿದ್ದಾರೆ. ಧರ್ಮ, ದೇವರು ಮತ್ತು ಭಕ್ತಿ ಇಂದು ಬೀದಿಗೆ ಬಂದಿದೆ. ಆಡಂಬರಕ್ಕಾಗಿಯೇ ಬಳಸಲಾಗುತ್ತಿದೆ. ಇದು ಸಲ್ಲದು’ ಎಂದು ಹೇಳಿದರು.
‘ಯಾವ ಧರ್ಮವೂ ಯಾರ ನಡುವೆಯೂ ಒಡಕು ಮೂಡಿಸಲಿಲ್ಲ. ಮಾನವೀಯತೆಯ ದ್ಯೋತಕವೇ ಧರ್ಮ ಎಂದು ಲೇಖಕರು ಕೃತಿಯಲ್ಲಿ ಬಲವಾಗಿ ಹೇಳಿದ್ದಾರೆ. ಯಾವ ಧರ್ಮವೂ ದ್ವೇಷಿಸುವುದನ್ನು ಹೇಳಿಕೊಡುವುದಿಲ್ಲ. ಬದಲಿಗೆ ಮನುಕುಲದ ಎಲ್ಲರೂ ಪರಸ್ಪರ ಪ್ರೀತಿಸುತ್ತಾ, ಸೌಹಾರ್ದದಿಂದ ಬದುಕಬೇಕೆಂದೇ ಪ್ರತಿಪಾದಿಸುತ್ತದೆ. ಭಾರತ ಇಂಥ ಸೌಹಾರ್ದಕ್ಕೆ ಸಂಕೇತವಾಗಬೇಕು’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಡಾ.ರಾಜ್‌ಕುಮಾರ್ ಫಿಲಂ ಇನ್‌ಸ್ಟಿಟ್ಯೂಟ್ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕ ನಟ್ರಾಜ್ ಶಿವು, ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ ಮತ್ತು ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ಅಧ್ಯಕ್ಷ ತಲಕಾಡು ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.
ಅಸ್ತಿತ್ವ ಸಾಂಸ್ಕೃತಿಕ ವೇದಿಕೆ, ದಲಿತ ವಿದ್ಯಾರ್ಥಿಗಳ ಒಕ್ಕೂಟ ಮತ್ತು ಅಖಿಲ ಭಾರತ ಸಂಶೋಧಕರ ಸಂಘ ಸಹಯೋಗ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.