ADVERTISEMENT

‘ಹೋರಾಟಗಾರರಿಗೆ ಎಂದೂ ಸಾವಿಲ್ಲ’

ಮಾರುತಿ ಮಾನ್ಪಡೆಗೆ ಶ್ರದ್ಧಾಂಜಲಿ: ಪ.ಮಲ್ಲೇಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 15:55 IST
Last Updated 21 ಅಕ್ಟೋಬರ್ 2020, 15:55 IST
ಮೈಸೂರಿನ ಗಾಂಧಿಚೌಕದ ಬಳಿ ಭಾರತ ಕಮ್ಯುನಿಸ್ಟ್ (ಮಾರ್ಕ್ಸ್‌ ವಾದಿ) ಜಿಲ್ಲಾ ಸಮಿತಿಯಿಂದ ಮಾರುತಿ ಮಾನ್ಪಡೆ ನಿಧನಕ್ಕೆ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಮೈಸೂರಿನ ಗಾಂಧಿಚೌಕದ ಬಳಿ ಭಾರತ ಕಮ್ಯುನಿಸ್ಟ್ (ಮಾರ್ಕ್ಸ್‌ ವಾದಿ) ಜಿಲ್ಲಾ ಸಮಿತಿಯಿಂದ ಮಾರುತಿ ಮಾನ್ಪಡೆ ನಿಧನಕ್ಕೆ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು   

ಮೈಸೂರು: ಕೋವಿಡ್‌ನಿಂದ ಮೃತಪಟ್ಟ ಹೋರಾಟಗಾರ ಮಾರುತಿ ಮಾನ್ಪಡೆ ಅವರಿಗೆ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಗರದ ಗಾಂಧಿಚೌಕದ ಬಳಿ ಭಾರತ ಕಮ್ಯುನಿಸ್ಟ್ (ಮಾರ್ಕ್ಸ್‌ ವಾದಿ) ಜಿಲ್ಲಾ ಸಮಿತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು.

ಚಿಂತಕ ಪ.ಮಲ್ಲೇಶ್ ಮಾತನಾಡಿ ‘ಹೋರಾಟಗಾರರಿಗೆ ಎಂದೂ ಸಾವಿಲ್ಲ. ಮಾನ್ಪಡೆ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದರು. ನೇರ, ನಿಷ್ಠುರವಾದ ವ್ಯಕ್ತಿತ್ವ ಅವರದ್ದು’ ಎಂದು ಸ್ಮರಿಸಿದರು.

ADVERTISEMENT

‘ಎಂದಿಗೂ ರಾಜಿಯಾಗಲಿಲ್ಲ. ಪ್ರಸ್ತುತ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರಿರಬೇಕಿತ್ತು. ಯುವಕರನ್ನು ಹೋರಾಟಗಳಿಗೆ ಉತ್ತೇಜಿಸುವುದಕ್ಕೆ ಮಾನ್ಪಡೆ ಅಗತ್ಯವಿತ್ತು’ ಎಂದರು.

ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜ್ ಮಾತನಾಡಿ, ‘ಮಾರುತಿ ಮಾನ್ಪಡೆ ರಾಜ್ಯದಲ್ಲಿ ದೇವದಾಸಿ ಮಹಿಳೆಯರ ಸಂಘ, ಆದಿವಾಸಿ, ದಲಿತರ ಸಂಘಟನೆಗಳನ್ನು ಕಟ್ಟಿದ್ದರು’ ಎಂದು ಸ್ಮರಿಸಿದರು.

‘ಮೈಸೂರಿನಿಂದ ಬೆಂಗಳೂರಿಗೆ ಬಗರ್‌ಹುಕುಂ ಸಾಗುವಳಿಗೆ ಒತ್ತಾಯಿಸಿ ಪಾದಯಾತ್ರೆ ಹಾಗೂ ಅಂದಿನ ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಮನೆಗೆ ಪಾದಯಾತ್ರೆ ಸಂಘಟಿಸಿದ್ದರು. ಈಚೆಗೆ ನಡೆದ ಭೂ ಸ್ವಾಧೀನ ಮಸೂದೆ ತಿದ್ದುಪಡಿ ವಿರೋಧಿಸಿ ನಡೆದ ಹೋರಾಟದಲ್ಲೂ ಪ್ರಮುಖ ಪಾತ್ರ ವಹಿದ್ದರು’ ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಎನ್.ವಿಜಯ್‌ಕುಮಾರ್, ಪಿಯುಸಿಎಲ್‌ನ ಡಾ.ಲಕ್ಷ್ಮೀನಾರಾಯಣ, ರತಿರಾವ್, ಜಗನ್ನಾಥ್, ಚೌಡಳ್ಳಿ ಜವರಯ್ಯ, ಸ್ವರಾಜ್ ಇಂಡಿಯಾದ ಉಗ್ರ ನರಸಿಂಹೇಗೌಡ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಲ.ಜಗನ್ನಾಥ್, ಅಭಿರುಚಿ ಗಣೇಶ್, ಚಂದ್ರಶೇಖರ ಮೇಟಿ ಶ್ರದ್ಧಾಂಜಲಿ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.