ADVERTISEMENT

ಹಳೆಯ 200 ಬೈಕ್‌ಗಳಿಗೆ ಮರು ಜೀವ

ಹುಣಸೂರು ನಗರದ ಮೆಕ್ಯಾನಿಕ್‌ ಸೈಯದ್ ಅನ್ವರ್ ಪಾಷಾ ಅವರ ಕೈಚಳಕ

ಎಚ್.ಎಸ್.ಸಚ್ಚಿತ್
Published 18 ಆಗಸ್ಟ್ 2020, 6:34 IST
Last Updated 18 ಆಗಸ್ಟ್ 2020, 6:34 IST
ಹುಣಸೂರು ನಗರದ ಹಳೆ ಸೇತುವೆ ಬಳಿ ಮಳಿಗೆಯಲ್ಲಿ ಸೈಯದ್ ಅನ್ವರ್ ಪಾಷಾ ಹಳೆಯ ಬೈಕ್‌ಗೆ ಹೊಸ ರೂಪ ನೀಡುತ್ತಿರುವುದು
ಹುಣಸೂರು ನಗರದ ಹಳೆ ಸೇತುವೆ ಬಳಿ ಮಳಿಗೆಯಲ್ಲಿ ಸೈಯದ್ ಅನ್ವರ್ ಪಾಷಾ ಹಳೆಯ ಬೈಕ್‌ಗೆ ಹೊಸ ರೂಪ ನೀಡುತ್ತಿರುವುದು   

ಹುಣಸೂರು: ಎಪ್ಪತ್ತರ ದಶಕದ ಜಾವಾ, ಯಜ್ಡಿ ಬೈಕ್‌ಗಳು ಸದ್ದು ಮಾಡುತ್ತಾ ರಸ್ತೆಯಲ್ಲಿ ಹೋಗುತ್ತಿದ್ದರೆ ಒಂದು ಕ್ಷಣ ಪಾದಚಾರಿಗಳು ಬೆಚ್ಚಿಬೀಳದೇ ಇರುವುದಿಲ್ಲ, ಅಷ್ಟೊಂದು ಶಬ್ದ ಹೊಮ್ಮಿಸುತ್ತವೆ. ಹಾಗೆಯೇ ಈ ವಿಂಟೇಜ್ ಬೈಕ್‌ಗಳನ್ನು ಈಗಲೂ ಜತನದಿಂದ ಕಾಪಾಡಿಕೊಂಡು ಬಂದವರೂ ಇದ್ದಾರೆ.

ಹಳೆಯ ಬೈಕ್‌ಗಳ ರಿಪೇರಿ ಮಾಡುವ ಮೆಕ್ಯಾನಿಕ್‌ಗಳೂ ಈಗಲೂ ಅಲ್ಲಲ್ಲಿ ಸಿಗುತ್ತಾರೆ.
ಇವರು ಆ್ಯಂಟಿಕ್‌ ಬೈಕ್‌ಗಳಿಗೆ ಜೀವಕಳೆ ತರುತ್ತಾರೆ. ಅಂಥವರ ಸಾಲಿನಲ್ಲಿ ಹುಣಸೂರು ನಗರದ ಸೈಯದ್ ಅನ್ವರ್ ಪಾಷಾ ಕೂಡ ಒಬ್ಬರು.

ಚಾಮರಾಜನಗರ ಮೂಲದ 55 ವರ್ಷದ ಪಾಷಾ, 10 ವರ್ಷಗಳಿಂದ 200 ಹಳೆಯ ಬೈಕ್‌ಗಳಿಗೆ ಹೊಸ ರೂಪ ಕೊಟ್ಟಿದ್ದಾರೆ.

ADVERTISEMENT

‘ಗುಜರಿಗೆ ಹಾಕುವ ಹಂತಕ್ಕೆ ಬಂದ ಬೈಕ್‌ಗಳನ್ನು ಖರೀದಿಸಿ, ಕೆಲ ಹೊಸ ಬಿಡಿ ಭಾಗಗಳನ್ನು ತಂದು ಸೇರಿಸಿ ಸಿದ್ಧಪಡಿಸುತ್ತೇನೆ. ಕೊಳ್ಳುವವರಿದ್ದರೆ ಅವರಿಗೆ ಮಾರುತ್ತೇನೆ’ ಎನ್ನುತ್ತಾರೆ ಪಾಷಾ.

‘ಮೈಸೂರಿನ ಜಾವಾ ಕಾರ್ಖಾನೆ ನಿವೃತ್ತ ನೌಕರ ರಾವಿ ಎಂಬುವವರ ವರ್ಕ್‌ಶಾಪ್‌ನಲ್ಲಿ 10 ವರ್ಷ ಬೈಕ್‌ ರಿಪೇರಿ ತರಬೇತಿ ಪಡೆದೆ. ಪುರಸಭೆ ಮಾಜಿ ಅಧ್ಯಕ್ಷ ಶಿವರಾಂ, ಎಚ್.ಎಸ್.ಶಿವಯ್ಯ ಅವರ ನೆರವಿನಿಂದ ಹುಣಸೂರಿನಲ್ಲಿ ನೆಲೆಸಿದೆ. ಜೀವನಕ್ಕಾಗಿ ಬೈಕ್ ರಿಪೇರಿ ಮಾಡುವುದನ್ನು ಮುಂದುವರೆಸಿದೆ. ಚಿಕ್ಕ ವರ್ಕ್‌ಶಾಪ್‌ಅನ್ನು ಇಟ್ಟು ಕೊಂಡಿದ್ದೇನೆ’ ಎಂದು ಪಾಷಾ
ಹೇಳುತ್ತಾರೆ.

‘ಬೈಕ್‌ ಬಿಡಿ ಭಾಗಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಒಂದು ಬೈಕ್ ಸಿದ್ಧಪಡಿಸಲು ಕನಿಷ್ಠ 3 ತಿಂಗಳು ಬೇಕಾಗುತ್ತದೆ.
ಭವಿಷ್ಯದ ತಲೆಮಾರಿಗೆ ದೇಸಿ ಬೈಕ್ ಕುರಿತು ಒಂದಿಷ್ಟು ಮಾಹಿತಿ ತಿಳಿಸಿ, ಪರಂಪರೆ ಉಳಿಸುವ ಕೆಲಸ ಮಾಡುತ್ತೇನೆ’ಎನ್ನುತ್ತಾರೆ ಸೈಯದ್ ಅನ್ವರ್ ಪಾಷಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.