ಮೈಸೂರು: ‘ಹಗಲು ದರೋಡೆಕೋರರು ನಿರಂಜನ ಮಠದ ಜಾಗವನ್ನು ಕಬ್ಜ ಮಾಡಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಿಸಲು ಬಿಡುವುದಿಲ್ಲ’ ಎಂದು ಗದಗದ ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ನಗರದ ನಿರಂಜನ ಮಠದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ‘ವಿವೇಕ ಸ್ಮಾರಕ ನಿರ್ಮಿಸಲು ನಮ್ಮ ತಕರಾರು ಇಲ್ಲ. ಆದರೆ, ನಿರಂಜನ ಮಠದ ಆಸ್ತಿಯನ್ನು ಕಬ್ಜ ಮಾಡುವಂತಹ ದುಸ್ಸಾಹಸಕ್ಕೆ ಕೈಹಾಕಬೇಡಿ. ನಿಮ್ಮಿಂದ ಅದು ಸಾಧ್ಯವೇ ಇಲ್ಲ’ ಎಂದು ತಿಳಿಸಿದರು.
‘ರಾಜ್ಯದಲ್ಲಿ ವೀರಶೈವ ಲಿಂಗಾಯತ ಮಠಗಳನ್ನು ನಾಶ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿರುವಂತೆ ಕಾಣುತ್ತಿದೆ. ನಿರಂಜನ ಮಠದ ಸಮಸ್ಯೆಯನ್ನು ಸರ್ಕಾರ ಬಗೆಹರಿಸಬೇಕು. ಇಲ್ಲದಿದ್ದರೆ ಸರ್ಕಾರ ಹಾಗೂ ಈ ಜಾಗವನ್ನು ಅತಿಕ್ರಮಿಸಲು ಪ್ರಯತ್ನಿಸುತ್ತಿರುವವರಿಗೆ ಕುತ್ತು ಬರಲಿದೆ’ ಎಂದು ಎಚ್ಚರಿಕೆ ನೀಡಿದರು.
‘ಬೇರೆಯವರ ಜಾಗದಲ್ಲಿ ಹಕ್ಕು ಸಾಧಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಈ ಜಾಗವನ್ನು ಬಿಟ್ಟುಕೊಡಲು ವೀರಶೈವರು ಹೇಡಿಗಳಲ್ಲ; ವೀರರು’ ಎಂದರು.
‘ಸಮುದಾಯದವರು ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಬೇಕು. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ, ಹೆಣ್ಣು ಮಕ್ಕಳು ಪೊರಕೆ ಹಿಡಿದು ಮೆರವಣಿಗೆ ಮಾಡಬೇಕು. ಅದಕ್ಕೂ ಬಗ್ಗದಿದ್ದರೆ ಪಂಜು ಹಿಡಿದು ಮೆರವಣಿಗೆ ಮಾಡಬೇಕು’ ಎಂದು ಸಲಹೆ ನೀಡಿದರು.
ಶ್ರೀರಂಗಪಟ್ಟಣ ಸಮೀಪದ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ‘ವೀರಶೈವ ಪರಂಪರೆಯಲ್ಲಿ ಇದ್ದದ್ದನ್ನು ಇದ್ದ ಹಾಗೆ ಉಳಿಸಿಕೊಳ್ಳಬೇಕು. ಹೀಗಾಗಿ, ನಿರಂಜನ ಮಠವನ್ನು ಮಠವಾಗಿಯೇ ಉಳಿಸಬೇಕು. ಸರ್ಕಾರವು ತೆಗೆದುಕೊಂಡಿರುವ ಆತುರ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಆಗ್ರಹಿಸಿದರು.
‘ವಿವೇಕ ಸ್ಮಾರಕ ನಿರ್ಮಿಸಲು ಮೈಸೂರಿನಲ್ಲಿ ಎಲ್ಲೂ ಜಾಗ ಇಲ್ಲವೇ? ನಿಮ್ಮ ಜಾಗದಲ್ಲಿ ನೀವು ಮನೆ ಕಟ್ಟಿಕೊಳ್ಳಿ. ಇಲ್ಲವೇ ಸರ್ಕಾರದಿಂದ ಬೇರೆಡೆ ಜಾಗ ಪಡೆದು ಭವ್ಯ ಸ್ಮಾರಕವನ್ನೇ ನಿರ್ಮಿಸಿಕೊಳ್ಳಿ’ ಎಂದು ಸಲಹೆ ನೀಡಿದರು.
ಹುಣಸೂರು ತಾಲ್ಲೂಕಿನ ಗಾವಡಗೆರೆ ಮಠದ ನಟರಾಜ ಸ್ವಾಮೀಜಿ ಮಾತನಾಡಿ, ‘ಇಲ್ಲಿ ವಿವೇಕ ಸ್ಮಾರಕ ನಿರ್ಮಿಸಲು ನಮ್ಮ ವಿರೋಧ ಇದೆ. ಈ ವಿಚಾರದಲ್ಲಿ ಸರ್ಕಾರವು ನಮ್ಮ ಅಭಿಪ್ರಾಯವನ್ನೂ ಆಲಿಸಬೇಕು. ಇಲ್ಲಿ ಮಠ ಇದ್ದಿದ್ದರಿಂದಲೇ ಸ್ವಾಮಿ ವಿವೇಕಾನಂದರು ಉಳಿದುಕೊಳ್ಳಲು ಸಾಧ್ಯವಾಯಿತು. ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.
ಬೆಟ್ಟದಪುರದ ಸಲಿಲಾಖ್ಯ ವಿರಕ್ತ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ವೀರಶೈವ ಲಿಂಗಾಯತ ಸಮಾಜವು ದೇಶವನ್ನು ಕಟ್ಟುವ ಕೆಲಸ ಮಾಡಿದೆ. ಅಂತಹ ಸಮುದಾಯಕ್ಕೆ ಸೇರಿದ ಜಾಗದಲ್ಲಿ ಸ್ಮಾರಕ ನಿರ್ಮಿಸಬಾರದು. ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಮೈಸೂರಿನ ಪತಂಜಲಿ ಗುರು, ಮಹಾಸಭಾದ ನಿರ್ದೇಶಕ ಟಿ.ಎಸ್.ಲೋಕೇಶ್, ರಾಷ್ಟ್ರೀಯ ಕಾರ್ಯದರ್ಶಿ ಹಿನಕಲ್ ಬಸವರಾಜ್, ನಗರ ಘಟಕದ ಅಧ್ಯಕ್ಷ ಗುರುಸ್ವಾಮಿ, ಲಿಂಗರಾಜ್, ಶಿವಕುಮಾರ್ ಇದ್ದರು.
‘ವಿಕೃತ ಅವಿವೇಕದ ಸ್ಮಾರಕ’
‘ನಿರಂಜನ ಮಠದ ಆವರಣ ಗೋಡೆ ಮೇಲೆ ‘ನವೀಕೃತ’, ‘ವಿವೇಕ ಸ್ಮಾರಕ’ ಎಂಬ ನಾಮಫಲಕಗಳಿವೆ. ಒಳಗೆ ಗೋಡೆಗಳ ಮೇಲೆ ವಿವೇಕಾನಂದ, ರಾಮಕೃಷ್ಣ ಪರಮಹಂಸ ಸೇರಿದಂತೆ ಅನೇಕರ ಫೋಟೋಗಳಿವೆ. ಇದು ನವೀಕೃತ ಅಲ್ಲ; ವಿಕೃತ. ವಿವೇಕವಲ್ಲ; ಅವಿವೇಕ. ಹೀಗಾಗಿ, ವಿಕೃತ ಅವಿವೇಕದ ಸ್ಮಾರಕ ನಿರ್ಮಿಸಲು ಮುಂದಾಗಿದ್ದಾರೆ’ ಎಂದು ದಿಂಗಾಲೇಶ್ವರ ಸ್ವಾಮೀಜಿ ಕಿಡಿಕಾರಿದರು.
***
ಮಠದ ಆವರಣದಲ್ಲಿರುವ ದಕ್ಷಿಣಾಮೂರ್ತಿ ವಿಗ್ರಹವನ್ನು ಕಿತ್ತಿದ್ದು ಸರಿಯಲ್ಲ. ಇದು ಅಪರಾಧ.
–ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಚಂದ್ರವನ ಆಶ್ರಮದ ಪೀಠಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.