ADVERTISEMENT

ಎನ್‌ಐಆರ್‌ಎಫ್‌ ರ‍್ಯಾಂಕಿಂಗ್‌ನಲ್ಲಿ ಉತ್ತಮ ಸಾಧನೆ: ಮೈಸೂರು ವಿ.ವಿಗೆ 27ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 7:12 IST
Last Updated 12 ಜೂನ್ 2020, 7:12 IST
ಪ್ರೊ.ಜಿ.ಹೇಮಂತಕುಮಾರ್
ಪ್ರೊ.ಜಿ.ಹೇಮಂತಕುಮಾರ್   

ಮೈಸೂರು: ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಗುರುವಾರ ಪ್ರಕಟಿಸಿದ 2020ನೇ ಸಾಲಿನ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್‌ ರ‍್ಯಾಂಕಿಂಗ್‌ ಫ್ರೇಮ್‌ವರ್ಕ್‌ನ (ಎನ್‌ಐಆರ್‌ಎಫ್‌) ಶ್ರೇಯಾಂಕ ಪಟ್ಟಿಯಲ್ಲಿ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಮೈಸೂರು ವಿ.ವಿ. 27ನೇ ಸ್ಥಾನ ಪಡೆದುಕೊಂಡಿದೆ.

ವಿಶ್ವವಿದ್ಯಾಲಯಗಳು, ಐಐಟಿ, ಐಐಎಸ್‌ಸಿ, ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕಾಲೇಜುಗಳು ಸೇರಿದಂತೆ 1,667 ಶಿಕ್ಷಣ ಸಂಸ್ಥೆಗಳ ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ ಮೈಸೂರು ವಿ.ವಿ 47ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

‘ಎನ್‌ಐಆರ್‌ಎಫ್‌ ಶ್ರೇಯಾಂಕಪಟ್ಟಿಯಲ್ಲಿ ಮೈಸೂರು ವಿ.ವಿಗೆ ಲಭಿಸಿದ ಅತ್ಯತ್ತಮ ಶ್ರೇಯಾಂಕ ಇದಾಗಿದೆ. 2018 ರಲ್ಲಿ 100 ರಿಂದ 150ರೊಳಗಿನ ಸ್ಥಾನ ಲಭಿಸಿತ್ತು. ಕಳೆದ ವರ್ಷ 54 ನೇ ರ‍್ಯಾಂಕ್‌ ದೊರೆತಿತ್ತು’ ಎಂದು ವಿ.ವಿ. ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ತಿಳಿಸಿದರು.

ADVERTISEMENT

‘ಕಲಿಕೆ, ಸಂಪನ್ಮೂಲ, ಸಂಶೋಧನೆ ಒಳಗೊಂಡಂತೆ ಐದು ಮಾನದಂಡಗಳನ್ನು ಪರಿಗಣಿಸಿ ರ‍್ಯಾಂಕಿಂಗ್‌ ನಿರ್ಧರಿಸುವರು. ಪ್ರತಿ ವಿಭಾಗಗಳಲ್ಲಿ ಎಷ್ಟು ಅಂಕಗಳು ಬಂದಿವೆ ಎಂಬುದನ್ನು ಪರಿಶೀಲಿಸಿ, ಇನ್ನಷ್ಟು ಸುಧಾರಣೆಗೆ ಪ್ರಯತ್ನಿಸುವೆವು. ಮುಂದಿನ ವರ್ಷ ರ‍್ಯಾಂಕಿಂಗ್‌ನಲ್ಲಿ ಮೇಲಕ್ಕೇರುವುದು ನಮ್ಮ ಗುರಿ’ ಎಂದರು.

ಸಚಿವರ ಅಭಿನಂದನೆ: ಎನ್‌ಐಆರ್‌ಎಫ್‌ ರ‍್ಯಾಂಕಿಂಗ್‌ನಲ್ಲಿ ಉತ್ತಮ ಸಾಧನೆ ತೋರಿದ ಮೈಸೂರು ವಿ.ವಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅಭಿನಂದಿಸಿದ್ದಾರೆ.

‘ಇದರ ಹಿಂದೆ ಸಂಘಟಿತ ಶ್ರಮವಿದೆ. ಕುಲಪತಿ, ಪ್ರಾಧ್ಯಾಪಕರು, ವಿ.ವಿ ಆಡಳಿತ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕುಲಪತಿ ಪ್ರೊ.ಹೇಮಂತಕುಮಾರ್ ನೇತೃತ್ವದಲ್ಲಿ ವಿ.ವಿ. ಇನ್ನಷ್ಟು ಸಾಧನೆ ಮಾಡಲಿ’ ಎಂದು ಪ್ರಕಟಣೆಯಲ್ಲಿ ಆಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.