ಶ್ರವಣಬೆಳಗೊಳ: ಹೋಬಳಿಯ ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಕಲ್ಲಪ್ಪ ಮಠಕ್ಕೆ ಭಕ್ತರ ಆಹ್ವಾನದ ಮೇರೆಗೆ ಆಗಮಿಸಿದ ಬೆಂಗಳೂರಿನ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ನೂತನ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿಗೆ ಭಕ್ತರು ಪೂರ್ಣ ಕುಂಭ ಸ್ವಾಗತ ನೀಡಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪಿ.ಕೆ.ಮಂಜೇಗೌಡ ಮಾತನಾಡಿ, ‘ಕೊರಕಲ್ಲಪ್ಪ ಮಠವು ಈ ಭಾಗದ ಎಲ್ಲಾ ವರ್ಗಗಳ ಸಮುದಾಯದವರ ಶ್ರದ್ಧಾ ಭಕ್ತಿ, ಅಪಾರ ನಂಬಿಕೆಯ ಕ್ಷೇತ್ರವಾಗಿ ಬೆಳೆಯಬೇಕಾಗಿದೆ. ಇಲ್ಲಿ ಹಿಂದುಳಿದ ಗ್ರಾಮಗಳಿದ್ದು, ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ತುಂಬಾ ತೊಂದರೆಯಿದೆ. ಸ್ವಾಮೀಜಿಯವರು ಇತ್ತ ಗಮನ ಹರಿಸಿ ತಮ್ಮ ಸಂಸ್ಥೆಯಿಂದ ಈ ಭಾಗದಲ್ಲಿ ಉಚಿತ ವಸತಿ ಹಾಸ್ಟೆಲ್, ವಿದ್ಯಾ ಕೇಂದ್ರಗಳನ್ನು ತೆರೆಯಬೇಕು’ ಎಂದು ಮನವಿ ಮಾಡಿದರು.
ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಇದೊಂದು ಅದ್ಭುತ ಶಕ್ತಿಯ ಮಹಾ ಕ್ಷೇತ್ರವಾಗಿರುವುದರಿಂದ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಸಂಕಲ್ಪವನ್ನು ಈ ಭಾಗದ ಜನತೆ ಮಾಡಬೇಕು. ಈ ಕ್ಷೇತ್ರದಲ್ಲಿ ಉಚಿತ ಹಾಸ್ಟೆಲ್ ಮತ್ತು ವಿದ್ಯಾಕೇಂದ್ರಗಳನ್ನು ತೆರೆಯುವ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಜನತೆಯ ಅಪೇಕ್ಷೆಯಂತೆ ಮುಂದೆ ತೀರ್ಮಾನಿಸಲಾಗುತ್ತದೆ’ ಎಂದು ಹೇಳಿದರು.
ಮೆರವಣಿಗೆ: ನಾಗನಹಳ್ಳಿಯಿಂದ ಸ್ವಾಮೀಜಿಯನ್ನು ಭವ್ಯ ಮೆರವಣಿಗೆಯ ಮೂಲಕ ಕೊರಕಲ್ಲಪ್ಪ ಮಠದ ಕ್ಷೇತ್ರದ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿಗೆ ಕರೆ ತರಲಾಯಿತು.
ಚಿದಾನಂದ ಸ್ವಾಮೀಜಿ, ಅಘಲಯದ ಕರುಣಾನಂದ ಸ್ವಾಮೀಜಿ, ಗ್ರಾಮ ಪಂಚಾಯಿತಿ ಸದಸ್ಯರರಾದ ಡಿ.ಎ.ದೊಡ್ಡೇಗೌಡ, ಕುಮಾರ, ಮುಖಂಡರಾದ ಎ.ಟಿ.ದೇವರಾಜು ಬಾಳಪ್ಪ, ಮಿಲಿಟರಿ ರಾಮಣ್ಣ, ಲತಾ ರಾಜಶೇಖರ, ವಕೀಲ ರಾಘವೇಂದ್ರ, ರೇಣುಕಾ ದಿವಾಕರ್, ಬಸವರಾಜು, ನಿಂಗೇಗೌಡ, ಸುಬ್ರಹ್ಮಣ್ಯ ಮಂಜಣ್ಣ, ಮಂಜೇಗವಡ, ನಾಗರಾಜು, ವಾಸು, ಕುಮಾರಸ್ವಾಮಿ, ಮಲ್ಲೇಶ, ಎಚ್.ಎಂ.ಶಿವಣ್ಣ, ರಂಗೇಗೌಡ, ಬಿ.ರಾಘವೇಂದ್ರ, ಮಲ್ಲೇಶ, ಕಿರಣ್, ಪ್ರಸನ್ನ, ರಘು, ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.