ADVERTISEMENT

ಮೈಸೂರು ದಸರಾ: ಪ್ರದರ್ಶನವೂ ಇಲ್ಲ; ಸಿಬ್ಬಂದಿಗೆ ಕೆಲಸವೂ ಇಲ್ಲ!

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದಿಂದ ದುಂದುವೆಚ್ಚ ಆರೋಪ, ಅಸ್ತಿತ್ವದ ಬಗ್ಗೆ ಪ್ರಶ್ನೆ

ಕೆ.ಓಂಕಾರ ಮೂರ್ತಿ
Published 25 ಸೆಪ್ಟೆಂಬರ್ 2020, 1:52 IST
Last Updated 25 ಸೆಪ್ಟೆಂಬರ್ 2020, 1:52 IST
ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ದ್ವಾರ (ಎಡಚಿತ್ರ). ನಿರುಪಯುಕ್ತವಾಗಿರುವ ಮಕ್ಕಳ ಉದ್ಯಾನ
ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ದ್ವಾರ (ಎಡಚಿತ್ರ). ನಿರುಪಯುಕ್ತವಾಗಿರುವ ಮಕ್ಕಳ ಉದ್ಯಾನ   

ಮೈಸೂರು: ಸರಳವಾಗಿ ದಸರಾ ಮಹೋತ್ಸವ ಆಯೋಜಿಸುತ್ತಿರುವ ಕಾರಣ ಈ ಬಾರಿ ವಸ್ತುಪ್ರದರ್ಶನವೂ ನಡೆಯದೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ (ಕೆಇಎ) ಯಾವುದೇ ಕೆಲಸ ಇಲ್ಲದಂತಾಗಿದೆ.

13 ಕಾಯಂ ನೌಕರರು ಹಾಗೂ ಭದ್ರತಾ ಸಿಬ್ಬಂದಿ ಸೇರಿ ಸುಮಾರು 53 ಮಂದಿ ಗುತ್ತಿಗೆ ಕಾರ್ಮಿಕರು ಇಲ್ಲಿದ್ದಾರೆ. ಉದ್ಯಾನ ಹಾಗೂ ಇತರ ನಿರ್ವಹಣೆ ಹೊರತುಪಡಿಸಿ ಬಹುತೇಕರಿಗೆ ಕಳೆದ 9 ತಿಂಗಳಿನಿಂದ ಪ್ರಮುಖ ಕೆಲಸ ಇಲ್ಲ. ಅವರ ವೇತನಕ್ಕೆಂದು ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ವ್ಯಯಿಸಲಾಗುತ್ತಿದೆ.

ಕೋವಿಡ್‌–19ನಿಂದಾಗಿ ರಾಜ್ಯ ಸರ್ಕಾರವು ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿದ್ದು, ಈ ಸಮಯದಲ್ಲಿ ದುಂದುವೆಚ್ಚಕ್ಕೆ ಕಾರಣವಾಗಿರುವ ಪ್ರಾಧಿಕಾರದ ಅಸ್ತಿತ್ವದ ಬಗ್ಗೆ ಸಾರ್ವಜನಿಕರು, ನಿವೃತ್ತ ನೌಕರರು ಪ್ರಶ್ನೆ ಎತ್ತಿದ್ದಾರೆ.

ADVERTISEMENT

‘ಇಲ್ಲಿರುವ ಏಳು ಜನ ‘ಡಿ’ ದರ್ಜೆ ನೌಕರರಿಗೇ ಕೆಲಸ ಇಲ್ಲ. ಮತ್ತೆ ಇಬ್ಬರು ನಿವೃತ್ತ ನೌಕರರನ್ನು ತೆಗೆದುಕೊಳ್ಳಲಾಗಿದೆ. ತಮಗೆ ಬೇಕಾದ ಗುತ್ತಿಗೆದಾರರ ಮೂಲಕ ಕಾಮಗಾರಿ ಕೈಗೊಂಡಿದ್ದಾರೆ. ಗುತ್ತಿಗೆ ಮೇಲೆ ಟ್ಯಾಕ್ಸಿ ಪಡೆಯಲಾಗಿದೆ. ದುಂದುವೆಚ್ಚ ಮಾಡಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪ್ರಾಧಿಕಾರದ ನಿವೃತ್ತ ನೌಕರರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲ್ಲದೇ; ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಮ್ಯಾನೇಜರ್‌, ಜೂನಿಯರ್‌ ಎಂಜಿನಿಯರ್‌ (2), ಲೆಕ್ಕಾ ಧಿಕಾರಿ, ಕ್ಯಾಷಿಯರ್‌ ಕೂಡ ಇದ್ದಾರೆ.

‘ಕಾಯಂ ನೌಕರರಿಗೆ ಸರ್ಕಾರದಿಂದಲೇ ವೇತನ ಬರಲಿದೆ. ಗುತ್ತಿಗೆ ಸಿಬ್ಬಂದಿಗೆ ಪ್ರಾಧಿಕಾರದಲ್ಲಿರುವ ಹಣವನ್ನೇ ನೀಡುತ್ತಿದ್ದೇವೆ. ಎಲ್ಲಾ ಸೇರಿ ವರ್ಷಕ್ಕೆ ₹ 1 ಕೋಟಿ ಖರ್ಚಾಗುತ್ತಿದೆ’ ಎಂದು ಹೇಳುತ್ತಾರೆ ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಒ ಬಿ.ಆರ್‌.ಗಿರೀಶ್‌.

ವಿದ್ಯುತ್‌, ನೀರಿನ ಶುಲ್ಕ, ಸ್ವಚ್ಛತೆ, ಉದ್ಯಾನ ಹಾಗೂ ಕಟ್ಟಡಗಳ ನಿರ್ವಹಣೆಗೆಂದು ಪ್ರತಿ ತಿಂಗಳು ಸುಮಾರು ₹ 10 ಲಕ್ಷಕ್ಕೂ ಅಧಿಕ ಹಣ ವ್ಯಯಿಸಲಾಗುತ್ತಿದೆ.

‘ನಾನು ಕೋವಿಡ್‌ ನಿರ್ವಹಣೆಗೂ ನಿಯೋಜನೆಗೊಂಡಿದ್ದೇನೆ. ಭದ್ರತಾ ಸಿಬ್ಬಂದಿ ಬೇಕೇಬೇಕು. ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಒಂದೊಂದು ಪಾಳಿಯಲ್ಲಿ 11 ಮಂದಿ ಇರುತ್ತಾರೆ. ಪ‍್ರಾಧಿಕಾರದ ಆಸ್ತಿಯನ್ನು ಉಳಿಸಿಕೊಂಡು ನಿರ್ವಹಣೆ ಮಾಡಬೇಕಲ್ಲವೇ? ಹಾಗೆಯೇ, ಉದ್ಯಾನ ನಿರ್ವಹಣೆ, ಸ್ವಚ್ಛತೆಗೆ ಸಿಬ್ಬಂದಿ ಬೇಕಲ್ಲವೇ’ ಎಂದು ಪ‍್ರತಿಕ್ರಿಯಿಸಿದರು.

80 ಎಕರೆ ಪ್ರದೇಶದಲ್ಲಿರುವ ಹಲವಾರು ಕಟ್ಟಡಗಳು, ಸೌಲಭ್ಯಗಳು ನಿರುಪಯುಕ್ತವಾಗಿವೆ. ಮಕ್ಕಳ ಉದ್ಯಾನವನ್ನು ಸಿಂಗಾರ ಮಾಡಿದ್ದರೂ ಬಳಕೆಗೆ ಸಿಗುತ್ತಿಲ್ಲ. ಸುಮಾರು ₹ 3.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ‘ಕಾವೇರಿ ಆರ್ಟ್‌ ಗ್ಯಾಲರಿ’ ಕನ್ನಡ ಕಾರಂಜಿ ಸದುಪಯೋಗವಾಗುತ್ತಿಲ್ಲ.

ವಸ್ತುಪ್ರದರ್ಶನ ಆಯೋಜನೆಗೆಂದು ಪ್ರಾಧಿಕಾರಕ್ಕೆ ಸರ್ಕಾರವು 1996ರಲ್ಲಿ ಈ ಜಾಗವನ್ನು 30 ವರ್ಷಗಳ ಅವಧಿಗೆ ಬೋಗ್ಯಕ್ಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.