ADVERTISEMENT

ಬಿಜೆಪಿ ಅಲೆಗೆ ಬೇರೆಯವರು ಉಳಿಯೋಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 12:53 IST
Last Updated 8 ಜೂನ್ 2022, 12:53 IST
ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ಬಿಜೆಪಿ ಆಯೋಜಿಸಿದ್ದ ಮತದಾರರ ಸಭೆಯಲ್ಲಿ ಶಾಸಕ ಎಲ್. ನಾಗೇಂದ್ರ, ಮುಖಂಡ ಸಿದ್ದರಾಜು, ಸಚಿವ ನಾರಾಯಣಗೌಡ, ಶಾಸಕ ಎಸ್.ಎ. ರಾಮದಾಸ್, ಮೈ.ವಿ. ರವಿಶಂಕರ್, ಸಚಿವ ಎಸ್.ಟಿ. ಸೋಮಶೇಖರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ನಗರ ಘಟಕದ ಅಧ್ಯಕ್ಷ ಟಿ.ಎಸ್. ಶ್ರೀವತ್ಸ, ಸಂಸದ ಪ್ರತಾಪ ಸಿಂಹ, ಮುಖಂಡರಾದ ರಾಜೇಂದ್ರ ಹಾಗೂ ಜಗದೀಶ ಹಿರೇಮನಿ ಭಾಗವಹಿಸಿದ್ದರು/ ಪ್ರಜಾವಾಣಿ ಚಿತ್ರ
ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ಬಿಜೆಪಿ ಆಯೋಜಿಸಿದ್ದ ಮತದಾರರ ಸಭೆಯಲ್ಲಿ ಶಾಸಕ ಎಲ್. ನಾಗೇಂದ್ರ, ಮುಖಂಡ ಸಿದ್ದರಾಜು, ಸಚಿವ ನಾರಾಯಣಗೌಡ, ಶಾಸಕ ಎಸ್.ಎ. ರಾಮದಾಸ್, ಮೈ.ವಿ. ರವಿಶಂಕರ್, ಸಚಿವ ಎಸ್.ಟಿ. ಸೋಮಶೇಖರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ನಗರ ಘಟಕದ ಅಧ್ಯಕ್ಷ ಟಿ.ಎಸ್. ಶ್ರೀವತ್ಸ, ಸಂಸದ ಪ್ರತಾಪ ಸಿಂಹ, ಮುಖಂಡರಾದ ರಾಜೇಂದ್ರ ಹಾಗೂ ಜಗದೀಶ ಹಿರೇಮನಿ ಭಾಗವಹಿಸಿದ್ದರು/ ಪ್ರಜಾವಾಣಿ ಚಿತ್ರ   

ಮೈಸೂರು: ‘ದಕ್ಷಿಣ ಪದವೀಧರರ ಕ್ಷೇತ್ರದ ಎಲ್ಲ ಜಿಲ್ಲೆಗಳಲ್ಲೂ‌ ಬಿಜೆಪಿಯ ಅಲೆ ಎದ್ದಿದ್ದು, ಅದರಲ್ಲಿ ಬೇರೆಯವರು ಉಳಿಯುವುದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ರಾಜೇಂದ್ರ ಕಲಾಮಂದಿರದಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಬುಧವಾರ ಆಯೋಜಿಸಿದ್ದ ಮತದಾರರ ಸಭೆಯಲ್ಲಿ ಅವರು ಮಾತನಾಡಿದರು.

‘ಬದಲಾಗುತ್ತಿರುವ ಜಗತ್ತಿಗೆ ತಕ್ಕಂತೆ ಚರ್ಚಿಸುವ ವಿಧಾನಪರಿಷತ್ ‌ಸದಸ್ಯರು ಬೇಕು. ಇದಕ್ಕಾಗಿ ‌ಪದವೀಧರರು ಈ ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಅಧಿವೇಶನದಲ್ಲಿ ದನಿ ಎತ್ತಲು ಅವಕಾಶ ಕೊಡಬೇಕು’ ಎಂದು ಕೋರಿದರು.

ADVERTISEMENT

ಮಹಾರಾಜರ ಕೊಡುಗೆ ಅಪಾರ:

ನಾಡಿಗೆ ಮೈಸೂರು ಮಹಾರಾಜರು ನೀಡಿದ ಕೊಡುಗೆ ನೆನೆದ ಅವರು, ‘ಮೈಸೂರು ಮಹಾರಾಜರು ಹಾಕಿದ ಭದ್ರ ಅಡಿಪಾಯದಿಂದಾಗಿ ಕರ್ನಾಟಕವನ್ನು ಕಟ್ಟಲು ಸಾಧ್ಯವಾಗಿದೆ. ಅವರನ್ನು ನಾವೆಂದಿಗೂ ಮರೆಯಲಾಗದು. ರಾಜ್ಯದಲ್ಲಿ ಅತಿ ಹೆಚ್ಚು ವೈದ್ಯಕೀಯ, ತಾಂತ್ರಿಕ ಕಾಲೇಜುಗಳು ಇರುವುದು ರಾಜರ ಕಾರಣದಿಂದಲೆ. ಎಲ್ಲ ಪ್ರಗತಿಯೂ ಪ್ರಾರಂಭವಾಗಿದ್ದು ಮೈಸೂರಿನಿಂದಲೇ. ಈ ಕಾರಣದಿಂದಾಗಿಯೇ ಮೈಸೂರಿನಲ್ಲಿ ಪ್ರಗತಿಪರ ಹಾಗೂ ಪ್ರಜ್ಞಾವಂತಿಕೆ‌ ಹೊಂದಿರುವ ಜನರಿದ್ದಾರೆ’ ಎಂದರು.

‘ಬೆಂಗಳೂರಿನ ಹೊರಗೆ ಕರ್ನಾಟಕದ ಬೆಳವಣಿಗೆ ಆಗಬೇಕು ಎನ್ನುವುದು ನಮ್ಮ ಸರ್ಕಾರದ ಉದ್ದೇವಾಗಿದೆ. 2ನೇ ಹಂತದ ನಗರಗಳಲ್ಲಿ ಮೈಸೂರಿನ‌ ಅಭಿವೃದ್ಧಿ ಬಹಳ ಮುಖ್ಯವಾದುದು. ಇಲ್ಲಿ ಕೈಗಾರಿಕೆಗೆ ಚೇತರಿಕೆ ನೀಡುವ ಉದ್ದೇಶದಿಂದ ವಿಮಾನನಿಲ್ದಾಣ ವಿಸ್ತರಣೆಗೆ ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಇಲ್ಲಿಗೆ ಬರುವಂತಾಗಲು ಕ್ರಮ ವಹಿಸಲಾಗಿದೆ. ಕೈಗಾರಿಕಾ ಟೌನ್‌ಶಿಪ್ ಅಭಿವೃದ್ಧಿಪಡಿಸುವುದಕ್ಕೂ ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಕೌಶಲ ಅಭಿವೃದ್ಧಿ ಕಾರ್ಯಕ್ರಮ:

‘ಕೌಶಲವುಳ್ಳ ಮಾನವ ಸಂಪನ್ಮೂಲ ರೂಪಿಸುವುದು ನಮ್ಮ ಉದ್ದೇಶವಾಗಿದೆ. ಪದವೀಧರರ ಅನುಕೂಲಕ್ಕಾಗಿ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿದ್ದೇವೆ. ರಾಜ್ಯದಲ್ಲಿ 1.50 ಲಕ್ಷ ಯುವಕರಿಗೆ ಈ ವರ್ಷ ಕೌಶಲ ತರಬೇತಿ ಕಾರ್ಯಕ್ರಮ ನಡೆಸುತ್ತಿದ್ದೇವೆ’ ಎಂದರು.

‘ಆರ್ಥಿಕತೆ ಬೆಳೆದರೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತದೆ. ಹೀಗಾಗಿ, ಆ ಕ್ಷೇತ್ರಕ್ಕೆ ಆದ್ಯತೆ ಕೊಡಲಾಗುತ್ತಿದೆ. ಕೃಷಿಯಲ್ಲಿ ಶೇ 1ರಷ್ಟು ಅಭಿವೃದ್ಧಿಯಾದರೆ ಉತ್ಪಾದನಾ ವಲಯದಲ್ಲಿ ಶೇ 4ರಷ್ಟು ಪ್ರಗತಿಯಾಗುತ್ತದೆ ಮತ್ತು ಸೇವಾ ಕ್ಷೇತ್ರದಲ್ಲಿ ಶೇ 10ರಷ್ಟು ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಅಭ್ಯರ್ಥಿ ಮೈ.ವಿ.‌ ರವಿಶಂಕರ್ ಮಾತನಾಡಿ ಬೆಂಬಲ ಕೋರಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಸಚಿವ ನಾರಾಯಣಗೌಡ, ಶಾಸಕರಾದ ಎಲ್. ನಾಗೇಂದ್ರ, ಎಸ್.ಎ. ರಾಮದಾಸ್, ಹರ್ಷವರ್ಧನ್, ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ, ಸಂಸದ ಪ್ರತಾಪ ಸಿಂಹ, ಮೇಯರ್‌ ಸುನಂದಾ ಪಾಲನೇತ್ರ, ಬಿಜೆ‍ಪಿ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ನಗರ ಘಟಕದ ಅಧ್ಯಕ್ಷ ಟಿ.ಎಸ್. ಶ್ರೀವತ್ಸ, ಮುಖಂಡ ಸಿದ್ದರಾಜು ಮೊದಲಾದವರು ಪಾಲ್ಗೊಂಡಿದ್ದರು.

‘ಮುಡಾ’ ಅಧ್ಯಕ್ಷ ಎಚ್.ವಿ. ರಾಜೀವ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.